– ಪ್ರಜ್ವಲ್ ರೇವಣ್ಣಗೆ ಮೈತ್ರಿ ಟಿಕೆಟ್?
– ಕಾಂಗ್ರೆಸ್‌ನಿಂದ ಶ್ರೇಯಸ್ ಪಟೇಲ್ ಕಣಕ್ಕೆ
ಹಾಸನ: ಲೋಕಸಭಾ ಕ್ಷೇತ್ರ ಜೆಡಿಎಸ್ (JDS) ಪ್ರತಿಷ್ಠೆಯ ಕಣ. 2 ದಶಕ ಜೆಡಿಎಸ್ ತೆಕ್ಕೆಯಲ್ಲಿರುವ ಕ್ಷೇತ್ರವನ್ನು ವಶಕ್ಕೆ ಪಡೆಯಲು ಆಡಳಿತಾರೂಢ ಕಾಂಗ್ರೆಸ್ ಶ್ರಮಿಸುತ್ತಿದೆ. ದೊಡ್ಡ ಗೌಡ್ರ ಕುಟುಂಬದ ಭದ್ರಕೋಟೆಯಾಗಿರುವ ಹಾಸನದಲ್ಲಿ ಹೆಚ್.ಡಿ.ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ಮತ್ತೆ ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ನಿಂದ (Congress) ಈಗಾಗಲೇ ಟಿಕೆಟ್ ಘೋಷಣೆಯಾಗಿದ್ದು, ಶ್ರೇಯಸ್ ಪಟೇಲ್ ಅವರನ್ನು ಕಣಕ್ಕಿಳಿಸಲಾಗಿದೆ.
Advertisement
2019 ರ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹೀನಾಯ ಸೋಲನುಭವಿಸಿತ್ತು. ಪಕ್ಷ ಸ್ಪರ್ಧಿಸಿದ್ದ ಕ್ಷೇತ್ರಗಳೆಲ್ಲ ಕೈಕೊಟ್ಟರೂ, ದೊಡ್ಡ ಗೌಡ್ರ ಕುಟುಂಬದ ಕೈಹಿಡಿದ ಏಕೈಕ ಕ್ಷೇತ್ರ ಹಾಸನ. ಕಳೆದ ಬಾರಿ ಲೋಕಸಭಾ ಚುನಾವಣೆ ನಡೆಯುವ ಸಂದರ್ಭದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವಿತ್ತು. ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ (H.D.Deve Gowda) ಮೊಮ್ಮಗ ಪ್ರಜ್ವಲ್ ರೇವಣ್ಣ ಗೆಲುವು ಸಾಧಿಸಿ ಪಾರ್ಲಿಮೆಂಟ್ ಪ್ರವೇಶಿಸಿದ್ದರು. ಹಾಸನ ಲೋಕಸಭೆ (Hassan Lok Sabha) ಕ್ಷೇತ್ರದಿಂದ ಮೊದಲ ಬಾರಿಗೆ ಪ್ರಜ್ವಲ್ ರೇವಣ್ಣ ಆಯ್ಕೆಯಾಗಿದ್ದರು. ಈಗ ಮತ್ತೆ ಚುನಾವಣೆ ಸಮೀಪಿಸುತ್ತಿದೆ. ಇದನ್ನೂ ಓದಿ: Lok Sabha 2024: ಬಿಜೆಪಿ ಭದ್ರಕೋಟೆ ಒಡೆಯುತ್ತಾ ‘ಕೈ’?
Advertisement
Advertisement
ಕ್ಷೇತ್ರದ ಪರಿಚಯ
ಸ್ವಾತಂತ್ರ‍್ಯ ನಂತರ ಚಿಕ್ಕಮಗಳೂರು ಜಿಲ್ಲೆಯನ್ನೂ ಒಳಗೊಂಡು 1951 ರಲ್ಲಿ ರೂಪಗೊಂಡ ಹಾಸನ ಲೋಕಸಭಾ ಕ್ಷೇತ್ರ ಕಳೆದ ಹದಿನೇಳು ಚುನಾವಣೆಯಲ್ಲೂ ರಾಜ್ಯದ ಗಮನವನ್ನು ಸೆಳೆದಿದೆ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ 60 ವರ್ಷ ರಾಜಕೀಯವಾಗಿ ಬೆಂಬಲ ನೀಡಿರುವ ಹಾಸನ ಜಿಲ್ಲೆಯಿಂದ ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಕಳೆದ ಸಲ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪುತ್ರ ಹಾಗೂ ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಕ್ಷೇತ್ರ ತ್ಯಾಗ ಮಾಡಿದರು. ಮೈತ್ರಿ ಅಭ್ಯರ್ಥಿಯಾಗಿ ಮೊದಲ ಬಾರಿಗೆ ಸ್ಪರ್ಧಿಸಿದ್ದ ಪ್ರಜ್ವಲ್ ರೇವಣ್ಣ ಮೊದಲ ಗೆಲುವು ಸಾಧಿಸಿದ್ದರು.
Advertisement
ಎಷ್ಟು ವಿಧಾನಸಭಾ ಕ್ಷೇತ್ರಗಳಿವೆ?
ಹಾಸನ ಲೋಕಸಭಾ ಕ್ಷೇತ್ರವು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಹಾಸನ, ಬೇಲೂರು, ಅರಸೀಕೆರೆ, ಅರಕಲಗೂಡು, ಶ್ರವಣಬೆಳಗೊಳ, ಸಕಲೇಶಪುರ-ಆಲೂರು-ಕಟ್ಟಾಯ, ಹೊಳೆನರಸೀಪುರ, ಕಡೂರು ಕ್ಷೇತ್ರಗಳು ಇದರ ವ್ಯಾಪ್ತಿಗೆ ಒಳಪಡುತ್ತವೆ.
ಒಟ್ಟು ಮತದಾರರು ಎಷ್ಟು?
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಮತದಾರರ ಸಂಖ್ಯೆ 17,01,650 ಇದೆ. ಪುರುಷರು – 8,51,100 ಹಾಗೂ ಮಹಿಳೆಯರು – 8,50,500 ಇದ್ದಾರೆ. ಇದನ್ನೂ ಓದಿ: Lok Sabha 2024: ಬೀದರ್‌ನಲ್ಲಿ ಬಿಜೆಪಿಗೆ ಮೈತ್ರಿ ಬಲ?- ಕಾಂಗ್ರೆಸ್‌ಗೆ ವರವಾಗುತ್ತಾ ‘ಕಮಲ’ ಟಿಕೆಟ್ ಒಳಜಗಳ?
ಕಳೆದ ಚುನಾವಣೆಯಲ್ಲಿ ಏನಾಗಿತ್ತು?
2019 ರಲ್ಲಿ ನಡೆದ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಮೈತ್ತಿ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಪ್ರಜ್ವಲ್ ರೇವಣ್ಣ ಗೆಲುವು ದಾಖಲಿಸಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದರು. ಈ ಅವಧಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರವು ರಾಜ್ಯದಲ್ಲಿ ಚುನಾವಣೆ ಎದುರಿಸಿದ್ದವು. ಜೆಡಿಎಸ್ ಭದ್ರಕೋಟೆಯಲ್ಲಿ ಕಾಂಗ್ರೆಸ್ ಬೆಂಬಲದಿಂದ ಸಂಸದ ಪ್ರಜ್ವಲ್ ರೇವಣ್ಣ 1,41,224 ಮತಗಳ ಅಂತರದಿಂದ ಜಯಗಳಿಸಿದ್ದರು. ಇವರ ವಿರುದ್ಧ ಬಿಜೆಪಿಯಿಂದ ಮಾಜಿ ಸಚಿವ ಎ.ಮಂಜು ಸ್ಪರ್ಧಿಸಿ ಪರಾಭವಗೊಂಡಿದ್ದರು. ಮೈತ್ರಿ ಸರ್ಕಾರವಿದ್ದಿದ್ದರಿಂದ ಮತಗಳ ಅಂತರ ಹೆಚ್ಚಾಗಿದೆ ಎಂಬ ಲೆಕ್ಕಾಚಾರವೂ ಆಗ ಸದ್ದು ಮಾಡಿತ್ತು.
ಈ ಬಾರಿಯ ಆಕಾಂಕ್ಷಿಗಳು ಯಾರು?
2019 ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸಿದ್ದವು. ಆದರೆ ಈ ಸಲ ಉಲ್ಟಾ ಆಗಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯಾಗಿವೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿಯಾಗಿ ಮತ್ತೆ ಸಂಸದ ಪ್ರಜ್ವಲ್ ರೇವಣ್ಣ ಕಣ್ಣಕ್ಕಿಳಿಯಬಹುದು ಎನ್ನಲಾಗುತ್ತಿದೆ. ಅವರನ್ನು ಸೋಲಿಸಲು ಕಾಂಗ್ರೆಸ್ ತಂತ್ರ ಹೆಣೆದಿದೆ. ರಾಜಕೀಯವಾಗಿ ಬದ್ಧ ವೈರಿಗಳಾಗಿದ್ದ ಬಿಜೆಪಿಯ ಪ್ರೀತಂ ಗೌಡ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಇಬ್ಬರೂ ಒಂದಾದರೆ ಮಾತ್ರ ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಈ ಕ್ಷೇತ್ರದಲ್ಲಿ ಚುನಾವಣೆಗೆ ಕಣಕ್ಕಿಳಿಯಬಹುದು ಎನ್ನಲಾಗಿದೆ. ಬಿಜೆಪಿಯಿಂದಲೂ ಮಾಜಿ ಶಾಸಕ ಎ.ಟಿ.ರಾಮಸ್ವಾಮಿ, ಕಿರಣ್, ಸಿದ್ದೇಶ್ ನಾಗೇಂದ್ರ ಟಿಕೆಟ್ ಆಕಾಂಕ್ಷಿಗಳಾಗಿದ್ದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಟಿಕೆಟ್ ಸಿಗಲಿದೆ ಎಂದಿದ್ದಾರೆ. ಒಂದು ವೇಳೆ ಪ್ರಜ್ವಲ್ ರೇವಣ್ಣ ಅಭ್ಯರ್ಥಿಯಾದರೆ ಪ್ರೀತಂಗೌಡ & ಟೀಂ ಬೆಂಬಲ ನೀಡುವುದು ಬಹುತೇಕ ಅನುಮಾನವಾಗಿದೆ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದರೆ ಹಾಗೂ ನರೇಂದ್ರ ಮೋದಿ ಮತ್ತೆ ಪ್ರಧಾನ ಮಂತ್ರಿಯಾಗಬೇಕು ಎನ್ನುವ ಕಾರಣದಿಂದ ಪ್ರಜ್ವಲ್ ರೇವಣ್ಣ ಅವರನ್ನು ಬೆಂಬಲಿಸಬಹುದಾಗಿದೆ. ಕಾಂಗ್ರೆಸ್‌ನಿಂದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ಅತಿ ಕಡಿಮೆ ಮತಗಳ ಅಂತರದಲ್ಲಿ ಸೋತಿರುವ ಶ್ರೇಯಸ್ ಪಟೇಲ್ ಅವರನ್ನು ಕಣಕ್ಕಿಳಿಸಲಾಗಿದೆ.
ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಪಾರುಪತ್ಯ
ಹಾಸನ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಹಾಗೂ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಪಾರುಪತ್ಯ ಜೋರಾಗಿದೆ. ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಬಲಿಷ್ಠವಾಗಿದೆ. ಈಗ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡಿರುವುದು ಮತ್ತಷ್ಟು ಬಲತುಂಬಿದಂತಾಗಿದೆ. ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್‌ಗೆ ಅಗ್ನಿ ಪರೀಕ್ಷೆ ಎದುರಾಗಿದೆ. ಇದನ್ನೂ ಓದಿ: Lok Sabha 2024: ಕೋಟೆ ನಾಡಿಗೆ ಯಾರಾಗ್ತಾರೆ ಒಡೆಯಾ?
ಮೈತ್ರಿಯಿಂದ ಜೆಡಿಎಸ್‌ಗೆ ಲಾಭ?
ಜೆಡಿಎಸ್ ಭದ್ರಕೋಟೆಯಾಗಿರುವ ಹಾಸನ ಲೋಕಸಭಾ ಕ್ಷೇತ್ರವನ್ನು ಗೆಲ್ಲಲು ಜೆಡಿಎಸ್-ಬಿಜೆಪಿ ಒಂದಾಗಬೇಕಿದೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಐದು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಜೆಡಿಎಸ್‌ಗೆ ಕಾಂಗ್ರೆಸ್ ಪಕ್ಷವೇ ಎದುರಾಳಿಯಾಗಿದ್ದರು ಎರಡು ಕ್ಷೇತ್ರದಲ್ಲಿ ಮಾತ್ರ ‘ಕೈ’ ಶಾಸಕರು ಗೆದ್ದಿದ್ದಾರೆ. ಉಳಿದ ಆರರ ಪೈಕಿ ನಾಲ್ಕು ಕ್ಷೇತ್ರಗಳಲ್ಲಿ ಪ್ರಬಲ ಪೈಪೋಟಿ ನೀಡಿದೆ. ಇನ್ನೂ ಬಿಜೆಪಿಯಿಂದ ಎರಡು ಕ್ಷೇತ್ರಗಳಲ್ಲಿ ಶಾಸಕರು ಆಯ್ಕೆಯಾಗಿದ್ದು, ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಪ್ರೀತಂ ಗೌಡ ಕಡಿಮೆ ಮತಗಳ ಅಂತರದಲ್ಲಿ ಸೋತಿದ್ದು ತನ್ನದೇ ಆದ ಮತಬ್ಯಾಂಕ್ ಹೊಂದಿದೆ. ಹಿಂದಿನಿಂದಿಲೂ ಕಾಂಗ್ರೆಸ್-ಜೆಡಿಎಸ್-ಬಿಜೆಪಿ ಪಕ್ಷಗಳು ತೀವ್ರ ಪೈಪೋಟಿ ನೀಡುತ್ತಲೇ ಬಂದಿವೆ. ಆದರೆ ಹೆಚ್.ಡಿ.ದೇವೇಗೌಡರು ಪ್ರಧಾನಿಯಾದ ಬಳಿಕ ಜೆಡಿಎಸ್ ಪಾರಪತ್ಯ ಮೆರೆದಿದೆ. ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದ್ದು, ಜೆಡಿಎಸ್‌ಗೆ ಇದು ವರದಾನವಾಗುವ ಸಾಧ್ಯತೆಯಿದೆ. ಅಲ್ಲದೇ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಾಗಿದ್ದರಿಂದ ಪ್ರಜ್ವಲ್ ರೇವಣ್ಣ ಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದರು. ಹಾಸನದಲ್ಲಿ ಕಾಂಗ್ರೆಸ್‌ನಿಂದ ಪ್ರಬಲ ಆಕಾಂಕ್ಷಿಗಳು ಸ್ಪರ್ಧಿಸಲಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಜೆಡಿಎಸ್‌ಗೆ ಈ ಸಲ ಪ್ರಬಲ ಪೈಪೋಟಿ ಎದುರಾಗುವ ಸಾಧ್ಯತೆ ಇದೆ.
ಯಾವ ಅವಧಿಯಲ್ಲಿ ಯಾವ ಪಕ್ಷ ಗೆದ್ದಿತ್ತು?
2009: ಹೆಚ್.ಡಿ.ದೇವೇಗೌಡ – ಜೆಡಿಎಸ್ (2,91,113 ಗೆಲುವಿನ ಅಂತರ)
2014: ಹೆಚ್.ಡಿ.ದೇವೇಗೌಡ – ಜೆಡಿಎಸ್ (1,06,563)
2019: ಪ್ರಜ್ವಲ್ ರೇವಣ್ಣ – ಜೆಡಿಎಸ್ (1,41,224)
ಜಾತಿವಾರು ಲೆಕ್ಕಾಚಾರ
ಒಕ್ಕಲಿಗರು – 5,46,000
ಲಿಂಗಾಯತರು – 2,86,000
ಎಸ್ಸಿ/ಎಸ್ಟಿ – 3,25,000
ಮುಸ್ಲಿಂ – 1,16,000
ಕುರುಬರು – 1,65,000
ಇತರರು – 2,63,100