ಹರದನಹಳ್ಳಿ ದೇವೇಗೌಡರ ಅಡ್ಡಾದಲ್ಲಿ ಈಗ ಕದನ ಕುತೂಹಲ. ದೇಶಕ್ಕೆ ಪ್ರಧಾನಿಮಂತ್ರಿಯನ್ನ ಕಾಣಿಕೆಯಾಗಿ ಕೊಟ್ಟ ಜಿಲ್ಲೆಯಲ್ಲೀಗ ರಾಜಕೀಯ ಕಾಳಗ ಪಲ್ಲಟವಾಗಿದೆ. ಮಲೆನಾಡು, ಅರೆ ಮಲೆನಾಡು, ಬಯಲು ಸೀಮೆಗಳನ್ನ ಹೊಂದಿರುವ ಹಾಸನದಲ್ಲಿ ಹೇಮಾವತಿ ಜೀವ ನದಿ. ಈ ಹೇಮಾವತಿಯ ಒಡಲಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಗೌಡರ ರಾಜಕೀಯ ಗಾಲಿಯೂ ಉರುಳಿ ಹೋಗಿದೆ.
5 ಬಾರಿ ಹಾಸನ ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಬೀಗಿದ್ದ ಗೌಡರು 6ನೇ ಬಾರಿ ಹಾಸನದಿಂದ ಸ್ಪರ್ಧಿಸದೇ ತುಮಕೂರಿಗೆ ಹೋಗಿದ್ದಾರೆ. ಮೊಮ್ಮಗ ಪ್ರಜ್ವಲ್ ರಾಜಕೀಯ ಭವಿಷ್ಯಕ್ಕಾಗಿ ತಮ್ಮ ರಾಜಕೀಯ ಭವಿಷ್ಯದ ಕಡೇ ಆಟವನ್ನೇ ಸವಾಲಿಗಿಟ್ಟಿದ್ದಾರೆ ದೊಡ್ಡ ಗೌಡರು. ಕಳೆದ ಬಾರಿ ದೇವೇಗೌಡರ ವಿರುದ್ಧವೇ ತೊಡೆತಟ್ಟಿದ್ದ ಎ.ಮಂಜು ಈ ಬಾರಿ ಮೊಮ್ಮಗನ ವಿರುದ್ಧವೂ ತೊಡೆ ತಟ್ಟಿದ್ದಾರೆ. ಕಾಂಗ್ರೆಸ್‍ಗೆ ಗುಡ್‍ಬೈ ಹೇಳಿ ಬಿಜೆಪಿಯಿಂದ ಅಖಾಡಕ್ಕಿಳಿರುವುದು ಕುತೂಹಲ ಮೂಡಿಸಿದೆ. ಜೆಡಿಎಸ್ ಭದ್ರಕೋಟೆಯಾಗಿದ್ದರೂ, ಎರಡು ಕಡೆ ಕಮಲ ಅರಳಿರುವುದರಿಂದ ಏನೂ ಬೇಕಾದರೂ ಆಗಬಹುದು. ಒಕ್ಕಲಿಗ ಮತಗಳೇ ನಿರ್ಣಾಯಕವಾಗಿದ್ದರೂ, ಅಹಿಂದ ಮತಗಳನ್ನು ಪಡೆದರೂ ಸಾಕು ಅಭ್ಯರ್ಥಿ ಸುಲಭವಾಗಿ ಗೆದ್ದು ಬಿಡಬಹುದು.
Advertisement
Advertisement
ಹಾಸನ ಕ್ಷೇತ್ರದ ಮತದಾರರು: 16,29,587 ಒಟ್ಟು ಮತದಾರರನ್ನು ಹಾಸನ ಲೋಕ ಅಖಾಡ ಹೊಂದಿದೆ. ಇದರಲ್ಲಿ 8,07,188 ಮಹಿಳಾ ಮತದಾರರು ಮತ್ತು 8,22,399 ಪುರುಷ ಮತದಾರರಿದ್ದಾರೆ. ಒಕ್ಕಲಿಗ ಸಮುದಾಯ 5 ಲಕ್ಷ, ಎಸ್‍ಸಿ+ಎಸ್‍ಟಿ ಸಮುದಾಯ 3 ಲಕ್ಷ, ಲಿಂಗಾಯಿತ ಸಮುದಾಯ 2.50 ಲಕ್ಷ, ಮುಸ್ಲಿಂ ಸಮುದಾಯ 2 ಲಕ್ಷ, ಕುರುಬ ಸಮುದಾಯ 1.50 ಲಕ್ಷ ಮತ್ತು ಇತರೆ ಸಮುದಾಯ 2 ಲಕ್ಷ ಮಂದಿ ಇದ್ದಾರೆ.
Advertisement
2014ರ ಫಲಿತಾಂಶ: 2014ರ ಲೋಕ ಚುನಾವಣೆಯಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ದೇವೇಗೌಡರು 1,00,462(8.76%) ಮತಗಳ ಅಂತರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎ.ಮಂಜು ವಿರುದ್ಧ ಗೆಲುವು ಕಂಡಿದ್ದರು. ದೇವೇಗೌಡರು 5,09,841 (44.47%), ಎ.ಮಂಜು 4,09,378 (35.67%) ಮತ್ತು ಬಿಜೆಪಿಯ ಸಿ.ಎಚ್.ವಿಜಯಶಂಕರ್ 1,65,688 (14.44%) ಮತಗಳನ್ನು ಪಡೆದುಕೊಂಡಿದ್ದರು.
Advertisement
ಜೆಡಿಎಸ್ ಪ್ರಾಬಲ್ಯ: ಹಾಸನ ಒಟ್ಟು 8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, 6 ಕ್ಷೇತ್ರದಲ್ಲಿ ಜೆಡಿಎಸ್ ಮತ್ತು 2 ಕ್ಷೇತ್ರದಲ್ಲಿ ಬಿಜೆಪಿಯ ಶಾಸಕರಿದ್ದಾರೆ. ಹಾಸನ-ಪ್ರೀತಂಗೌಡ(ಬಿಜೆಪಿ), ಬೇಲೂರು – ಲಿಂಗೇಶ್(ಜೆಡಿಎಸ್), ಸಕಲೇಶಪುರ – ಹೆಚ್.ಕೆ.ಕುಮಾರಸ್ವಾಮಿ(ಜೆಡಿಎಸ್), ಅರಕಲಗೂಡು – ಎ.ಟಿ.ರಾಮಸ್ವಾಮಿ (ಜೆಡಿಎಸ್), ಹೊಳೇನರಸೀಪುರ – ಹೆಚ್.ಡಿ.ರೇವಣ್ಣ(ಜೆಡಿಎಸ್), ಶ್ರವಣಬೆಳಗೊಳ – ಸಿಎನ್ ಬಾಲಕೃಷ್ಣ (ಜೆಡಿಎಸ್), ಅರಸೀಕೆg- ಶಿವಲಿಂಗೇಗೌಡ (ಜೆಡಿಎಸ್) ಮತ್ತು ಕಡೂರು- ಬೆಳ್ಳಿ ಪ್ರಕಾಶ್ (ಬಿಜೆಪಿ) ಆಯ್ಕೆಯಾಗಿದ್ದಾರೆ.
ಕಣದಲ್ಲಿರುವ ಅಭ್ಯರ್ಥಿಗಳು
ಪ್ರಜ್ವಲ್ ರೇವಣ್ಣ : ದೇವೇಗೌಡರು ಮೊಮ್ಮಗನಿಗಾಗಿ ಕ್ಷೇತ್ರವನ್ನು ಬಿಟ್ಟುಕೊಟ್ಟ ಪರಿಣಾಮ ಪ್ರಜ್ವಲ್ ಕಣದಲ್ಲಿ ನಿಂತಿದ್ದಾರೆ.
ಪ್ಲಸ್ ಪಾಯಿಂಟ್: ಹಾಸನ ಜಿಲ್ಲೆಯ ಮೇಲೆ ಮಾಜಿ ಪ್ರಧಾನಿ ದೇವೇಗೌಡರ ಪಾರುಪತ್ಯ, ಹಿಡಿತವನ್ನು ಹೊಂದಿದ್ದಾರೆ. ತಂದೆ ಹೆಚ್.ಡಿ.ರೇವಣ್ಣ ಅವರೇ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಕೈಗೊಂಡಿರೋ ಅಭಿವೃದ್ಧಿ ಕಾರ್ಯಗಳು ಪ್ರಜ್ವಲ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಲಿವೆ. 6 ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರನ್ನು ಹೊಂದಿದ್ದು, ಹಾಸನದಲ್ಲಿ ಯುವ ಕಾರ್ಯಕರ್ತರ ಪಡೆಯನ್ನ ಕಟ್ಟಲಾಗಿದೆ. ಕಾಂಗ್ರೆಸ್, ಜೆಡಿಎಸ್ ಮೈತ್ರಿಯಾಗಿ ಒಟ್ಟಾಗಿ ಕಣಕ್ಕಿಳಿದಿರೋದು ಮತಗಳ ಕ್ರೋಢಿಕರಣ ಸಾಧ್ಯತೆಗಳಿವೆ. ಪ್ರಜ್ವಲ್ ರೇವಣ್ಣ ಚುನಾವಣೆಗೂ ಮುನ್ನವೇ ಕಾರ್ಯಕರ್ತರೊಂದಿಗಿನ ಒಡನಾಟ ಹೊಂದಿದ್ದು ಮತ್ತೊಂದು ಪ್ಲಸ್ ಪಾಯಿಂಟ್.
ಮೈನಸ್ ಪಾಯಿಂಟ್: ಕುಟುಂಬ ರಾಜಕಾರಣದ ಆರೋಪ ಹೊತ್ತಿರುವುದರ ಜೊತೆಗೆ ರಾಜಕೀಯ ಅನುಭವದ ಕೊರತೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಕಾಂಗ್ರೆಸ್, ಜೆಡಿಎಸ್ ಮೈತ್ರಿಯಲ್ಲಿ ಒಳಗೊಳಗೆ ಕುದಿಯುತ್ತಿರುವ ಅಸಮಾಧಾನ ಹೊಡೆತ ನೀಡಬಹುದು. ಎ.ಮಂಜು ಬಿಜೆಪಿಯಿಂದ ಪ್ರಬಲ ಅಭ್ಯರ್ಥಿ ಆಗಿರುವ ಕಾರಣ ನೇರ ಹಣಾಹಣಿ ನಡೆಯಲಿದೆ.
ಎ.ಮಂಜು: 2014ರ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ದೇವೇಗೌಡರ ವಿರುದ್ಧ ಸ್ಪರ್ಧಿಸಿ ಎ.ಮಂಜು ಸೋತಿದ್ದರು. ಮೈತ್ರಿ ಧರ್ಮ ಹಿನ್ನೆಲೆಯಲ್ಲಿ ಕಾಂಗ್ರೆಸ್ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಬಂಡಾಯದ ಬಾವುಟ ಹಾರಿಸಿ ಎ. ಮಂಜು ಬಿಜೆಪಿ ಸೇರ್ಪಡೆಗೊಂಡು ಕಮಲ ಹಿಡಿದು ಸ್ಪರ್ಧೆ ಮಾಡಿದ್ದಾರೆ.
ಪ್ಲಸ್ ಪಾಯಿಂಟ್: 2014ರಲ್ಲಿ ದೇವೇಗೌಡರ ವಿರುದ್ಧ ಸೋತ ಅನುಕಂಪದ ಅಲೆ ಕೆಲಸ ಮಾಡಬಹುದು. ಮೈತ್ರಿಯ ಸ್ಥಳೀಯ ಕಚ್ಚಾಟದ ಲಾಭ ಪಡೆಯಲು ಎ.ಮಂಜು ಪ್ರಯತ್ನಿಸುತ್ತಿದ್ದಾರೆ. ದೇವೇಗೌಡರ ಕುಟುಂಬ ಕಡು ವಿರೋಧಿಗಳು ಒಂದಾಗುವ ಲಕ್ಷಣಗಳು ಕಾಣುತ್ತಿವೆ. ಈ ಬಾರಿ 2 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು ಹೊಂದಿದ್ದು, ಮಾಜಿ ಸಿಎಂ ಯಡಿಯೂರಪ್ಪ ಬೆನ್ನಿಗೆ ನಿಂತಿರೋದು ಎ. ಮಂಜು ಅವರಿಗೆ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ.
ಮೈನಸ್ ಪಾಯಿಂಟ್: ಗ್ರಾಮಾಂತರ ಭಾಗದಲ್ಲಿ ಜೆಡಿಎಸ್ ಪ್ರಬಲವಾಗಿರೋದು ಮೊದಲ ಹೊಡೆತ. ಮೈತ್ರಿಯಿಂದಾಗಿ ಅಹಿಂದ ಮತಗಳು ಒಟ್ಟಾಗುವ ಆತಂಕ ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿದೆ. ಪ್ರಜ್ವಲ್ ಪರ ಸಚಿವರುಗಳು, ಶಾಸಕರು ದಂಡು ಪ್ರಚಾರ ನಡೆಸುತ್ತಿರೋದು. ಕಾಂಗ್ರೆಸ್ ಬಿಟ್ಟು ಕಡೇ ಕ್ಷಣದಲ್ಲಿ ಬಿಜೆಪಿಗೆ ಜಿಗಿದು ಅಭ್ಯರ್ಥಿಯಾಗಿದ್ದು ಆಂತರಿಕ ಅಸಮಾಧಾನದ ಬಿಸಿ ತಾಗುವ ಸಾಧ್ಯತೆಗಳಿವೆ.