ಹಾಸನ: ಕುಡಿಯಲು ಹಣವಿಲ್ಲದೇ ಮದ್ಯಪ್ರಿಯನೊಬ್ಬ ಮನೆಯಲ್ಲಿ ಇದ್ದ ಹಳೇ ಟಿವಿಯನ್ನು ಮಾರಲು ಹೊರಟಿರುವ ಘಟನೆ ಹಾಸನ ನಗರದ ವಲ್ಲಭಾಯಿ ರಸ್ತೆಯಲ್ಲಿ ನಡೆದಿದೆ.
ಕೊರೊನಾ ಲಾಕ್‍ಡೌನ್‍ನಿಂದು ಸುಮಾರು 42 ದಿನಗಳ ಕಾಲ ಮುಚ್ಚಿದ್ದ ಮದ್ಯದಂಗಡಿಗಳು ಕಳೆದ ಸೋಮವಾರದಿಂದ ಓಪನ್ ಆಗಿವೆ. ಈ ಕಾರಣ ಮತ್ತೆ ಎಣ್ಣೆ ಕುಡಿಯಲು ಕುಡುಕರು ಇಲ್ಲಸಲ್ಲದ ಕಸರತ್ತುಗಳನ್ನು ಮಾಡುತ್ತಿದ್ದಾರೆ. ಕುಡಿಯಲು ಹಣವಿಲ್ಲದೆ ಮನೆಯ ವಸ್ತುಗಳನ್ನೇ ಮಾರಲು ಸಿದ್ಧವಾಗುತ್ತಿದ್ದಾರೆ.
ಅಂತಯೇ ಹಾಸನ ನಗರದ ವಲ್ಲಭಾಯಿ ರಸ್ತೆಯ ನಿವಾಸಿ ನಾಗರಾಜ್, ಕುಡಿಯಲು ಹಣವಿಲ್ಲ ಎಂದು ತಮ್ಮ ಮನೆಯಲ್ಲಿದ್ದ ಹಳೇ ಟಿವಿಯನ್ನು ಮಾರಲು ಹೋಗಿದ್ದಾನೆ. ಈ ವೇಳೆ ಟಿವಿಯನ್ನು ಎಲ್ಲಿಗೆ ತೆಗೆದುಕೊಂಡು ಹೋಗುತ್ತಿದ್ದೀಯಾ ಎಂದು ದಾರಿಹೋಕರು ಪ್ರಶ್ನಿಸಿದಾಗ ನಿಜಾಂಶ ಬಾಯಿಬಿಟ್ಟಿರುವ ಮದ್ಯಪ್ರಿಯ, ಲಾಕ್‍ಡೌನ್‍ನಿಂದ ಕೆಲಸವಿಲ್ಲ, ಸಂಬಳವಿಲ್ಲ, ಮದ್ಯ ಸೇವಿಸಲು ಹಣವಿಲ್ಲ. ಹಾಗಾಗಿ ಟಿವಿ ಮಾರಲು ಹೋಗುತ್ತಿದ್ದೇನೆ ಎಂದು ಉತ್ತರಿಸಿದ್ದಾನೆ.
ಮೇ 4 ರಂದು ರಾಜ್ಯಾದ್ಯಂತ ಲಾಕ್‍ಡೌನ್ ಸಡಿಲಿಕೆ ಮಾಡಲಾಗಿದ್ದು, ಈ ಬೆನ್ನಲ್ಲೇ ಮದ್ಯದಂಗಡಿಗಳು ಓಪನ್ ಆಗಿದ್ದವು. ಇದೇ ಸಂದರ್ಭದಲ್ಲಿ 42 ದಿನಗಳ ಕಾಲ ಮದ್ಯವಿಲ್ಲದೆ ಕಂಗಾಲಾಗಿದ್ದ ಎಣ್ಣೆಪ್ರಿಯರು ಬಿಸಿಲು ಎನ್ನದೇ ಸರತಿ ಸಾಲಿನಲ್ಲಿ ನಿಂತು ಮದ್ಯ ಖರೀದಿ ಮಾಡಿದ್ದರು. ಮೊದಲ ದಿನವೇ ಕರ್ನಾಟಕದಲ್ಲಿ 45 ಕೋಟಿ ಮೌಲ್ಯದ ಮದ್ಯ ಸೇಲ್ ಆಗಿತ್ತು.