ಹಾಸನ: ಗುಜರಾತಿನ ಇಬ್ಬರು ಮಾರ್ವಾಡಿಗಳ ಕೈಯಲ್ಲಿ ಸಿಕ್ಕಿ ದೇಶ ನಲುಗಿ ಹೋಗಿದೆ ಎಂದು ಶಾಸಕ ಲಿಂಗೇಶ್ ಕಿಡಿಕಾರಿದ್ದಾರೆ.
ಹಾಸನದ ಬೇಲೂರಿನಲ್ಲಿ ಮಾತನಾಡಿದ ಲಿಂಗೇಶ್, ಅಪರೇಷನ್ ಕಮಲದಲ್ಲಿ ತಮಗೆ ಐದು ಕೋಟಿ ಅಲ್ಲ ಐವತ್ತು ಕೋಟಿ ರೂಪಾಯಿ ಆಮಿಷ ಬಂದಿದ್ದು ನಿಜ. ಜೆಡಿಎಸ್ ರಾಜ್ಯಾಧ್ಯಕ್ಷರಿಗೂ ಸಹ ಅವರ ಪತ್ನಿ ಮುಖಾಂತರ ಆಮಿಷ ಒಡ್ಡಲಾಗಿತ್ತು. ಅಷ್ಟೇ ಅಲ್ಲ ಹೆಚ್.ಡಿ ರೇವಣ್ಣನವರಿಗೂ ಸಹ ಉಪ ಮುಖ್ಯಮಂತ್ರಿ ಸ್ಥಾನದ ಆಮಿಷ ನೀಡಲಾಗಿತ್ತು ಎಂದು ಹೊಸ ಬಾಂಬ್ ಸಿಡಿಸಿದರು. ಈ ಸಂದರ್ಭದಲ್ಲಿ ರೇವಣ್ಣ ಕೂಡ ಸಭೆಯಲ್ಲಿ ಹಾಜರಿದ್ದರು.
ಇಷ್ಟೆಲ್ಲ ಆಮಿಷಗಳನ್ನು ಒಡ್ಡಿದ ಸಾವಿರಾರು ಕೋಟಿ ಹಣದ ಮೂಲದ ಬಗ್ಗೆ ಬಿಜೆಪಿ ವಿರುದ್ಧ ಯಾವುದೇ ತನಿಖೆ ಮಾಡಲಿಲ್ಲ. ಆದರೆ ಕೇವಲ ಎಂಟು ಕೋಟಿಗಾಗಿ ಕಾಂಗ್ರೆಸ್ ನಾಯಕ ಡಿಕೆಶಿಯನ್ನು ಜೈಲಿಗೆ ಕಳುಹಿಸಿದ್ದಾರೆ. ಉತ್ತರ ಭಾರತದ ದಬ್ಬಾಳಿಕೆಯಿಂದ ದಕ್ಷಿಣ ಭಾರತೀಯರು ನಲುಗುವಂತಾಗಿದೆ. ಪಿವಿ ನರಸಿಂಹರಾವ್ ಮತ್ತು ಹೆಚ್.ಡಿ.ದೇವೇಗೌಡರು ಬಿಟ್ಟರೆ ಇನ್ಯಾರು ಪ್ರಧಾನಿಯಾಗಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಇವರ ದಬ್ಬಾಳಿಕಯಿಂದ ನಾವು ಹೊರಬರಬೇಕಿದೆ. ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಅಪಾರ ನಷ್ಟವಾಗಿದೆ. ರಾಜ್ಯದಿಂದ ಇಪ್ಪತ್ತೈದು ಸಂಸದರನ್ನು ಆಯ್ಕೆ ಮಾಡಿ ಕಳುಹಿಸಿದ್ದಾರೆ. ಆದರೆ ಬಿಜೆಪಿಯವರು ಒಂದು ಬಿಡಿಗಾಸು ಕೂಡ ನೀಡಿಲ್ಲ ಎಂದು ಹರಿಹಾಯ್ದ ಲಿಂಗೇಶ್ ಯಾವುದೇ ಕಾರಣಕ್ಕೂ ತಾವು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು.