ಹಾಸನಾಂಬೆ ಉತ್ಸವಕ್ಕೆ ದಿನಗಣನೆ – ಸಿದ್ಧತಾ ಕಾರ್ಯ ಸಾಗದ್ದಕ್ಕೆ ಭಕ್ತರ ಆಕ್ರೋಶ

Public TV
2 Min Read
HASANAMBA TEMPLE

ಹಾಸನ: ದಸರಾ ನಂತರ ನಡೆಯುವ ಹಾಸನದ ಹಾಸನಾಂಬೆ ಉತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಪ್ರತಿಬಾರಿಯಂತೆ ಈ ಬಾರಿಯೂ ಸಹ ಲಕ್ಷಾಂತರ ಭಕ್ತರು ಬರುವ ನಿರೀಕ್ಷೆ ಇದೆ. ಆದರೆ ನಗರದಲ್ಲಿ ರಸ್ತೆ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವ ಸಿದ್ಧತಾ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದ್ದು, ಭಕ್ತರ ಆತಂಕಕ್ಕೆ ಕಾರಣವಾಗಿದೆ.

ತಿಂಗಳು 17ರ ಗುರುವಾರ ದೇವಿಯ ಜಾತ್ರೆ ಮಹೋತ್ಸವ ಆರಂಭ ಆಗಲಿದ್ದು. ಅಂದೇ ಹಾಸನಾಂಬೆಯ ಗರ್ಭಗುಡಿಯ ಬಾಗಿಲು ತೆರೆಯಲಾಗುತ್ತದೆ. ಇದಕ್ಕೆ ಕೇವಲ 15 ದಿನಗಳು ಮಾತ್ರ ಬಾಕಿ ಇವೆ. ನಗರದಿಂದ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳೆಲ್ಲ ಹಾಳಾಗಿವೆ.

vlcsnap 2019 10 03 16h23m58s942

ರಸ್ತೆ ಕಾಮಗಾರಿ ಹಿನ್ನಲೆಯಲ್ಲಿ ವಾಹನ ಸವಾರರಿಗೆ ಅರ್ಧ ರಸ್ತೆಯಲ್ಲಿ ಮಾತ್ರ ಸಂಚರಿಸುವ ಅನಿವಾರ್ಯತೆ ಇದೆ. ಪರಿಣಾಮ ಇಡೀ ನಗರ ತುಂಬ ಇರುವ ರಸ್ತೆಗಳಲ್ಲಿ ಟ್ರಾಫಿಕ್ ಸಮಸ್ಯೆ ಕಾಡುತ್ತಿದೆ. ದೇವಾಲಯಕ್ಕೆ ಸಂಪರ್ಕದ ಬಿಎಂ ರಸ್ತೆ, ಹೊಸ ಲೈನ್ ರಸ್ತೆ, ಗೊರೂರು ವೃತ್ತ, ಸೇರಿದಂತೆ ನಾಲ್ಕು ಕಡೆಗಳಿಂದಲೂ ಸಹ ಸಂಚಾರ ಸುಗಮವಾಗಿಲ್ಲ. ರಸ್ತೆಗಳ ದುರಸ್ತಿ ಕಾರ್ಯ ಆಮೆ ಗತಿಯಲ್ಲಿ ಸಾಗುತ್ತಿದೆ.

ಎನ್ ಆರ್ ವೃತ್ತದಿಂದ ಸಂತೆಪೇಟೆ ಮಾರ್ಗವಾಗಿ ದೇವಾಲಯಕ್ಕೆ ಹೋಗುವ ರಸ್ತೆ ಕಾಮಗಾರಿ ನಡೆಯುತ್ತಿದ್ದು ಶೇ.25 ರಷ್ಟು ಕೆಲಸ ಬಾಕಿ ಇದೆ. ಉಳಿದಿರುವ ಕಾಮಗಾರಿ 15 ದಿನಗಳಲ್ಲಿ ಮುಗಿಯುವುದು ಅನುಮಾನ ಆಗಿದೆ. ಪ್ರತಿ ದಿನ 50 ಸಾವಿರಕ್ಕೂ ಹೆಚ್ಚು ಮಂದಿ ಭಕ್ತರು ಬರುವ ಹಿನ್ನಲೆ ರಸ್ತೆ ಸರಿಪಡಿಸದಿದ್ದರೆ ಟ್ರಾಫಿಕ್ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ.

vlcsnap 2019 10 03 16h23m58s942

ದೇವಾಲಯ ಸುತ್ತಮುತ್ತ ರಸ್ತೆಗಳಲ್ಲಿ ಅಪಘಾತ ಉಂಟು ಮಾಡುವ ದೊಡ್ಡ ದೊಡ್ಡ ಗುಂಡಿಗಳೇ ನಿರ್ಮಾಣವಾಗಿದ್ದು, ನಗರಸಭೆ ಅಧಿಕಾರಿಗಳು ಅಲ್ಲಲ್ಲಿ ಕಲ್ಲು ಮಣ್ಣು ಸುರಿದು ಕೆಲ ರಸ್ತೆಗಳು ಬಂದ್ ಆಗಿವೆ. ಅಲ್ಲದೆ ಪ್ರತಿವರ್ಷ ಕೋಟಿ ಕೋಟಿ ಆದಾಯ ದೇವಾಲಯಕ್ಕೆ ಕಾಣಿಕೆ ರೂಪದಲ್ಲಿ ಬರುತ್ತಿದ್ದರೂ ಜಿಲ್ಲಾಡಳಿತ ಮಾತ್ರ ದೇವಾಲಯದ ಅಭಿವೃದ್ಧಿಗೆ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಲ. ನೂರಾರು ವರ್ಷಗಳಿಂದ ಅಪಾರ ಭಕ್ತರನ್ನು ದೇವಾಲಯ ಹೊಂದಿದ್ದರೂ ಇಲ್ಲಿಯವರೆಗೂ ಶಾಶ್ವತ ಶೌಚಾಲಯದ ವ್ಯವಸ್ಥೆ ಸಮರ್ಪಕವಾಗಿಲ್ಲ. ಕೇವಲ ಎರಡು ವಾರ ಮಾತ್ರ ಬಾಕಿ ಇರುವಾಗ ಶೌಚಾಲಯಕ್ಕೆ ಮಾರ್ಕ್ ಮಾಡುತ್ತಿದ್ದು, ಜಿಲ್ಲಾಡಳಿತದ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

vlcsnap 2019 10 03 16h23m30s017

ಹಲವಾರು ಪವಾಡಗಳನ್ನು ಹೊಂದಿರುವ ವರ್ಷಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ದೇವಾಲಯಕ್ಕೆ ಕಳೆದ ಕೆಲವರ್ಷಗಳಿಂದ ಕೋಟ್ಯಂತರ ರೂಪಾಯಿ ಆದಾಯ ಬಂದಿದೆ. ಇದನ್ನು ದೇವಾಲಯ ಅಭಿವೃದ್ಧಿಗೆ ಬಳಸುವ ಅವಕಾಶ ಇದ್ದರೂ ಜಿಲ್ಲಾಡಳಿತ ಅಭಿವೃದ್ಧಿ ಮಾಡುತ್ತಿಲ್ಲ ಎಂದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ. ರಾಜ್ಯ ಮತ್ತು ಹೊರ ರಾಜ್ಯದ ಲಕ್ಷಾಂತರ ಭಕ್ತರನ್ನು ಹೊಂದಿರುವ ದೇವಿಯ ದರ್ಶನಕ್ಕೆ ಯಾವುದೇ ತೊಂದರೆಯಾಗದೆ ಕಾಮಗಾರಿ ಶೀಘ್ರವಾಗಿ ಮುಗಿಸಲಿ, ಹಾಸನಾಂಬೆ ಉತ್ಸವ ಅದ್ಧೂರಿಯಾಗಿ ಜರುಗಲಿ ಎಂಬುದು ಜನರ ಆಶಯವಾಗದೆ.

Share This Article
Leave a Comment

Leave a Reply

Your email address will not be published. Required fields are marked *