ಹಾಸನ: ಬಟ್ಟೆ ಕಾರ್ಖಾನೆ ವಿರುದ್ಧ ಕಾರ್ಮಿಕರ ಧಿಡೀರ್ ಪ್ರತಿಭಟನೆ ಮಾಡಿದ್ದು, ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಜಾರ್ಜ್ ಮಾಡಿದ ಘಟನೆ ಹಾಸನದಲ್ಲಿ ನಡೆದಿದೆ.
ಹಾಸನದ ಹೊರವಲಯದಲ್ಲಿ ಹಿಮ್ಮತ್ ಸಿಂಕಾ ಹೆಸರಿನ ಬಟ್ಟೆ ಕಾರ್ಖಾನೆ ಇದ್ದು ಇಲ್ಲಿ ಸುಮಾರು ನಾಲ್ಕು ಸಾವಿರ ಕಾರ್ಮಿಕರು ಕೆಲಸ ಮಾಡುತ್ತಾರೆ. ಉತ್ತರ ಭಾರತದ ಕಾರ್ಮಿಕರು ಜಾಸ್ತಿ ಇರುವ ಈ ಕಾರ್ಖಾನೆಯಲ್ಲಿ ಕೆಲಸಗಾರರಿಗೆ ದೈಹಿಕವಾಗಿ ಹಿಂಸೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ಮಾಡಲಾಗಿದೆ.
ಈ ಕಾರ್ಖಾನೆಯಲ್ಲಿ ವಿನಾಕಾರಣ ನಮ್ಮ ಮೇಲೆ ಹಲ್ಲೆ, ದೌರ್ಜನ್ಯಗಳು ನಡೆಯುತ್ತಿವೆ ಎಂದು ಇಂದು ಕೆಲಸಕ್ಕೆ ಹಾಜರಾಗದ ಸಾವಿರಾರು ಮಂದಿ ಕಾರ್ಮಿಕರು ಪ್ರತಿಭಟನೆ ಮಾಡಿದ್ದಾರೆ. ಪೊಲೀಸರು ತಡೆಯಲು ಯತ್ನಿಸಿದಾಗ ಕಾರ್ಮಿಕರು ಪೊಲೀಸ್ ಜೀಪ್ ಪಲ್ಟಿ ಮಾಡಿ ಆಕ್ರೋಶ ಹೊರ ಹಾಕಿ ಕಲ್ಲು ತೂರಾಟ ಮಾಡಿದ್ದಾರೆ. ಹೀಗಾಗಿ ಕಾರ್ಮಿಕರ ಮೇಲೆ ಲಾಠಿ ಜಾರ್ಜ್ ಮಾಡಿದ್ದಾರೆ. ಪ್ರತಿಭಟನೆ ಜೋರಾದಾಗ ಗಾಳಿಯಲ್ಲಿ ಗುಂಡು ಹಾರಿಸಿ ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಿದ್ದಾರೆ.
ಕಾರ್ಖಾನೆಯಲ್ಲಿ ಉತ್ತರ ಭಾರತದ ವಿವಿಧ ರಾಜ್ಯಗಳಿಂದ ಯುವಕರನ್ನು ಕೆಲಸಕ್ಕೆ ಕರೆತರಲಾಗಿದೆ. ಆದರೆ ಅವರಿಗೆ ಕನಿಷ್ಠ ಸೌಲಭ್ಯವನ್ನು ನೀಡದೆ, ಕಾರ್ಮಿಕ ಕಾಯ್ದೆ ಉಲ್ಲಂಘಿಸಿ ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಕಾರ್ಮಿಕರು ಆರೋಪ ಮಾಡಿದ್ದಾರೆ. ಕಾರ್ಮಿಕ ಸಂಘಟನೆಗಳು ಸಹ ಇಲ್ಲದ ಬೃಹತ್ ಕಾರ್ಖಾನೆಯಲ್ಲಿ ಇಬ್ಬರು ಕಾರ್ಮಿಕರ ಮೇಲೆ ತೀವ್ರವಾಗಿ ಹಲ್ಲೆ ಮಾಡಿರುವ ಫೋಟೋ ಕೂಡ ಸಿಕ್ಕಿದೆ ಎನ್ನಲಾಗಿದೆ.
ಈ ವಿಚಾರವಾಗಿ ಬೆಳಗ್ಗೆ ಇಂದು ಕಾರ್ಖಾನೆ ಬಳಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸ್ಥಳಕ್ಕೆ ಬಂದ ಹೆಚ್ಚುವರಿ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಕಾರ್ಮಿಕರನ್ನು ಚದುರಿಸುವಲ್ಲಿ ಯಶ್ವಸಿಯಾಗಿದ್ದಾರೆ.