ಹಾಸನ: ಕಳೆದ ಏಳು ವರ್ಷಗಳ ಹಿಂದೆ ಆರಂಭಗೊಂಡಿರುವ ರಾಜ್ಯ ಸರ್ಕಾರದ ಬಹುನಿರೀಕ್ಷಿತ ಎತ್ತಿನಹೊಳೆ ಯೋಜನೆ (Ettina Hole Project) ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಹಾಸನ (Hassan) ಜಿಲ್ಲೆಯ ಬಹುತೇಕ ಕಡೆ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದು ಗುರುವಾರ ಸಕಲೇಶಪುರ ತಾಲೂಕಿನ ಕಾಡುಮನೆಯ ಬಳಿಯ ಚೆಕ್‍ಡ್ಯಾಂನಿಂದ ಪ್ರಾಯೋಗಿಕವಾಗಿ ನೀರು ಹರಿಸಲಾಗಿದ್ದು, ಆರಂಭದಲ್ಲೇ ಹಲವು ಹಾನಿ ಉಂಟಾಗಿದೆ. ಭಾರೀ ಪ್ರಮಾಣದಲ್ಲಿ ನೀರು ಹರಿದಿದ್ದರಿಂದ ಹಲವೆಡೆ ಪೈಪ್‍ನಿಂದ ನೀರು ಸೋರಿಕೆಯಾಗಿ ರಸ್ತೆಗೆ ನುಗ್ಗಿದ್ದು ಹಲವು ಪ್ರದೇಶಗಳಿಗೆ ಹಾನಿಯಾಗಿದೆ. ಭೂಮಿಯೊಳಗೆ ಬೃಹತ್ ಗಾತ್ರದ ಪೈಪ್ ಜೋಡಣೆ ಮಾಡಿದ್ದು, ನೀರು ಹರಿದ ರಭಸಕ್ಕೆ ಹಲವೆಡೆ ಭೂಮಿ ಕಂಪಿಸಿದ್ದು ಕೆಲ ಕಾಲ ಜನರು ಆತಂಕಗೊಂಡಿದ್ದರು.
ಸಕಲೇಶಪುರ (Sakleshpura) ತಾಲೂಕಿನ ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆ ಹೊಳೆ, ಕೇರಿಹೊಳೆ ಮತ್ತು ಹೊಂಗಡಹಳ್ಳದಿಂದ ಮುಂಗಾರು ಮಳೆ ಅವಧಿಯಲ್ಲಿ 24.01 ಟಿಎಂಸಿ ಪ್ರಮಾಣದ ಪ್ರವಾಹ ನೀರನ್ನು ಏಳು ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರಿನ ಬರಪೀಡಿತ 29 ತಾಲೂಕಿನ 38 ಪಟ್ಟಣ ಪ್ರದೇಶದ 6,657 ಗ್ರಾಮಗಳ 75.59 ಲಕ್ಷ ಜನ-ಜಾನುವಾರುಗಳಿಗೆ 13.931 ಟಿಎಂಸಿ ಕುಡಿಯುವ ನೀರು ಒದಗಿಸುವುದು. ಇದರ ಜೊತೆಗೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಹಾಸನ ಹಾಗೂ ತುಮಕೂರು ಐದು ಜಿಲ್ಲೆಯ ವ್ಯಾಪ್ತಿಯಲ್ಲಿ 527 ಕೆರೆಗಳಿಗೆ 10.064 ಟಿಎಂಸಿ ಪ್ರಮಾಣದ ನೀರನ್ನು ಕೆರೆಗಳ ಸಾಮಥ್ರ್ಯದ 50% ರಷ್ಟು ತುಂಬಿಸಿ ಅಂತರ್ಜಲ ಮರುಪೂರ್ಣ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. 261 ಕಿ.ಮೀ ನಂತರ ಲಿಫ್ಟ್ ಮೂಲಕ 12.338 ಟಿಎಂಸಿ ನೀರನ್ನು ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ ಕುಡಿಯುವ ನೀರಿಗಾಗಿ ಹಾಗೂ 287 ಕೆರೆಗಳ ಭರ್ತಿಗೆ ನೀರು ಹರಿಸುವ 23,251.66 ಕೋಟಿ ರೂ ವೆಚ್ಚದ ಬೃಹತ್ ಯೋಜನೆಯಾಗಿದೆ. ಇದನ್ನೂ ಓದಿ: Telangana Poll: ಜಿದ್ದಾಜಿದ್ದಿ ಕಣ ತೆಲಂಗಾಣದಲ್ಲಿಂದು ಮತದಾನ – ದಾಖಲೆಯ ಮತದಾನಕ್ಕೆ ಮೋದಿ ಕರೆ
ಆ.23 ರಂದು ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ (DK Shivakumar) ಎತ್ತಿನಹೊಳೆ ಯೋಜನೆ ಕಾಮಗಾರಿ ನಡೆಯುತ್ತಿರುವ ಸಕಲೇಶಪುರ ತಾಲೂಕಿನ, ಹೆಬ್ಬನಹಳ್ಳಿ, ದೊಡ್ಡನಾಗರ, ಕಾಡುಮನೆ, ದೋಣಿಗಾಲ್ ಬಳಿ ತೆರಳಿ ಪವರ್ ಹೌಸ್ ಹಾಗೂ ಕಾಮಗಾರಿಯನ್ನು ವೀಕ್ಷಿಸಿದ್ದರು. 24 ಸಾವಿರ ಕೋಟಿ ರೂ ವೆಚ್ಚದ ಯೋಜನೆ ಇದಾಗಿದ್ದು, ಈಗಾಗಲೇ 14 ಸಾವಿರ ಕೋಟಿ ಖರ್ಚಾಗಿದ್ದು, ಎತ್ತಿನಹೊಳೆ ಯೋಜನೆಯಿಂದ ಮೊದಲ ಹಂತವಾಗಿ ನೂರು ದಿನದಲ್ಲಿ ನೀರು ಲಿಫ್ಟ್ ಮಾಡಬೇಕೆಂದು ನಮ್ಮ ಅಧಿಕಾರಿಗಳಿಗೆ ಟೈಂ ಫಿಕ್ಸ್ ಮಾಡಿದ್ದರು. ಅದರಂತೆ ನಿನ್ನೆ ಸುಮಾರು ಆರು ಕಿಲೋಮೀಟರ್ ಉದ್ದದ ಪೈಪ್‍ಲೈನ್ ಮೂಲಕ ಕಾಡುಮನೆ ಚೆಕ್‍ಡ್ಯಾಂ ಐದರ ಪಂಪ್‍ನಿಂದ ಪ್ರಾಯೋಗಿಕವಾಗಿ ನೀರು ಹರಿಸಲಾಗಿದ್ದು, ಮಲ್ಲಾಗದ್ದೆ, ಕಂಬರಡಿ, ದೇಖಲ ಗ್ರಾಮಗಳ ಬಳಿ ಹಾದುಹೋಗಿರುವ ಪೈಪ್‍ನಿಂದ ಭಾರೀ ಪ್ರಮಾಣದಲ್ಲಿ ನೀರು ಸೋರಿಕೆಯಾಗಿದ್ದು, ದೇಖಲ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕುಸಿದಿದ್ದು, ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದು ಜೀಪೊಂದು ಗುಂಡಿಯೊಳಗೆ ಸಿಲುಕಿಕೊಂಡಿದೆ. ನಂತರ ಸ್ಥಳೀಯರು ಜೀಪನ್ನು ಮೇಲೆತ್ತಿದ್ದಾರೆ.
ಭೂಮಿಯೊಳಗೆ ಜೋಡಣೆ ಮಾಡಿದ ಪೈಪ್‍ನಲ್ಲಿ ನೀರು ರಭಸವಾಗಿ ಹರಿದ ಪರಿಣಾಮ ಭೂಮಿ ಕಂಪಿಸಿದಂತಾಗಿದ್ದು, ದೇಖಲ ಗ್ರಾಮದ ಗ್ರಾಮಸ್ಥರು ಭಯದಿಂದ ಮನೆಯಿಂದ ಹೊರಗೆ ಓಡಿ ಬಂದಿದ್ಧಾರೆ. ನಿನ್ನೆ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು. ಮೊದಲು ಆಗಿರುವ ಆಸ್ತಿಪಾಸ್ತಿ ದುರಸ್ತಿ ಮಾಡಿ ಇಲ್ಲವಾದಲ್ಲಿ ಕಾಮಗಾರಿ ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಈ ವೇಳೆ ಮಾತನಾಡಿದ ವಿಶ್ವೇಶ್ವರಯ್ಯ ಜಲನಿಗಮದ ಕಾರ್ಯಪಾಲಕ ಎಂಜಿನಿಯರ್ ವೆಂಕಟೇಶ್, ಪೈಪ್ ಅಳವಡಿಸಿ ಐದರಿಂದ ಆರು ವರ್ಷ ಕಳೆದಿದ್ದು ಹಲವೆಡೆ ವೆಲ್ಡಿಂಗ್ ತುಕ್ಕು ಹಿಡಿದು ಬಿರುಕು ಬಿಟ್ಟು ನೀರು ಸೋರಿಕೆಯಾಗುತ್ತಿದೆ. ಹಾಗಾಗಿ ಸಮಸ್ಯೆಯಾಗಿದೆ, ಯಾರೂ ಆತಂಕಪಡಬೇಡಿ ಎಂದಿದ್ದಾರೆ.
8 ಸಾವಿರ ಕೋಟಿಯಿಂದ ಆರಂಭಗೊಂಡ ಯೋಜನೆ ಇದೀಗ 24 ಸಾವಿರ ಕೋಟಿಗೆ ಪರಿಷ್ಕೃತಗೊಂಡಿದೆ. ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್, ರಮೇಶ್ ಜಾರಕಿಹೋಳಿ, ಗೋವಿಂದಕಾರಜೋಳ ಭೇಟಿ ನೀಡಿ ಆದಷ್ಟು ಬೇಗ ಕಾಮಗಾರಿ ಮುಗಿಸಿ ನೀರು ಹರಿಸುತ್ತೇವೆ ಎಂದಿದ್ದರು. ಆದರೂ ಹಲವು ಅಡತಡೆಗಳಿಂದ ಯೋಜನೆ ನಿಧಾನಗತಿಯಲ್ಲಿ ಸಾಗುತ್ತಿದೆ.