ಹಾಸನ: ಹಾಸನ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ಶಂಕೆ ಮೇರೆಗೆ ದಾಖಲಾಗಿದ್ದ ಎಲ್ಲ ಆರು ಮಂದಿಯ ಪರೀಕ್ಷಾ ವರದಿ ಬಂದಿದ್ದು, ಯಾರಿಗೂ ಸೋಂಕು ಇಲ್ಲ ಎಂದು ದೃಢಪಟ್ಟಿದೆ.
ಎಲ್ಲರ ವೈದ್ಯಕೀಯ ವರದಿಯಲ್ಲಿ ನೆಗೆಟಿವ್ ಎಂಬ ವರದಿ ಬಂದಿದೆ. ಅಲ್ಲದೆ ಚಿಕ್ಕಮಗಳೂರಿನಿಂದ ಕಳಿಸಲಾಗಿದ್ದ ಮಾದರಿಯಲ್ಲಿಯೂ ನೆಗೆಟಿವ್ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಕೃಷ್ಣಮೂರ್ತಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕಟುಂಬ ಕಲ್ಯಾಣ ಅಧಿಕಾರಿ ಡಾ.ಸತೀಶ್ ಮಾಹಿತಿ ನೀಡಿದ್ದಾರೆ.
Advertisement
Advertisement
ಕೊರೊನಾ ವೈರಸ್ ಸೋಂಕು ಚಿಕಿತ್ಸೆಗೆ ಮಂಜಾಗ್ರತೆ ಹಾಗೂ ಪೂರ್ವ ಸಿದ್ಧತೆಗಾಗಿ ಹಾಸನದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಕೊರೊನಾ ಚಿಕಿತ್ಸಾ ಘಟಕಗಳನ್ನು ಸ್ಥಾಪಿಸಲಾಗಿದೆ. ಜಿಲ್ಲಾಧಿಕಾರಿ ಆರ್.ಗಿರೀಶ್ ಅವರ ಸೂಚನೆ ಮೇರೆಗೆ ಡಾ. ಕೃಷ್ಣಮೂರ್ತಿ ಹಾಗೂ ಡಾ. ಸತೀಶ್ ಅವರು ಹಾಸನ ನಗರದ ಖಾಸಗಿ ಆಸ್ಪತ್ರೆಗಳಿಗೆ ಹಠಾತ್ ಭೇಟಿ ನೀಡಿ ಕೊರೊನಾ ಪ್ರತ್ಯೇಕ ಚಿಕಿತ್ಸಾ ಘಟಕಗಳನ್ನು ತೆರೆಯಲಾಗಿದೆಯೇ? ಯಾವ ರೀತಿ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪರೀಕ್ಷೆ ಮಾಡಿದರು.
Advertisement
Advertisement
ಆಸ್ಪತ್ರೆ ಮುಖ್ಯಸ್ಥರು ಮತ್ತು ವೈದ್ಯರೊಂದಿಗೆ ಮಾತನಾಡಿದ ಜಿಲ್ಲಾ ಶಸ್ತ್ರಚಿಕಿತ್ಸಕರು ಹಾಗೂ ಡಿ.ಹೆಚ್.ಓ, ಆಸ್ಪತ್ರೆಯ ಎಲ್ಲಾ ವೈದ್ಯರು ಹಾಗೂ ಸಹಾಯಕ ಸಿಬ್ಬಂದಿಗೆ ಅರಿವು ಮೂಡಿಸಿ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೇಗೆ ಚಿಕಿತ್ಸೆ ನೀಡಬೇಕು. ಶಂಕಿತರನ್ನು ಹೇಗೆ ತಪಾಸಣೆ ನಡೆಸಿ ಮಾದರಿಗಳನ್ನು ಸಂಗ್ರಹಿಸಬೇಕು ಎಂದು ವಿವರಿಸಿದರು. ಎಲ್ಲಾ ಆಸ್ಪತ್ರೆಗಳಲ್ಲಿ ತಮ್ಮ ಸಿಬ್ಬಂದಿಗಳಿಗೆ ಅಣಕು ಪ್ರದರ್ಶನದ ಮೂಲಕ ಜಾಗೃತಿ ಮೂಡಿಸಿ ಎಂದು ಸಲಹೆ ನೀಡಿದರು.