ಹಾಸನ: ಜಿಲ್ಲೆಯ ಚನ್ನರಾಯಪಟ್ಟಣದ ಬಾಗೂರು ರಸ್ತೆಯ ನೇತಾಜಿ ಸರ್ಕಲಿನಲ್ಲಿ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ಈಗ ಮತ್ತೆ ಇನ್ನಿಬ್ಬರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಚನ್ನರಾಯಪಟ್ಟಣದ ಬಾಗೂರು ರಸ್ತೆಯ ನೇತಾಜಿ ಸರ್ಕಲಿನಲ್ಲಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಆರೋಪಿಯಾಗಿದ್ದ ಅಭಿಷೇಕ್ (26) ಎಂಬುವನನ್ನು ಮಂಟಿ ಹುಡುಗರಾದ ನಾಲ್ಕು ಮಂದಿ ಅ.29 ರಂದು ನಡು ರಸ್ತೆಯಲ್ಲೇ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದರು. ಈ ದೃಶ್ಯ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
Advertisement
Advertisement
ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಿವಾಸ್ ಸೆಪಟ್, ಡಿವೈಎಸ್ಪಿ ಲಕ್ಷ್ಮೇ ಗೌಡ ಮತ್ತು ಸಿಪಿಐ ಕಾಂತರಾಜು ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ಆರೋಪಿಗಳ ಪತ್ತೆಗಾಗಿ ರಚನೆ ಮಾಡಿದ್ದರು. ನ.2 ರಂದು ಪ್ರಮುಖ ಆರೋಪಿಗಳು ಎನ್ನಲಾದ ಶೇಖರ್ (23) ಮತ್ತು ವಿನೋದ್ ಅಲಿಯಾಸ್ ಕೋಳಿ ಮಂಜ (21) ಎಂಬುವರನ್ನು ಬಂಧಿಸಿದ್ದ ಪೊಲೀಸರು, ಇಂದು ಅವರ ಸಹಚರರಾದ ಶಿವಕುಮಾರ್ (21) ಮತ್ತು ನಿಖಿಲ್ (21) ಎಂಬುವರನ್ನು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ಬಸ್ ನಿಲ್ದಾಣದ ಸಮೀಪ ಬಂಧಿಸಿದ್ದಾರೆ.
Advertisement
ಕೊಲೆ ನಡೆದ ಸ್ಥಳಕ್ಕೆ ಆರೋಪಿಗಳನ್ನು ಕರೆತಂದು ಸ್ಥಳ ಮಹಜರು ಮಾಡಿಸಿದ ಬಳಿಕ ಆರೋಪಿಗಳನ್ನ ಚನ್ನರಾಯಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹಾಸನದ ಉಪ ಕಾರಾಗೃಹಕ್ಕೆ ಕಳುಹಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.