ಹಾಸನ: ಬಿಜೆಪಿಯವರು ಸಚಿವರಾಗಿದ್ದು ಕರಾಳ ದಿನವಾದರೆ, ಉಗ್ರಪ್ಪ ಎಂಪಿ ಆಗಿದ್ದು ಸುದಿನಾನ ಎಂದು ಗಣಿ ಮತ್ತು ಭೂ ವಿಜ್ಞಾನ ಖಾತೆಯ ಸಚಿವ ಸಿಸಿ ಪಾಟೀಲ್ ಆಕ್ರೋಶ ಹೊರಹಾಕಿದ್ದಾರೆ.
ಹಾಸನದಲ್ಲಿ ಮಾತನಾಡಿದ ಅವರು ಹಿಂದಿನ ಸರ್ಕಾರದ ತಪ್ಪು ನೀತಿಯಿಂದ ಮರಳು ಸರಿಯಾಗಿ ಸಿಗುತ್ತಿಲ್ಲ. ಹೀಗಾಗಿ ತೆಲಂಗಾಣ ಮಾದರಿ ಮರಳು ನೀತಿ ತರಲು ಚಿಂತನೆ ನಡೆಸಲಾಗಿದೆ. ಸರ್ಕಾರಕ್ಕೆ ಹೆಚ್ಚಿನ ಆದಾಯ ಬರಬೇಕು. ಅಕ್ರಮ ಗಣಿಗಾರಿಕೆ ತಡೆಯಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ನೈಸರ್ಗಿಕ ಖನಿಜ ಸಂಪತ್ತು ಲೂಟಿಕೋರರ ವಶವಾಗದ ರೀತಿ ಕೆಲಸ ಮಾಡುತ್ತಿದ್ದೇವೆ ಎಂದರು.
ಇದೇ ವೇಳೆ ಮಾಜಿ ಸಚಿವ ವಿಶ್ವನಾಥ್ ಏಕಾಂಗಿಯಾಗಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಸಾವಿರಾರು ಹೋರಾಟ ಮಾಡಿ ಈ ಸ್ಥಾನ ತಲುಪಿದ್ದಾರೆ. ಅವರು ಎಲ್ಲವನ್ನೂ ಸರಿ ಮಾಡುತ್ತಾರೆ ಎಂದು ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ಕರಾಳ ದಿನ ಎಂಬ ಉಗ್ರಪ್ಪ ಹೇಳಿಕೆಗೆ ವ್ಯಂಗ್ಯವಾಡಿದ ಅವರು, ಅವರ ಮನೆಯವರು ಏನಂತ ಹೆಸರಿಟ್ಟಿದ್ದಾರೆ. ಉಗ್ರಪ್ಪ ಅವರು ಯಾರನ್ನಾದರೂ ಹೊಗಳಿದ್ದು ಇದೆಯೇ ಬಿಜೆಪಿಯವರು ಮಂತ್ರಿಯಾಗಿದ್ದು ಕರಾಳ ದಿನ ಎಂದರೆ ಅವರು ಎಂಪಿಯಾದ ದಿನ ಸುದಿನವೇ? ನಮ್ಮ ಪಕ್ಷದವರು ಸಚಿವರಾದರೆ ಅದು ಕರಾಳ ದಿನ ಅವರ ಪಕ್ಷದವರಾದರೆ ಸುದಿನವೇ ಎಂದು ಪ್ರಶ್ನೆ ಮಾಡಿದರು.