ಚಿಕ್ಕಬಳ್ಳಾಪುರ: ಹಾಸನದ (Hassan Accident) ಬಳಿ ಭಾನುವಾರ ಬೆಳಗ್ಗೆ ಸಂಭವಿಸಿದ ಕಾರು ಅಪಘಾತದಲ್ಲಿ ಆರು ಮಂದಿ ದಾರುಣವಾಗಿ ಸಾವನ್ನಪ್ಪಿದ್ದರು. ಮೃತರ ಇಬ್ಬರು ಮಕ್ಕಳ ಶೈಕ್ಷಣಿಕ ಜವಾಬ್ದಾರಿಯನ್ನು ಶಾಸಕ ಪ್ರದೀಪ್ ಈಶ್ವರ್ (Pradeep Eshwar) ಹೊತ್ತುಕೊಂಡಿದ್ದಾರೆ.
ಮೃತರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದ ನಾರಾಯಣಪ್ಪ, ಸುನಂದ ಹಾಗೂ ನೇತ್ರ (ಸುನಂದಾರ ಸಹೋದರಿ), ಆಕೆಯ ಗಂಡ ರವಿಕುಮಾರ್ ಸೇರಿದಂತೆ ಇವರ ಎರಡು ವರ್ಷದ ಮಗ ಚೇತನ್ ಹಾಗೂ ಕಾರು ಚಾಲಕ ಚಿಕ್ಕಬಳ್ಳಾಪುರ ತಾಲೂಕಿನ ಕೊಂಡೆನಹಳ್ಳಿ ಗ್ರಾಮದ ಗುಣಶೇಖರ್ ಮೃತ ದುರ್ದೈವಿಗಳಾಗಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಕಾರು, ಟ್ರಕ್ ನಡುವೆ ಭೀಕರ ಅಪಘಾತ – ಚಿಕ್ಕಬಳ್ಳಾಪುರ ಮೂಲದ 6 ಮಂದಿ ದಾರುಣ ಸಾವು
ಮೃತ ಸುನಂದ ಹಾಗೂ ನೇತ್ರ ಇಬ್ಬರೂ ಕೂಡ ಅಕ್ಕತಂಗಿಯರಾಗಿದ್ದು, ಇವರ ತವರು ಮನೆ ಚಿಕ್ಕಬಳ್ಳಾಪುರ ತಾಲೂಕಿನ ಚಿಗಟೇನಳ್ಳಿ ಗ್ರಾಮ ಆಗಿತ್ತು. ಮೃತ ನೇತ್ರ ಹಾಗೂ ರವಿಕುಮಾರ್ ದಂಪತಿಗೆ ಮೂರು ಜನ ಮಕ್ಕಳಿದ್ದಾರೆ. ಅಪಘಾತದಲ್ಲಿ ಮಗ ಚೇತನ್, ತಂದೆ-ತಾಯಿ ಜೊತೆ ಮೃತಪಟ್ಟಿದ್ದಾನೆ. ಮಕ್ಕಳಾದ ಪಲ್ಲವಿ ಹಾಗೂ ಪೂರ್ಣಿಮಾರನ್ನ ತವರು ಮನೆ ಚಿಗಟೇನಹಳ್ಳಿಯಲ್ಲಿ ಬಿಟ್ಟು ಹೋಗಿದ್ದರು.
ವಿಷಯ ತಿಳಿದು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಚಿಗಟೇನಹಳ್ಳಿ ಗ್ರಾಮದ ನೇತ್ರಾರ ತವರು ಮನೆಗೆ ಭೇಟಿ ನೀಡಿ ಮಕ್ಕಳಿಬ್ಬರನ್ನು ಸಂತೈಸಿದ್ದಾರೆ. ಈ ವೇಳೆ ಮೃತರ ಇಬ್ಬರು ಮಕ್ಕಳ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ ತಲಾ ಒಂದು ಲಕ್ಷ ಠೇವಣಿ ಇಡುವ ಭರವಸೆ ಹಾಗೂ ಸರ್ಕಾರದಿಂದ ಎರಡು ಲಕ್ಷ ಪರಿಹಾರ ಕೊಡಿಸುವುದಾಗಿ ಶಾಸಕ ಪ್ರದೀಪ್ ಈಶ್ವರ್ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೂ ಒಂದು ಪರಿಷತ್ ಸ್ಥಾನ ನೀಡಬೇಕು: ರಾಮಲಿಂಗಾರೆಡ್ಡಿ
ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶಾಸಕ ಪ್ರದೀಪ್ ಈಶ್ವರ್ ದತ್ತು ಪಡೆದಿದ್ದು, ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನ ಹೊತ್ತುಕೊಂಡಿದ್ದಾರೆ. ಮಕ್ಕಳು ಮದುವೆ ವಯಸ್ಸಿಗೆ ಬಂದ ನಂತರ ಅಣ್ಣನ ಸ್ಥಾನದಲ್ಲಿ ನಿಂತು ತಾನು ಇಬ್ಬರೂ ಹೆಣ್ಣುಮಕ್ಕಳ ಮದುವೆಯನ್ನು ಮಾಡಿಸುವುದಾಗಿಯೂ ಭರವಸೆ ನೀಡಿದ್ದಾರೆ.