ಹಾಸನ: ಕೊರೊನಾ ಹಾವಳಿ ಹಿನ್ನೆಲೆಯಲ್ಲಿ ಈ ಬಾರಿಯೂ ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬ ದೇವರ ನೇರ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಸ್ಪಷ್ಟಪಡಿಸಿದರು.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ಕೊರೊನಾ ಹಾವಳಿ ಇನ್ನೂ ಕಡಿಮೆಯಾಗಿಲ್ಲ. ಅಲ್ಲದೇ ಸರ್ಕಾರದ ಮಾರ್ಗಸೂಚಿಯಂತೆ ದಸರಾ ಮಹೋತ್ಸವ ಕೂಡ ಸರಳವಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಹಾಸನಾಂಬೆ ಜಾತ್ರೆಯನ್ನು ಸಹ ಎಲ್ಲಾ ಧಾರ್ಮಿಕ ವಿಧಿ-ವಿಧಾನದೊಂದಿಗೆ ಸರಳವಾಗಿ ಆಚರಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಅಕ್ಟೋಬರ್ 28 ದೇವಸ್ಥಾನದ ಬಾಗಿಲು ತೆರೆಯಲಾಗುತ್ತೆ. ಬಾಗಿಲು ತೆರೆದ ಮೊದಲ ದಿನ ಮಾತ್ರ ವಿವಿಐಪಿಗಳಿಗೆ ದರ್ಶನ ಅವಕಾಶ ಕಲ್ಪಿಸಲಾಗಿದೆ. ಅಕ್ಟೋಬರ್ 28 ರಿಂದ ನವೆಂಬರ್ 06 ರವರೆಗೆ 10 ದಿನ ಹಾಸನಾಂಬ ದೇವಿಯ ಪೂಜೆ ವಿಧಿ-ವಿಧಾನಗಳನ್ನು ಆನ್ ಲೈನ್ ಮೂಲಕ ಮಾತ್ರ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ನಗರದ 7-8 ಕಡೆ ಎಲ್‍ಇಡಿ ದೊಡ್ಡ ಪರದೆಯ ಮೂಲಕ ಹಾಸನಾಂಬೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಸಾರ್ವಜನಿಕರ ನೇರ ದರ್ಶನಕ್ಕೆ ಅವಕಾಶ ನೀಡಿದರೆ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿದ್ದು, ಈ ಹಿನ್ನಲೆಯಲ್ಲಿ ಇಂತಹ ಕ್ರಮ ವಹಿಸಲಾಗಿದೆ ಎಂದು ಸಚಿವರು ತಿಳಿಸಿದರು. ಇದನ್ನೂ ಓದಿ: ಖರ್ಗೆ ಎರಡೂವರೆ ವರ್ಷಗಳ ಕಾಲ ತಮ್ಮ ಕ್ಷೇತ್ರಕ್ಕೆ ಹೋಗಿರಲಿಲ್ಲ: ಗೋಪಾಲಯ್ಯ ವ್ಯಂಗ್ಯ
ಹಾಸನಾಂಬ ದರ್ಶನಾರಂಭ ದಿನ ಸಿಎಂ ಬಸವರಾಜ ಬೊಮ್ಮಾಯಿ, ಶ್ರೀ ಆದಿಚುಂಚನಗಿರಿ ಮಠದ ಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿ ಅವರನ್ನು ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗುವುದು. ಹಾಸನದಲ್ಲಿ ಇನ್ನೂ ಕೊರೊನಾ ಪಾಸಿಟಿವಿಟಿ ಕಡಿಮೆಯಾಗಿಲ್ಲದ ಕಾರಣ ಸಾರ್ವಜನಿಕವಾಗಿ ಹಾಸನಾಂಬ ದರ್ಶನ ಇರುವುದಿಲ್ಲ. ಇದಕ್ಕೆ ಸಾರ್ವಜನಿಕರು ಹಾಗೂ ಭಕ್ತಾದಿಗಳು ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಶಾಸಕರಾದ ಕೆ ಎಂ ಶಿವಲಿಂಗೇಗೌಡ, ಪ್ರೀತಮ್ ಜೆ ಗೌಡ, ಸಿಎನ್ ಬಾಲಕೃಷ್ಣ, ಲಿಂಗೇಶ್, ಜಿಲ್ಲಾಧಿಕಾರಿ ಆರ್. ಗಿರೀಶ್, ಎ ಎಸ್ಪಿ ನಂದಿನಿ, ಡಿಎಚ್‍ಒ ಡಾ.ಸತೀಶ್ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.