ಹಾಸನ: ಹಾಸನಾಂಬೆ (Hasanamba) ದರ್ಶನಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದು, ಜನರ ನಿಯಂತ್ರಣಕ್ಕೆ ಪರದಾಡುವಂತಾಗಿದೆ. ಜನರನ್ನು ನಿಯಂತ್ರಿಸಲು 1,000 ರೂ.ನ ನೇರ ದರ್ಶನದ ಟಿಕೆಟ್ ಮಾರಾಟ ರದ್ದು ಮಾಡಲಾಗಿದೆ.
ಹಾಸನಾಂಬೆ ದೇವಾಲಯದ ಬಳಿ ಹಾಸನ (Hassan) ಎಸ್‌ಪಿ ಮಹಮ್ಮದ್ ಸುಜೀತಾ, ಕೊಡಗು ಎಸ್‌ಪಿ ರಾಮರಾಜ ಹಾಗೂ ಮಂಡ್ಯ ಎಸ್‌ಪಿ ಮಲ್ಲಿಕಾರ್ಜುನ್ ಮಾಲದಂಡಿಯವರನ್ನು ಜನರ ನಿಯಂತ್ರಣಕ್ಕೆ ನಿಯೋಜಿಸಲಾಗಿದೆ. ಆದರೂ ಹಾಸನಾಂಬೆ ದೇವಿ ದರ್ಶನಕ್ಕೆ ಲಕ್ಷಾಂತರ ಜನ ಭಕ್ತರು ಆಗಮಿಸಿದ್ದು ನಿಯಂತ್ರಣಕ್ಕೆ ಮೂವರು ಎಸ್‌ಪಿಗಳು ಪರದಾಡುವಂತಾಗಿದೆ.
ಹಾಸನಾಂಬೆ ದೇವಾಲಯ ಆಡಳಿತ ಮಂಡಳಿ ಬೇಕಾಬಿಟ್ಟಿಯಾಗಿ ವಿವಿಐಪಿ ಪಾಸ್ ಹಂಚಿದ್ದರಿಂದ ಈ ಯಡವಟ್ಟಾಗಿದೆ. ರಾಜ್ಯದ ಹಲವು ಜಿಲ್ಲೆಗಳ ಲಕ್ಷಾಂತರ ಪಾಸ್ ಹಂಚಿಕೆ ಮಾಡಿದ್ದರಿಂದ ಈ ಸಮಸ್ಯೆ ಎದುರಾಗಿದೆ. ವಿವಿಐಪಿ ಪಾಸ್ ಪಡೆದು ನೇರ ದರ್ಶನದ ಆಸೆಯಲ್ಲಿ ಲಕ್ಷಾಂತರ ಜನ ಬಂದಿದ್ದಾರೆ. ಆದಾಯದ ಆಸೆಗೆ ಬೇಕಾಬಿಟ್ಟಿ ಪಾಸ್ ಹಂಚಿಕೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ದರ್ಶನಕ್ಕೆ ಬಂದ ಜನ ಪಾಸ್ ಇದೆ, ಬಿಡಿ ಎಂದು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದಾರೆ. ಅಲ್ಲದೇ ಸಿಬ್ಬಂದಿ ಜೊತೆ ಗಲಾಟೆಗೂ ಮುಂದಾಗಿದ್ದಾರೆ. ಒಂದು ಭಾಗದಿಂದ ಜನರು ಹೋಗದಂತೆ ತಡೆಯಲು ಕ್ರಮ ಕೈಗೊಳ್ಳಲಾಗಿದೆ.