ಹಾಸನ: ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನಾಂಬೆ ತಾಯಿ (Hasanambe Temple) ಸಾರ್ವಜನಿಕ ದರ್ಶನಕ್ಕೆ ಇಂದು (ಅ.22) ವಿಧ್ಯುಕ್ತ ತೆರೆ ಬಿದ್ದಿದೆ.
ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ತೆರೆದು ಇಂದಿಗೆ 14 ದಿನ. ಸಾರ್ವಜನಿಕ ದರ್ಶನಕ್ಕೆ ಕಡೆಯ ದಿನವಾಗಿದ್ದರಿಂದ ಮುಂಜಾನೆಯಿಂದಲೂ ದೇವಿ ದರ್ಶನಕ್ಕೆ ಭಕ್ತರ ದಂಡು ಹರಿದು ಬಂದಿತ್ತು. ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದಿದ್ದಾರೆ. ಹಿಂದೆಂದೂ ಕಾಣದ ರೀತಿಯಲ್ಲಿ ಭಕ್ತರು ಆಗಮಿಸಿ, ಮಳೆಯ ನಡುವೆಯೂ ಜನ ಕಿಕ್ಕಿರಿದು ಸೇರಿದ್ದರ ತಾಯಿಯನ್ನು ಕಣ್ತುಂಬಿಕೊಂಡಿದ್ದಾರೆ. ಇದುವರೆಗೂ 26 ಲಕ್ಷಕ್ಕೂ ಹೆಚ್ಚು ಮಂದಿ ದೇವಿ ದರ್ಶನ ಪಡೆದಿದ್ದಾರೆ.ಇದನ್ನೂ ಓದಿ: ನಿನ್ನೆವರೆಗೂ 23 ಲಕ್ಷ ಜನರಿಂದ ದಾಖಲೆಯ ಹಾಸನಾಂಬೆ ದರ್ಶನ – ಇಂದು ಹರಿದು ಬರುತ್ತಿರುವ ಭಕ್ತಸಾಗರ
ಈ ಬಾರಿ ಕೇವಲ ಹದಿಮೂರು ದಿನಗಳು ಮಾತ್ರ ಹಾಸನಾಂಬ ದೇವಿ ಸಾರ್ವಜನಿಕ ದರ್ಶನಕ್ಕೆ ಅವಕಾಶವಿತ್ತು. ಅ.10 ಸಾರ್ವಜನಿಕ ದರ್ಶನ ಆರಂಭವಾದ ದಿನದಿಂದಲೂ ಪ್ರತಿನಿತ್ಯ ಲಕ್ಷಾಂತರ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿ ದರ್ಶನ ಪಡೆದರು. ಇಂದು ಸಾರ್ವಜನಿಕ ದರ್ಶನಕ್ಕೆ ಕಡೆಯ ದಿನವಾದ್ದರಿಂದ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.
ಇಂದು ನಟರಾದ ಧ್ರುವ ಸರ್ಜಾ, ಹರ್ಷ, ನಟಿ ಮಿಲನ ನಾಗರಾಜ್, ಸೇರಿ ಹಲವರು ದೇವಿ ದರ್ಶನ ಪಡೆದುಕೊಂಡರು. ಇಂದು ಸಂಜೆ 7 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ನೈವೇದ್ಯಕ್ಕಾಗಿ ಗರ್ಭಗುಡಿ ಬಾಗಿಲು ಮುಚ್ಚಲಾಗುವುದು. ಮಧ್ಯರಾತ್ರಿ 12 ಗಂಟೆಯಿಂದ ನಾಳೆ ಬೆಳಿಗ್ಗೆ 5 ಗಂಟೆಯವರೆಗೆ ಸ್ಥಳೀಯರಿಗೆ ಮಾತ್ರ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಜಾತ್ರೆ ಆರಂಭವಾದ ದಿನದಿಂದಲೂ ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಎಸ್ಪಿ ಮಹಮದ್ ಸುಜೀತಾ, ಎಸಿ ಮಾರುತಿ ಹಾಗೂ ಎಎಸ್‌ಪಿಗಳು ಇಂದಿನವರೆಗೂ ದೇವಾಲಯದಲ್ಲಿ ಬೀಡುಬಿಟ್ಟು ಕರ್ತವ್ಯ ನಿರ್ವಹಿಸಿದರು. ಮೈಸೂರಿನ ಅರ್ಜುನ ಅವಧೂತರು ಹಾಸನಾಂಬ ಜಾತ್ರಾ ಮಹೋತ್ಸವಕ್ಕೆ ದುಡಿದ ಪೌರಕಾರ್ಮಿಕರ ಪಾದ ಪೂಜೆ ಮಾಡಿ ವಸ್ತ್ರ ನೀಡಿದರು. 1000 ರೂ., 300 ರೂ. ವಿಶೇಷ ದರ್ಶನದ ಟಿಕೆಟ್ ಹಾಗೂ ಲಾಡ್ಡು ಮಾರಾಟದಿಂದ ದೇವಾಲಯ ಮಂಡಳಿಗೆ ಈವರೆಗೆ ಒಟ್ಟು 22 ಕೋಟಿ ರೂ. ಆದಾಯ ಬಂದಿದೆ.
ಈ ಮೂಲಕ ಹದಿಮೂರು ದಿನಗಳ ಕಾಲ ಅದ್ಧೂರಿ ಹಾಗೂ ವಿಜೃಂಭಣೆಯಿಂದ ನಡೆದ ಹಾಸನಾಂಬೆ ಜಾತ್ರಾ ಮಹೋತ್ಸವಕ್ಕೆ ತೆರೆ ಬೀಳಲಿದ್ದು, ನಾಳೆ ಮಧ್ಯಾಹ್ನ 12ಗಂಟೆಗೆ ವಿಶ್ವರೂಪ ದರ್ಶನದ ನಂತರ ಶಾಸ್ತ್ರೋಕ್ತವಾಗಿ ಹಾಸನಾಂಬೆ ದೇವಿ ಗರ್ಭಗುಡಿ ಬಾಗಿಲು ಬಂದ್ ಆಗಲಿದೆ. ಇನ್ನೂ ಒಂದು ವರ್ಷ ಕಾಲ ಹಾಸನಾಂಬೆ ತೆರೆಮರೆಗೆ ಸರಿಯಲಿದ್ದಾಳೆ.ಇದನ್ನೂ ಓದಿ: ಗೋಲ್ಡನ್ ಪಾಸ್ ಪಡೆದು, ಸರತಿ ಸಾಲಿನಲ್ಲಿ ನಿಂತು ಹಾಸನಾಂಬೆ ದರ್ಶನ ಪಡೆದ ಧ್ರುವ ಸರ್ಜಾ