ಹಾಸನ: ವರ್ಷಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನದ ಹಾಸನಾಂಬೆಯ ದರ್ಶನಕ್ಕೆ ಸಿದ್ಧತೆ ಶುರುವಾಗಿದೆ. ಅಧಿದೇವತೆ ಹಾಸನಾಂಬೆಯ ದರ್ಶನ ಮಹೋತ್ಸವ ನಾಳೆಯಿಂದ ಆರಂಭವಾಗಲಿದೆ.
ಆಶ್ವೀಜ ಮಾಸದ ಮೊದಲ ಗುರುವಾರ ಮಧ್ಯಾಹ್ನ 12.30ಕ್ಕೆ ಶಾಸ್ತ್ರೋಕ್ತವಾಗಿ ದೇವಿಯ ಗರ್ಭಗುಡಿ ಬಾಗಿಲು ತೆರೆಯಲಿದೆ. ಇದಕ್ಕಾಗಿ ಸರ್ವ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ ಅಕ್ಟೋಬರ್ 12 ರಿಂದ 21 ರ ರವರೆಗೆ ಹಾಸನಾಂಬೆ ಜಾತ್ರೆ ನಡೆಯಲಿದ್ದು, ಇದೇ ಮೊದಲ ಬಾರಿಗೆ ದಿನವಿಡೀ ದರ್ಶನ ವ್ಯವಸ್ಥೆ ಮಾಡಿರುವುದಿರಿಂದ ಭಕ್ತರ ನೂಕುನುಗ್ಗಲು ಕಡಿಮೆಯಾಗುವ ನಿರೀಕ್ಷೆ ಇದೆ.
Advertisement
ಸಂಪ್ರದಾಯದ ಪ್ರಕಾರ ಅರಸು ವಂಶಸ್ಥರು ಬಾಳೆಕಂಬ ಕಡಿದ ಕೂಡಲೇ, ವರ್ಷದಿಂದ ಮುಚ್ಚಿದ್ದ ಅಮ್ಮನವರ ಗರ್ಭಗುಡಿ ಬಾಗಿಲು ಮಧ್ಯಾಹ್ನ 12.30ಕ್ಕೆ ತೆರೆಯಲಿದೆ. ಈಗಾಗಲೇ ಹೇಳಿರುವಂತೆ ಮೊದಲ ದಿನ ದೇವಿಯ ಗರ್ಭಗುಡಿ ಸ್ವಚ್ಛತೆ, ಸುಣ್ಣಧಾರಣೆ ಮತ್ತು ಜಿಲ್ಲಾ ಖಜಾನೆಯಿಂದ ತೆಗೆದುಕೊಂಡು ಹೋಗಿರುವ ಆಭರಣಧಾರಣೆ ನಂತರ ಪೂಜಾಕಾರ್ಯ ನಡೆಯಬೇಕಿರುವುದರಿಂದ ದರ್ಶನ ವ್ಯವಸ್ಥೆ ಇರುವುದಿಲ್ಲ. ಶುಕ್ರವಾರ ಬೆಳಗ್ಗೆ 5 ಗಂಟೆಗೆ ಗರ್ಭಗುಡಿಯ ಬಾಗಿಲು ತೆರೆಯಲಿದ್ದು, ಮಧ್ಯಾಹ್ನ 1.30 ರಿಂದ 3.30 ರ ವರೆಗೆ ನೈವೇದ್ಯ ಸಮಯ ಹೊರತುಪಡಿಸಿ, ಉಳಿದ ಸಮಯದಲ್ಲಿ ಭಕ್ತರು ದೇವಿಯ ದರ್ಶನ ಪಡೆದು ಪುನೀತರಾಗಬಹುದಾಗಿದೆ.
Advertisement
Advertisement
ಹಾಸನಾಂಬೆ ಹಲವು ಪವಾಡ ಸದೃಶ ಮಹಿಮೆಗಳನ್ನು ಮೈಗೂಡಿಸಿಕೊಂಡಿದ್ದಾಳೆ. ಇಷ್ಟಾರ್ಥವನ್ನು ಸಿದ್ಧಿಸುತ್ತಾಳೆ. ಎಲ್ಲಕ್ಕಿಂತ ಮುಖ್ಯವಾಗಿ ವರ್ಷದ ಹಿಂದೆ ಬಾಗಿಲು ಮುಚ್ಚುವ ವೇಳೆ ಹಚ್ಚಿಟ್ಟ ಹಣತೆ ಹಾಗೆಯೇ ಉರಿಯಲಿದೆ. ದೇವಿಯ ಮಹಿಮೆ ಅಪಾರ ಎನ್ನುವುದು ಅಸಂಖ್ಯಾತ ಭಕ್ತರ ನಂಬಿಕೆ. ಪರಂಪರೆ ಈಗಲೂ ನಡೆದುಕೊಂಡು ಬಂದಿರುವುದರಿಂದ ಪ್ರತಿ ವರ್ಷದಂತೆ ಈ ವರ್ಷವೂ ಭಕ್ತಸಾಗರವೇ ಹರಿದು ಬರುವ ಸಾಧ್ಯತೆ ಇದೆ.
Advertisement
ದೇವಿಯ ದರ್ಶನಕ್ಕೆ ಬರುವ ಭಕ್ತರಿಗಾಗಿ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯುವಾಗ ಮಳೆ-ಬಿಸಿಲಿನ ತಾಪ ತಪ್ಪಸಿಕೊಳ್ಳಲು ನೆರಳಿನ ವ್ಯವಸ್ಥೆಯನ್ನೂ ಮಾಡಲಾಗಿದೆ. ಉಳಿದಂತೆ ಲಾಡು-ಪ್ರಸಾದಕ್ಕೂ ವ್ಯವಸ್ಥೆ ಮಾಡಲಾಗಿದೆ.
ಈ ಬಾರಿ ಶುಲ್ಕವಿದೆ: ಶೀಘ್ರ ದರ್ಶನಕ್ಕೆ 300 ಮತ್ತು ಗಣ್ಯರು ಪ್ರವೇಶದ್ವಾರದಲ್ಲೇ ತೆರಳಿ ನೇರ ದರ್ಶನ ಪಡೆಯಲು ಇದೇ ಮೊದಲ ಬಾರಿ 1 ಸಾವಿರ ರೂ. ಶುಲ್ಕ ನಿಗದಿಪಡಿಸಲಾಗಿದೆ. ಈ ಬಾರಿ 9 ದಿನಗಳ ದರ್ಶನ ಇರುವುದರಿಂದ ಇದಕ್ಕಾಗಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಅಪರಾಧ ಪತ್ತೆಗಾಗಿ ಸಿಸಿ ಕ್ಯಾಮೆರಾ ಅಳವಡಿಕೆ, ವೈದ್ಯಕೀಯ ವ್ಯವಸ್ಥೆ ಜೊತೆಗೆ ಒಟ್ಟು ಮೂರು ಶಿಫ್ಟ್ ಗಳಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಅಕ್ಟೋಬರ್ 21 ರ ಮಧ್ಯಾಹ್ನ ಅಂದ್ರೆ ಬಲಿಪಾಡ್ಯಮಿಯ ಮಾರನೇ ದಿನ ಹಾಸನಾಂಬೆ ಬಾಗಿಲು ಮುಚ್ಚಲಿದೆ. ನೂಕು ನುಗ್ಗಲು ತಡೆಯುವ ಉದ್ದೇಶದಿಂದ ಅಂದೂ ಸಹ ಭಕ್ತರ ದರ್ಶನವನ್ನು ನಿರ್ಬಂಧಿಸಲಾಗಿದೆ.