ಹಾಸನ: ಹಾಸನಾಂಬೆ ದರ್ಶನಕ್ಕೆ ಬಿಟ್ಟಿದ್ದ 300 ವಿಶೇಷ ಬಸ್ ಸಂಚಾರವನ್ನು ಸರ್ಕಾರ ರದ್ದು ಮಾಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬೆಗೆ ಪ್ರಾರ್ಥನೆ ಸಲ್ಲಿಸಲು ದೇಶ-ವಿದೇಶಗಳಿಂದ ಭಕ್ತರ ದಂಡು ಹಾಸನಕ್ಕೆ ಹರಿದುಬರುತ್ತಿದೆ. ಅಪಾರ ಸಂಖ್ಯೆಯಲ್ಲಿ ಜನರು ಬಂದು ದೇವಿ ದರ್ಶನ ಪಡೆಯುತ್ತಿದ್ದಾರೆ.
ಭಕ್ತರ ಸಾರಿಗೆ ಸೌಲಭ್ಯಕ್ಕಾಗಿ ಬೆಂಗಳೂರು ಸೇರಿದಂತೆ ವಿವಿಧೆಡೆಯಿಂದ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ, ಭಕ್ತರ ಸಂಖ್ಯೆ ಮಿತಿಮೀರಿದ್ದು ನಿಯಂತ್ರಣ ಕಷ್ಟವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಕಲ್ಪಿಸಿದ್ದ 300 ಕ್ಕೂ ಹೆಚ್ಚು ವಿಶೇಷ ಬಸ್ ಸಂಚಾರವನ್ನು ರದ್ದು ಮಾಡಲಾಗಿದೆ.
ಹಾಸನಾಂಬೆ ದರ್ಶನಕ್ಕೆ ಕೆನಡಾದಿಂದ ಬಂದ ಮಹಿಳೆ ದೇವಾಲಯದ ಆಡಳಿತ ಮಂಡಳಿ ಮತ್ತು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪುಟ್ಟ ಮಗು ಜೊತೆ ದೂರದ ದೇಶದಿಂದ ಬಂದ ಮಹಿಳೆ, ದೇವಿ ದರ್ಶನಕ್ಕೆ ಪರದಾಡಿದರು.
ಸಾವಿರಾರು ರೂ. ವಿಶೇಷ ದರ್ಶನದ ಟಿಕೆಟ್ ಪಡೆದು ಐದು ಗಂಟೆ ಕಾದರೂ ಹಾಸನಾಂಬೆ ದರ್ಶನ ಸಿಗಲಿಲ್ಲ. ಸರಿಯಾದ ವ್ಯವಸ್ಥೆ ಮಾಡಿಲ್ಲ ಎಂದು ಕೆನಡಾದಿಂದ ಬಂದಿರುವ ಹಾಸನಾಂಬೆ ಭಕ್ತೆ ರೋಷಿಣಿ ಅಸಮಾಧಾನ ಹೊರಹಾಕಿದ್ದಾರೆ.