ಚಂಡೀಗಢ: ಶ್ವಾನಗಳೆರಡು ಚರಂಡಿಯಲ್ಲಿ ಬಿದ್ದ ಶಿಶುವನ್ನು ರಕ್ಷಣೆ ಮಾಡಿದ್ದು, ಆ ಕಂದಮ್ಮನನ್ನು ಉಳಿಸಿಕೊಳ್ಳಲು ಆಸ್ಪತ್ರೆ ಸಿಬ್ಬಂದಿ ಹರಸಾಹಸ ಪಡುತ್ತಿರುವ ಆತಂಕಕಾರಿ ಘಟನೆಯೊಂದು ಹರಿಯಾಣದ ಕೈತಾಲ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಪುಟ್ಟ ಮಗುವನ್ನು ಅದರ ತಾಯಿಯೇ ಪ್ಲಾಸ್ಟಿಕ್ ನಲ್ಲಿ ಕಟ್ಟಿ ಚರಂಡಿಗೆ ಬಿಸಾಡಿದ್ದಾಳೆ. ಈ ದೃಶ್ಯ ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಶನಿವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ನಡೆದಿದೆ.
Advertisement
ಸಿಸಿಟಿವಿಯಲ್ಲೇನಿತ್ತು?:
ಮುಂಜಾನೆ ಮಹಿಳೆಯೊಬ್ಬಳು ಕೈತಾಲ್ ನಲ್ಲಿರುವ ಡೋಗ್ರಾ ಗೇಟ್ ಬಳಿ ನಡೆದುಕೊಂಡು ಬರುತ್ತಾಳೆ. ಪಕ್ಕದಲ್ಲೇ ಚರಂಡಿಯೊಂದಿದ್ದು, ಮಹಿಳೆ ತನ್ನ ಕೈಯಲ್ಲಿದ್ದ ವಸ್ತುವನ್ನು ಎಸೆಯುತ್ತಾಳೆ. ಹೀಗೆ ಚರಂಡಿಗೆ ಬಿದ್ದ ಮಗು ಜೋರಾಗಿ ಬಿದ್ದು ಅಳಲು ಆರಂಭಿಸಿದೆ. ಈ ಶಬ್ಧ ಕೇಳಿ ಪಕ್ಕದಲ್ಲಿದ್ದ ಬೀದಿ ನಾಯಿಗಳು ಬೊಗಳಲು ಆರಂಭಿಸಿವೆ. ಅಲ್ಲದೆ ಕೂಡಲೇ ಶಬ್ಧ ಕೇಳಿ ಬಂದ ಕಡೆ ದೌಡಾಯಿಸಿವೆ. ಹೀಗೆ ಚರಂಡಿ ಬಳಿ ಬಂದ ನಾಯಿಗಳು ಮಗುವನ್ನು ಚರಂಡಿಯಿಂದ ಮೇಲಕ್ಕೆತ್ತಿವೆ.
Advertisement
ನಾಯಿಗಳು ಏನು ಮಾಡುತ್ತಿವೆ ಎಂದು ನಿಂತು ನೋಡುತ್ತಿದ್ದ ಜನರಿಗೆ ಅದು ಮಗು ಎಂದು ಗೊತ್ತಾದ ಕೂಡಲೇ ಎಚ್ಚೆತ್ತು ಸ್ಥಳೀಯರು ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಈ ವಿಷಯ ತಿಳಿದ ತಕ್ಷಣವೇ ಅಧಿಕಾರಿಗಳು ಸ್ಥಳಕ್ಕೆ ಬಂದು ಶಿಶುವನ್ನು ಸ್ಥಳೀಯ ಕೈತಾಲ್ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
Advertisement
ಶಿಶು ಬದುಕಿದ್ದು, ಆದರೆ ಆಕೆಯ ಸ್ಥಿತಿ ಚಿಂತಾಜನಕವಾಗಿದೆ. ಮಗು ಸರಿಸುಮಾರು 100 ಗ್ರಾಂ ಇದ್ದು, ಆಕೆಯನ್ನು ಬದುಕಿಸುವ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಆಸ್ಪತ್ರೆಯ ವೈದ್ಯರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಶಿಶುವಿನ ಆರೋಗ್ಯ ಸುಧಾರಿಸಿದ ಬಳಿಕ ಮಗುವನ್ನು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ(ಎನ್‍ಸಿಪಿಸಿಆರ್)ಗೆ ಹಸ್ತಾಂತರಿಸಲಾಗುವುದು. ಆ ಬಳಿಕ ಅಲ್ಲಿಂದ ಹಲವು ಪ್ರಕ್ರಿಯೆಗಳ ಮೂಲಕ ಪಂಚಕುಲ ಅನಾಥಾಶ್ರಮಕ್ಕೆ ಮಗುವನ್ನು ನೀಡಲಾಗುವುದು ಎಂದು ಮತ್ತೊಬ್ಬ ವೈದ್ಯ ತಿಳಿಸಿದ್ದಾರೆ.
ಶಿಶುವನ್ನು ಚರಂಡಿಗೆ ಬಿಸಾಕಿದ ಸಂಬಂಧ ಆಕೆಯ ತಾಯಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಘಟನೆ ನಡೆದ ಸುತ್ತಮುತ್ತಲಿನ ಸಿಸಿಟಿವಿಗಳನ್ನು ಪರಿಶೀಲಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.