ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹರ್ಯಾಣದಲ್ಲಿ ಸೋಲಲು ನಾನು ಕಾರಣವಾಗಿದ್ದರೆ ನನ್ನನ್ನು ಶೂಟ್ ಮಾಡಿ ಎಂದು ದೆಹಲಿಯಲ್ಲಿ ನಡೆದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಅಧ್ಯಕ್ಷ ಅಶೋಕ್ ತನ್ವರ್ ಸಿಡಿದೆದ್ದಿದ್ದಾರೆ.
ಲೋಕಸಭಾ ಚುನಾವಣಾ ಸೋಲಿನ ಸಂಬಂಧ ದೆಹಲಿಯಲ್ಲಿ ಕಾಂಗ್ರೆಸ್ ಸಭೆ ನಡೆಸಲಾಗಿತ್ತು. ಈ ಸಭೆಯ ನೇತೃತ್ವವನ್ನು ಸೋನಿಯಾ ಗಾಂಧಿ ಆಪ್ತ ಗುಲಾಂ ನಬಿ ಆಜಾದ್ ವಹಿಸಿಕೊಂಡಿದ್ದರು. ಸಭೆ ನಡೆಯುತ್ತಿದ್ದ ವೇಳೆ ಹರ್ಯಾಣದಲ್ಲಿ ಸೋಲಿಗೆ ಅಧ್ಯಕ್ಷ ಅಶೋಕ್ ತನ್ವರ್ ಕಾರಣವೆಂದು ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ ಬಣದಿಂದ ಆರೋಪಿಸಿಲಾಯಿತು. ಈ ಆರೋಪಕ್ಕೆ ಸಿಟ್ಟಿಗೆದ್ದ ಅಶೋಕ್ ತನ್ವರ್ ಅವರು ಈ ನನ್ನನ್ನ ಮುಗಿಸಬೇಕು ಅಂತಿದ್ದರೆ ನನಗೆ ಶೂಟ್ ಮಾಡಿ, ಹರ್ಯಾಣದಲ್ಲಿ ಕೈ ಸೋಲಿಗೆ ನಾನು ಕಾರಣವಾಗಿದ್ದರೆ ನನ್ನನ್ನು ಶೂಟ್ ಮಾಡಿ ಕೊಂದು ಬಿಡಿ ಎಂದು ಆರ್ಭಟಿಸಿದ್ದಾರೆ.
ನಾಯಕರ ಈ ಜಟಾಪಟಿಕೆ ಬೇಸತ್ತ ಗುಲಾಂ ನಬಿ ಆಜಾದ್ ಅವರು ಸಭೆಯ ಅರ್ಧದಲ್ಲೇ ಎದ್ದು ಹೋದರು ಎಂದು ವರದಿಯಾಗಿದೆ. ಇದರಿಂದ ಲೋಕಸಭೆಯಲ್ಲಿ ಕೈ ಹೀನಾಯ ಸೋಲಿನ ಬಳಿಕ ಕಾಂಗ್ರೆಸ್ ಹೈಕಮಾಂಡ್ ನಿಯಂತ್ರಣ ಕಳೆದುಕೊಳ್ತಿದಿಯಾ ಎಂಬ ಅನುಮಾನ ಹುಟ್ಟುಕೊಂಡಿದೆ.
ಇದೇ ಅಕ್ಟೋಬರ್ ತಿಂಗಳಲ್ಲಿ ಹರ್ಯಾಣದಲ್ಲಿ ವಿಧಾನಸಭಾ ಚುನಾವಣೆ ನಡೆಯವ ಸಾಧ್ಯತೆಯಿದೆ. ಹೀಗಾಗಿ ಕಾಂಗ್ರೆಸ್ ಸಭೆಯಲ್ಲಿ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಮಾತನಾಡುವಾಗ ನಾಯಕರ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಸಭೆಯಲ್ಲಿ ಆಜಾದ್ ಅವರು ಹರ್ಯಾಣದಲ್ಲಿ ನಡೆಯುವ ಚುನಾವಣೆಗೆ ಹೇಗೆಲ್ಲಾ ತಯಾರಿ ಮಾಡಿಕೊಳ್ಳಬೇಕು ಎಂಬ ಚರ್ಚೆ ನಡೆಯುತಿತ್ತು. ಅಲ್ಲದೆ ಹರ್ಯಾಣದ ಪ್ರತಿ ಜಿಲ್ಲೆಯಲ್ಲೂ ಪಕ್ಷದ ಸಭೆ ನಡೆಸಿ ಮತದಾರರನ್ನು ಸೆಳೆಯುವ ಕೆಲಸವಾಗಬೇಕು ಎಂದು ನಿರ್ಧರಿಸಲಾಗಿತ್ತು ಎನ್ನಲಾಗಿದೆ.
ಈ ವೇಳೆ ಸಭೆ ಮಧ್ಯೆ ಹರ್ಯಾಣ ನಾಯಕರ ನಡುವೆ ಜಗಳ ಆರಂಭವಾಯ್ತು. ಒಬ್ಬರ ಮೇಲೊಬ್ಬರು ಆರೋಪಗಳ ಸುರಿಮಳೆ ಸುರಿಸಿದರು. ಆಗ ಹರ್ಯಾಣದಲ್ಲಿ ಕಾಂಗ್ರೆಸ್ ಸೋಲಲು ತನ್ವರ್ ಅವರೇ ಕಾರಣ ಎಂದು ಹೂಡಾ ಬಣದಿಂದ ಆರೋಪ ಕೇಳಿಬಂದಿದೆ. ಹೀಗಾಗಿ ರೊಚ್ಚಿಗೆದ್ದ ತನ್ವರ್ ಅವರು ನಾನು ಒಬ್ಬಂಟಿಯಾಗಿಯೇ ನಿಮ್ಮೆಲ್ಲರನ್ನು ಎದುರಿಸುತ್ತೇನೆ. ಒಂದುವೇಳೆ ನನ್ನನ್ನು ಸಾಯಿಸಬೇಕಾದರೆ ನನಗೆ ಗುಂಡು ಹೊಡೆಯಿರಿ ಎಂದು ಸಭೆಯಿಂದ ಹೊರನಡೆದರು.
ಬಳಿಕ ಪಕ್ಷದ ಹಿರಿಯ ನಾಯಕರು ಈ ಬಗ್ಗೆ ಎಲ್ಲರಿಗೂ ಕಿವಿ ಮಾತು ಹೇಳಿದರು. ನೀವು ಈ ರೀತಿ ಒಬ್ಬರ ಮೇಲೋಬ್ಬರು ಆರೋಪ ಮಾಡಿಕೊಂಡು ದ್ವೇಷ ಸಾಧಿಸಿದರೆ ಎನೂ ಲಾಭವಾಗುವುದಿಲ್ಲ. ನಾವು ಚುನಾವಣೆಯನ್ನು ಗೆದ್ದು ಆಡಳಿತಕ್ಕೆ ಬರಬೇಕೆಂದರೆ ಒಗ್ಗಟ್ಟಿನಿಂದ ಇರಬೇಕು ಎಂದರು. ಬಳಿಕ ಎಲ್ಲರೂ ಆಜಾದ್ ಅವರಿಗೆ ಕ್ಷಮೆ ಕೇಳಿ ಮತ್ತೆ ಸಭೆಯನ್ನು ಮುಂದುವರಿಸಿದರು. ಆದರೆ ಅಧಿಕೃತವಾಗಿ ಯಾವುದೇ ತಿರ್ಮಾನಗಳನ್ನು ಕೂಡ ಸಭೆಯಲ್ಲಿ ತೆಗೆದುಕೊಂಡಿಲ್ಲ ಎಂದು ಕೈ ನಾಯಕರು ತಿಳಿಸಿದರು.