ನವದೆಹಲಿ: ವಿಶ್ವಕಪ್ ವಿಜೇತ ಮಹಿಳಾ ಚಾಂಪಿಯನ್ಸ್ ತಂಡವನ್ನು ಪ್ರಧಾನಿ ಮೋದಿ (PM Modi) ಇಂದು ಭೇಟಿಯಾಗಿದ್ದಾರೆ. ಈ ವೇಳೆ ತಂಡದ ಆಟಗಾರ್ತಿಯರೆಲ್ಲರೂ ಸಹಿಹಾಕಿದ `ನಮೋ 1′ ಎಂದು ಬರೆದಿರುವ ಜೆರ್ಸಿಯನ್ನು ಮೋದಿಗೆ ಉಡುಗೊರೆಯಾಗಿ ನೀಡಿದರು.
ಬುಧವಾರ (ನ.5) ತಮ್ಮ ನಿವಾಸದಲ್ಲಿ ಭೇಟಿಯಾದ ಮೋದಿ, ಮಹಿಳಾ ತಂಡದ ಆಟಗಾರ್ತಿಯರೆಲ್ಲರನ್ನೂ ಆತ್ಮೀಯವಾಗಿ ಬರಮಾಡಿಕೊಂಡರು. ಈ ವೇಳೆ ನಾಯಕಿ ಹರ್ಮನ್‌ಪ್ರೀತ್ ಪಡೆಯೊಂದಿಗೆ ಕುಳಿತು ಮಾತುಕತೆ ನಡೆಸಿದರು. ಈ ವೇಳೆ ಆಟಗಾರ್ತಿಯರು ಪಟ್ಟ ಶ್ರಮ, ಈ ಹಂತಕ್ಕೆ ತಲುಪಲು ತಾವು ತೆಗೆದುಕೊಂಡ ನಿರ್ಣಯ ಸೇರಿದಂತೆ ಎಲ್ಲದರ ಬಗ್ಗೆ ಅನುಭವವನ್ನು ಹಂಚಿಕೊಂಡರು.ಇದನ್ನೂ ಓದಿ: ವಿಶ್ವಕಪ್ ಗೆದ್ದ ವನಿತೆಯರಿಗೆ ಸಿಕ್ಕಿದ್ದು ಬರೋಬ್ಬರಿ 90 ಕೋಟಿ ಬಹುಮಾನ – ಹೇಗೆ ಅಂತೀರಾ?
ಈ ವೇಳೆ ನಾಯಕಿ ಹರ್ಮನ್‌ಪ್ರೀತ್ ಕೌರ್, 2017ರಲ್ಲಿ ಮಹಿಳಾ ತಂಡವು ಟ್ರೋಫಿ ಇಲ್ಲದೇ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದನ್ನು ನೆನಪಿಸಿಕೊಂಡರು. ಆದರೆ ನಾವು ಈ ಬಾರಿ ಚಾಂಪಿಯನ್ ಪಟ್ಟದೊಂದಿಗೆ ಅವರನ್ನು ಭೇಟಿಯಾಗಿರುವುದು ಇನ್ನಷ್ಟು ಖುಷಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಪ್ರಧಾನಿಯವರನ್ನು ಮತ್ತೆ ಭೇಟಿಯಾಗುವ ಅವಕಾಶ ಸಿಗಲಿ ಎಂದು ಹೇಳಿದರು.
ಉಪನಾಯಕಿ ಸ್ಮೃತಿ ಮಂಧನಾ ಮಾತನಾಡಿ, ಪ್ರಧಾನಿಯವರ ಮಾತುಗಳು ತುಂಬಾ ಪ್ರೇರಣೆ ನೀಡುತ್ತವೆ. ನೀವು ತಂಡಕ್ಕೆ ನಿರಂತವಾಗಿ ಸ್ಫೂರ್ತಿ ನೀಡುತ್ತಾ ಬಂದಿದ್ದೀರಿ. ನಾವು ಮಾತ್ರವಲ್ಲದೇ ಭಾರತದ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಅವರೆಲ್ಲರಿಗೂ ನೀವು ಪ್ರೋತ್ಸಾಹ ನೀಡುತ್ತಿದ್ದೀರಿ ಎಂದು ತಿಳಿಸಿದರು.
ಇನ್ನೂ ಇದೇ ವೇಳೆ ದೀಪ್ತಿ ಶರ್ಮಾ ಮಾತನಾಡಿ, ಪ್ರಧಾನಿ ಮೋದಿಯವರನ್ನು ಚಾಂಪಿಯನ್ ಆದ ಬಳಿಕ ಭೇಟಿಯಾಗಲು ನಾನು ಕಾತರದಿಂದ ಕಾಯುತ್ತಿದ್ದೆ. ಇದಕ್ಕೂ ಮುನ್ನ 2017ರಲ್ಲಿ ಭೇಟಿಯಾದಾಗ ಕನಸುಗಳನ್ನು ಬೆನ್ನತ್ತಿ, ಅದಕ್ಕಾಗಿ ಶ್ರಮಪಡಿ ಎಂದು ತಿಳಿಸಿದ್ದರು. ಅವರ ಸಲಹೆ ಈಗ ನನಸಾಗಿದೆ ಎಂದು ತಿಳಿಸಿದರು.
ಸಂವಾದದ ಬಳಿಕ ಆಟಗಾರ್ತಿಯರೆಲ್ಲರೂ ಟ್ರೋಫಿ ಹಿಡಿದುಕೊಂಡು ಮೋದಿಯವರೊಂದಿಗೆ ಫೋಟೊ ತೆಗೆಸಿಕೊಂಡರು. ಇದೇ ವೇಳೆ ತಂಡದ ಎಲ್ಲರ ಸಹಿಯಿರುವ `ನಮೋ 1′ ಎಂದು ಬರೆದಿರುವ ಜೆರ್ಸಿಯನ್ನು ಪ್ರಧಾನಿ ಮೋದಿಗೆ ಉಡುಗೊರೆಯಾಗಿ ನೀಡಿದರು.ಇದನ್ನೂ ಓದಿ: 2011ರಲ್ಲಿ ಧೋನಿ, 2025ರಲ್ಲಿ ಕೌರ್ – ಏಕದಿನ ವಿಶ್ವಕಪ್ ಗೆದ್ದ ಭಾರತದ 3ನೇ ಕ್ಯಾಪ್ಟನ್




