ನವದೆಹಲಿ: ವ್ಯಾಪಾರ ಒಪ್ಪಂದದಿಂದ (Trade Deal) ಆಮದು ಮಾಡಿಕೊಂಡ ಅಮೆರಿಕದ (USA) ಹಾರ್ಲೆ- ಡೇವಿಡ್ಸನ್ ಬೈಕ್‌ಗಳ ಬೆಲೆ ಭಾರತದಲ್ಲಿ (India) ಭಾರೀ ಇಳಿಕೆಯಾಗಲಿದೆ.
800 ಸಿಸಿಗಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯ ಹೊಂದಿರುವ ಉನ್ನತ ಮಟ್ಟದ ಮೋಟಾರ್‌ಸೈಕಲ್‌ಗಳ ಮೇಲಿನ ಸುಂಕವನ್ನು ತೆಗೆದುಹಾಕಬೇಕೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮೊದಲಿನಿಂದಲೂ ಬೇಡಿಕೆ ಇಟ್ಟಿದ್ದರು.
ವ್ಯಾಪಾರ ಒಪ್ಪಂದದಿಂದ ಸಂಪೂರ್ಣವಾಗಿ ನಿರ್ಮಿಸಿ ಆಮದು ಮಾಡಿಕೊಂಡ ಹಾರ್ಲೆ-ಡೇವಿಡ್ಸನ್ (Harley-Davidson) ಮೋಟಾರ್‌ಸೈಕಲ್‌ಗಳು ಬೆಲೆ ಬಹಳ ಕಡಿಮೆಯಾಗಲಿದೆ. ಈ ಮೋಟಾರ್‌ಸೈಕಲ್‌ಗಳಿಗೆ ಪ್ರಸ್ತುತ 40% ಮೂಲ ಕಸ್ಟಮ್ಸ್ ಸುಂಕ ಮತ್ತು 4% ಸಾಮಾಜಿಕ ಕಲ್ಯಾಣ ಸರ್‌ಚಾರ್ಜ್ ಸೇರಿದಂತೆ 44% ಆಮದು ಸುಂಕವನ್ನು ಹಾಕಲಾಗುತ್ತಿತ್ತು. ಪರಿಣಾಮ 14 ಲಕ್ಷದ ಬೈಕಿಗೆ ಸುಮಾರು 6 ಲಕ್ಷ ರೂ.ವನ್ನು ಸುಂಕ ಬೀಳುತ್ತಿತ್ತು.
ಈ ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳಲ್ಲಿ ಭಾರತದಲ್ಲಿ 14.54 ಲಕ್ಷ ರೂ.ನಿಂದ 45.75 ಲಕ್ಷ ರೂ.ವರೆಗಿನ 800-1600 ಸಿಸಿ ಎಂಜಿನ್‌ಗಳನ್ನು ಹೊಂದಿರುವ ಸಂಪೂರ್ಣ ಆಮದು ಮಾಡಿಕೊಂಡ 187 ಹಾರ್ಲೆ-ಡೇವಿಡ್ಸನ್ ಬೈಕ್‌ಗಳು ಮಾರಾಟವಾಗಿದೆ.
ಭಾರತದಲ್ಲಿ ಹಾರ್ಲೆಯ HD X440 ಮತ್ತು HD X440 T ಮೋಟಾರ್‌ಸೈಕಲ್‌ಗಳು 440 ಸಿಸಿ ಎಂಜಿನ್ ಹೊಂದಿದೆ. ಇವುಗಳ ಬೆಲೆ 2.35 ಲಕ್ಷ ಮತ್ತು 2.79 ಲಕ್ಷ ರೂ. ಇದ್ದು ಇವುಗಳನ್ನು ಹೀರೋ ಮೋಟೋಕಾರ್ಪ್ ರಾಜಸ್ಥಾನದ ನೀಮ್ರಾಣದಲ್ಲಿರುವ ತನ್ನ ಸೌಲಭ್ಯದಲ್ಲಿ ಉತ್ಪಾದನೆ ಮತ್ತು ವಿತರಣಾ ಒಪ್ಪಂದದ ಅಡಿಯಲ್ಲಿ ಉತ್ಪಾದಿಸುತ್ತದೆ.
ಹೆಚ್ಚಿನ ಆಮದು ಸುಂಕ ಇರುವ ಕಾರಣ ಹೀರೋ ಮೋಟೋಕಾರ್ಪ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಸ್ಥಳೀಯವಾಗಿ ಅಭಿವೃದ್ಧಿ ಪಡಿಸಿದ್ದರಿಂದ ಕಡಿಮೆ ಬೆಲೆ ಮಾರಾಟ ಮಾಡುತ್ತಿದೆ.
ಹಾರ್ಲೆ ಡೇವಿಡ್ಸನ್ ಬೈಕಿನ ಮೇಲೆ ಹೆಚ್ಚು ಆಮದು ಸುಂಕ ಹೇರಿದ್ದ ಭಾರತದ ವಿರುದ್ಧ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕಿಡಿಕಾರುತ್ತಲೇ ಬಂದಿದ್ದರು. ನಾವು ಹಾರ್ಲೆಯನ್ನು ಭಾರತಕ್ಕೆ ಕಳುಹಿಸಿದರೆ ಅವರು 100% ತೆರಿಗೆ ವಿಧಿಸುತ್ತಾರೆ. ಭಾರತದವರು ಸಾಕಷ್ಟು ಸಂಖ್ಯೆಯಲ್ಲಿ ಮೋಟಾರ್ ಸೈಕಲ್ ತಯಾರಿಸಿ ನಮಗೆ ಕಳುಹಿಸುತ್ತಿದ್ದಾರೆ. ಆದರೆ ಅಮೆರಿಕದಲ್ಲಿ ಈ ಬೈಕುಗಳಿಗೆ ಯಾವುದೇ ತೆರಿಗೆ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.


