– ಇವಿಎಂ ಮೇಲೆ ಈಗಲೂ ಅನುಮಾನ
– ಪ್ರಚಾರಕ್ಕೆ ತೆರಳಿದ 3ರಲ್ಲಿ 2 ಕ್ಷೇತ್ರದಲ್ಲಿ ಗೆಲುವು
ಬೆಂಗಳೂರು: ದೇಶದಲ್ಲಿ ಮೋದಿ ನಾಯಕತ್ವದ ವಿಶ್ವಾಸ ಕಡಿಮೆಯಾಗುತ್ತಿದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಹಾರಾಷ್ಟ್ರ ಹಾಗೂ ಹರ್ಯಾಣ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ವಿಧಾನಸೌಧದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎರಡೂ ರಾಜ್ಯಗಳಲ್ಲಿ ಪೂರ್ಣ ಪ್ರಮಾಣದ ಫಲಿತಾಂಶ ಬಂದಿಲ್ಲ. ಕಳೆದ ಬಾರಿಗೆ ಹೋಲಿಸಿದರೆ ಬಿಜೆಪಿಗೆ ಕಡಿಮೆ ಸ್ಥಾನಗಳು ಬಂದಿವೆ. ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಕಡಿಮೆ ಸ್ಥಾನ ಬಂದಿವೆ. ಹರ್ಯಾಣದಲ್ಲಿ ಅತಂತ್ರ ಫಲಿತಾಂಶ ಬಂದಿದೆ. ದೇಶದಲ್ಲಿ ಮೋದಿ ನಾಯಕತ್ವದ ವಿಶ್ವಾಸ ಕಡಿಮೆಯಾಗುತ್ತಿದೆ ಎನ್ನುವುದಕ್ಕೆ ಈ ಫಲಿತಾಂಶ ಉದಾಹರಣೆ ಎಂದರು.
ಎಲ್ಲ ಸಮೀಕ್ಷೆಗಳಲ್ಲೂ ಬಿಜೆಪಿಗೆ ಭಾರೀ ಬಹುಮತ ಬರುತ್ತದೆ ಎಂದು ಹೇಳಲಾಗಿತ್ತು. ಈಗ ಎಲ್ಲ ಸಮೀಕ್ಷೆಗಳು ಹುಸಿಯಾಗಿದೆ. ಕಾಂಗ್ರೆಸ್ ಪಕ್ಷಕ್ಕೆ ಸಂಪನ್ಮೂಲ ಕೊರತೆ ಇತ್ತು. ಸಾಕಷ್ಟು ನಾಯಕರು ಪಕ್ಷಕ್ಕೆ ಗುಡ್ ಬೈ ಹೇಳಿದ್ದರು. ಕಾಂಗ್ರೆಸ್ ಪ್ರತಿಪಕ್ಷ ನಾಯಕರೇ ಬಿಜೆಪಿಗೆ ಹೋಗಿದ್ದರು ಎಂದು ತಿಳಿಸಿದರು.
ಹರ್ಯಾಣದಲ್ಲಿ ಯಾವುದೇ ಕಾರಣಕ್ಕೂ ಬಿಜೆಪಿ ಸರ್ಕಾರ ರಚನೆ ಮಾಡಲು ಸಾಧ್ಯವೇ ಇಲ್ಲ. ಬಿಜೆಪಿಯವರು ಅವರ ಸಾಧನೆಯನ್ನ ಹೇಳಿ ಚುನಾವಣೆಗೆ ಹೋಗಿಲ್ಲ. ಪಾಕಿಸ್ತಾನ, ಕಾಶ್ಮೀರ ಅಂತ ಚುನಾವಣೆಗೆ ಹೋಗಿದ್ದರು. ಭಾವನಾತ್ಮಕ ವಿಚಾರಗಳ ಮೇಲೆ ಚುನಾವಣೆಗೆ ಹೋದರು. ಇದನ್ನು ಮತದಾರರು ತಿರಸ್ಕಾರ ಮಾಡಿದ್ದಾರೆ. ಬಿಜೆಪಿಗೆ ಶೇಕಡಾವಾರು ಮತಗಳು ಕಡಿಮೆಯಾಗಿದೆ. ಕಳೆದ ಬಾರಿಗಿಂತ ಕಾಂಗ್ರೆಸ್ ಗೆ ಶೇಕಡವಾರು ಮತಗಳು ಈಗ ಹೆಚ್ಚಾಗಿ ಬಂದಿದೆ. ಸಂಪನ್ಮೂಲ ಕೊರತೆಯಿಂದ ನಮಗೆ ಕಡಿಮೆ ಸ್ಥಾನ ಬಂದಿವೆ ಎಂದರು.
ಒಂದು ವೇಳೆ ಶಿವಸೇನೆ ಕೈಕೊಟ್ಟರೆ ಮಹಾರಾಷ್ಟ್ರ ದಲ್ಲಿ ಸರ್ಕಾರ ರಚಿಸಲು ಆಗಲ್ಲ. ಹರ್ಯಾಣದಲ್ಲಿ ಬಿಜೆಪಿ ಅಧಿಕಾರ ಹಿಡಿಯುವುದು ಕೂಡ ಸಂಶಯ. ಜನ ಮೋದಿ ಅವರನ್ನು ತಿರಸ್ಕಾರ ಮಾಡಿದ್ದಾರೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಎರಡೂ ರಾಜ್ಯಗಳಲ್ಲಿ ಮತಗಳ ಪ್ರಮಾಣವೂ ಕಡಿಮೆ ಆಗಿದೆ ಎಂದು ಹೇಳಿದರು.
ಮೋದಿ ರ್ಯಾಲಿ ಮೇಲೆ ರ್ಯಾಲಿ ಮಾಡಿದ್ರೂ ಅವರ ಮತ್ತು ಪಕ್ಷದ ವರ್ಚಸ್ಸು ಕುಂದಿದೆ. ಇದೇ ಈ ಫಲಿತಾಂಶದ ದಿಕ್ಸೂಚಿ. ಹರ್ಯಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಅಂತ ನಿರೀಕ್ಷೆ ಮಾಡಿದ್ದೆ. ಆದರೆ ಅದು ಆಗಿಲ್ಲ. ಮಹಾರಾಷ್ಟ್ರದ ಮೂರು ಕ್ಷೇತ್ರಗಳಲ್ಲಿ ಪ್ರಚಾರ ಮಾಡಿದ್ದೆ. ಈ ಪೈಕಿ ಎರಡರಲ್ಲಿ ಗೆದ್ದಿದ್ದೇವೆ ಎಂದರು.
ಇವಿಎಂ ಮೇಲೆ ಅನುಮಾನ:
ಇವಿಎಂ ಮೇಲೆ ಈಗಲೂ ನನಗೆ ಅನುಮಾನ ಇದೆ. ಇವಿಎಂ ದುರುಪಯೋಗವಾಗುತ್ತದೆ ಎಂದು ಲೋಕಸಭಾ ಚುನಾವಣೆಯಲ್ಲಿ ನಾನು ಹೇಳಿದ್ದೆ. ಇವಿಎಂ, ವಿವಿ ಪ್ಯಾಟ್ ತಿರುಚಲು ಸಾಧ್ಯ ಎಂದು ಪತ್ರಿಕೆಗಳಲ್ಲಿ ಬಂದಿವೆ. ಇದರಿಂದ ಸಂದೇಹಗಳು ಜಾಸ್ತಿಯಾಗುತ್ತಿದೆ. ಇವಿಎಂ ಮೇಲೆ ಅನುಮಾನ ಇರೋದ್ರಿಂದ ಬ್ಯಾಲೆಟ್ ಪೇಪರ್ ಮಾಡಲಿ ಎಂದು ತಿಳಿಸಿದರು.
ಗುಜರಾತ್ ನಲ್ಲಿ ಪಕ್ಷಾಂತರ ಮಾಡಿದವರನ್ನ ಜನ ಸೋಲಿಸಿದ್ದಾರೆ. ಪಕ್ಷಾಂತರಿಗಳಿಗೆ ಜನ ತಕ್ಕ ಪಾಠ ಕಲಿಸುತ್ತಾರೆ. ಇದು ಕರ್ನಾಟಕದಲ್ಲಿ ಪುನಾರವರ್ತನೆ ಆಗಲಿದೆ. 15 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ. ಯಡಿಯೂರಪ್ಪ ರಾಜೀನಾಮೆ ಕೊಡುತ್ತಾರೆ. ಬಿಜೆಪಿ ಸರ್ಕಾರ ಬೀಳಲಿದೆ. ಸರ್ಕಾರ ಬಿದ್ದ ಬಳಿಕ ಚುನಾವಣೆಗೆ ನಾವು ಹೋಗುತ್ತೇವೆ. ಬಹುಮತ ಇಲ್ಲದೇ ಬಿಜೆಪಿ ಸರ್ಕಾರ ರಚನೆ ಮಾಡಿತ್ತು. ನಾವು ಆ ತಪ್ಪು ಮಾಡಲ್ಲ ಎಂದು ಹೇಳಿದರು.