ಭೂಪಿಂದರ್‌ ಹೂಡಾಗೆ ಮಣೆ ಹಾಕಿ ಕೈ ಸುಟ್ಟುಕೊಂಡ ಕಾಂಗ್ರೆಸ್!‌

Public TV
3 Min Read
Bhupinder Singh Hooda and rahul gandhi

ನವದೆಹಲಿ: ಹರಿಯಾಣದಲ್ಲಿ (Hariyana) ಸೋಲಿಗೆ ಕಾರಣ ಯಾರು ಈ ಪ್ರಶ್ನೆಗೆ ಸದ್ಯಕ್ಕೆ ಕಾಂಗ್ರೆಸ್‌ (Congress) ಬಳಿ ಸ್ಪಷ್ಟವಾದ ಉತ್ತರ ಇಲ್ಲ. ಆದರೆ ಬಹುತೇಕ ಅಲ್ಲಿನ ಕೈ ನಾಯಕರು ಮಾಜಿ ಸಿಎಂ, ಜಾಟ್‌ ನಾಯಕ ಭೂಪಿಂದರ್ ಸಿಂಗ್ ಹೂಡಾ (Bhupinder Singh Hooda) ಅವರಿಂದಲೇ ಹರಿಯಾಣದಲ್ಲಿ ನಮಗೆ ಸೋಲಾಗಿದೆ ಎಂಬ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದಾರೆ.

2019ರ ಚುನಾವಣೆಯಯಲ್ಲಿ ಹರಿಯಾಣದಲ್ಲಿ ಅತಂತ್ರ ಫಲಿತಾಂಶ ಬಂದಿತ್ತು. ಬಿಜೆಪಿ 40 ಸ್ಥಾನ ಗೆದ್ದರೆ ಕಾಂಗ್ರೆಸ್‌ 31 ಸ್ಥಾನ ಗೆದ್ದುಕೊಂಡಿತ್ತು. ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಬಹುಮತ ಸಿಕ್ಕಿರಲಿಲ್ಲ. ಈ ಸಂದರ್ಭದಲ್ಲಿ ಮಾಜಿ ಸಿಎಂ ಭೂಪಿಂದರ್ ಸಿಂಗ್ ಅವರು ಸೂಚಿಸಿದ ಅಭ್ಯರ್ಥಿಗಳಿಗೆ ಟಿಕೆಟ್‌ ಹಂಚಿಕೆ ಮಾಡಿದ್ದರೆ ಜಯಗಳಿಸುತ್ತಿತ್ತು ಎಂಬ ವಿಶ್ಲೇಷಣೆ ಕಾಂಗ್ರೆಸ್‌ ವಲಯದಿಂದ ವ್ಯಕ್ತವಾಗಿತ್ತು.

2024ರ ಲೋಕಸಭಾ ಚುನಾವಣೆಯಲ್ಲಿ 5 ಕ್ಷೇತ್ರಗಳಲ್ಲಿ ಜಯಗಳಿಸಿದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಭೂಪಿಂದರ್ ಸಿಂಗ್ ಹೂಡಾ ಅವರ ಕೈ ಮೇಲಾಯಿತು. ದಲಿತ ನಾಯಕಿ, ಸಿರ್ಸಾ ಕ್ಷೇತ್ರದ ಸಂಸದೆ ಕುಮಾರಿ ಶೆಲ್ಜಾ ಮತ್ತು ರಣ್‌ದೀಪ್‌ ಸಿಂಗ್‌ ಸುರ್ಜೇವಾಲಾ ಅವರು ಹರಿಯಾಣದವರೇ ಆಗಿದ್ದರೂ ಹೈಕಮಾಂಡ್‌ ಭೂಪಿಂದರ್ ಹೂಡಾ ಅವರಿಗೆ ಮಣೆ ಹಾಕಿತು. ಪರಿಣಾಮ ಒಟ್ಟು 90 ಕ್ಷೇತ್ರಗಳ ಪೈಕಿ 72 ಮಂದಿ ತನ್ನ ಬೆಂಬಲಿಗರಿಗೆ ಟಿಕೆಟ್‌ ನೀಡುವಲ್ಲಿ ಹೂಡಾ ಯಶಸ್ವಿಯಾದರು. ಟಿಕೆಟ್‌ ಹಂಚಿಕೆಯಲ್ಲಿ ಹೂಡಾ ಬೆಂಬಲಿಗರಿಗೆ ಹೈಕಮಾಂಡ್‌ ಮಣೆ ಹಾಕಿದ್ದು ಮಾತ್ರವಲ್ಲೇ ಹರಿಯಾಣದಲ್ಲಿ ಹೂಡಾಗೆ ಫುಲ್‌ ಹ್ಯಾಂಡ್‌ ನೀಡಿದ್ದು ಕಾಂಗ್ರೆಸ್‌ ಸೋಲಿಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಇದನ್ನೂ ಓದಿ: ವಿನೇಶ್‌ ಫೋಗಟ್ ಹೋದಲ್ಲೆಲ್ಲ ಸತ್ಯನಾಶವಾಗಲಿದೆ: ಬ್ರಿಜ್ ಭೂಷಣ್ ಶರಣ್ ಸಿಂಗ್

Rahul Gandhi Bhupinder Hooda Kumari Shailja 1

ಹೂಡಾ ಅವರು ಪಕ್ಷದ ಮೇಲೆ ಏಕಸ್ವಾಮ್ಯ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿ ಕಿರಣ್ ಚೌಧರಿ ಮತ್ತು ಕುಲದೀಪ್ ಬಿಷ್ಣೋಯ್ ಅವರಂತಹ ಹಿರಿಯ ನಾಯಕರು ಪಕ್ಷದಿಂದ ನಿರ್ಗಮಿಸಿದ್ದರು.

ಹೂಡಾ ಅವರು ಮುಂದಿನ ಸಿಎಂ ನಾನೇ ಎಂಬಂತೆ ವರ್ತಿಸುತ್ತಿದ್ದರು. ಹರಿಯಾಣದಲ್ಲಿ ಜಾಟ್‌ ಸಮುದಾಯದ ಜನ 27% ಇದ್ದರೆ ಮುಸ್ಲಿಮರ ಸಂಖ್ಯೆ 6% ಇದೆ. ಕಾಂಗ್ರೆಸ್‌ ಈ ಬಾರಿ ಜಾಟ್‌ ಮತ್ತು ಮುಸ್ಲಿಮರ ಮತಗಳು ಹೆಚ್ಚು ನೆಚ್ಚಿಕೊಂಡಿತ್ತು. ಅಷ್ಟೇ ಅಲ್ಲದೇ ಹೆಚ್ಚಿನ ಸಂಖ್ಯೆಯಲ್ಲಿ ಜಾಟರಿಗೆ ಟಿಕೆಟ್‌ ನೀಡಿತ್ತು. ಕೃಷಿ ಹೋರಾಟದಲ್ಲಿ ಪಂಜಾಬ್‌ ಬಿಟ್ಟರೆ ಹರಿಯಾಣದಲ್ಲೇ ಹೆಚ್ಚಿನ ಪ್ರತಿರೋಧ ವ್ಯಕ್ತವಾಗಿತ್ತು. ರೈತರನ್ನು ಹರಿಯಾಣದ ಗಡಿಯಲ್ಲೇ ತಡೆಯಲಾಗಿತ್ತು. ಜೊತೆಗೆ ಅಗ್ನಿವೀರ್‌ ವಿಷಯವನ್ನು ಕಾಂಗ್ರೆಸ್‌ ಪ್ರಸ್ತಾಪ ಮಾಡಿತ್ತು. ಈ ಎಲ್ಲಾ ಕಾರಣದಿಂದ ಈ ಬಾರಿ ಗೆಲುವು ನಮ್ಮದೇ ಎಂದು ಕಾಂಗ್ರೆಸ್‌ ಭಾವಿಸಿತ್ತು. ಇದನ್ನೂ ಓದಿ: ಹರಿಯಾಣ ಚುನಾವಣೆ ಫಲಿತಾಂಶವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ: ಕಾಂಗ್ರೆಸ್‌

Kumari Selja

ಗೆಲುವಿನ ಅತಿಯಾದ ಆತ್ಮವಿಶ್ವಾಸದಲ್ಲಿದ್ದ ಕಾಂಗ್ರೆಸ್‌ಗೆ ಒಳಗೊಳಗೆ ಏಟು ಬೀಳುತ್ತಿದ್ದರೂ ಅದನ್ನು ಶಮನ ಮಾಡಲು ಹೈಕಮಾಂಡ್‌ ನಾಯಕರು ಮುಂದಾಗಲಿಲ್ಲ. ಹೂಡಾ ಹೇಳಿದ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿದ್ದಕ್ಕಾಗಿ ಪಕ್ಷದೊಂದಿಗೆ ಅಸಮಾಧಾನಗೊಂಡಿದ್ದ ಕುಮಾರಿ ಸೆಲ್ಜಾ ಕೆಲವು ದಿನಗಳ ಕಾಲ ಪ್ರಚಾರದಿಂದಲೇ ದೂರ ಉಳಿದಿದ್ದರು. ಅವರನ್ನು ಮನವೊಲಿಸಿದ ಬಳಿಕ ಕೊನೆಯ ಹಂತದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದ್ದರು. ಅಷ್ಟೇ ಅಲ್ಲದೇ ಅವರು ಪದೇ ಪದೇ ಸಿಎಂ ಕುರ್ಚಿಯ ಮೇಲೆ ಹಕ್ಕು ಸಾಧಿಸಿದ್ದು ಪಕ್ಷಕ್ಕೆ ಮುಳುವಾಯಿತು.

ಭೂಪಿಂದರ್‌ ಹೂಡಾ ಅವರು ಮಾರ್ಚ್‌ 2005ರಿಂದ ಅಕ್ಟೋಬರ್‌ 2024ರ ವರೆಗೆ ಮುಖ್ಯಮಂತ್ರಿಯಾಗಿದ್ದರು. ಈ ಅವಧಿಯಲ್ಲಿ ದಲಿತರಿಗೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಹರಿಯಾಣ ಸಾರ್ವಜನಿಕ ಸೇವಾ ಆಯೋಗ ಮತ್ತು ಹರಿಯಾಣ ಸ್ಟಾಫ್ ಸೆಲೆಕ್ಷನ್ ಕಮಿಷನ್ ಉದ್ಯೋಗಳನ್ನು ಹಣ ಪಡೆದು ನೀಡಿದ್ದಾರೆ. ಇದರ ಜೊತೆ ಗಾಂಧಿ ಕುಟುಂಬವನ್ನು ಓಲೈಸಲು ಸರ್ಕಾರಿ ಜಾಗವನ್ನು ರಾಬಾರ್ಟ್‌ ವಾದ್ರಾಗೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಆಡಳಿತ ವಿರೋಧಿ ಅಲೆಗಿಂತಲೂ ಹೂಡಾ ಅವಧಿಯಲ್ಲಿ ನಡೆದಿದೆ ಎಂಬ ಭ್ರಷ್ಟಾಚಾರವನ್ನು ಬಿಜೆಪಿ ಯಶಸ್ವಿಯಾಗಿ ಬಿಂಬಿಸಿತ್ತು. ಇದೆಲ್ಲದರ ಪರಿಣಾಮ ಕಾಂಗ್ರೆಸ್‌ ಹರಿಯಾಣದಲ್ಲಿ ಸೋತಿದೆ.

 

Share This Article