ತಿರುವನಂತಪುರಂ: ಟರ್ಪಾಲ್ ನಿಂದ ಕವರ್ ಆಗಿರುವ ಶೆಡ್‍ನಲ್ಲಿ ವಾಸಿಸುವ ಒಂಟಿ ಮಹಿಳೆಗೆ ನೋಟಿಸ್ (Notice For Woman) ನೀಡಿದ ಪ್ರಸಂಗವೊಂದು ಕೇರಳದಲ್ಲಿ ನಡೆದಿದೆ.
ಹೌದು. ವೆಂಗಪಲ್ಲಿ (Vengappally) ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಾರ್ಡ್ 8ರ ನಿವಾಸಿ ಅಮೀನಾ ಅವರಿಗೆ ಈ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ.
ನೋಟಿಸ್ ಏಕೆ..?: ಪಂಚಾಯಿತಿ ವ್ಯಾಪ್ತಿಯ ಹರಿತ ಕರ್ಮ ಸೇನೆಯು (Haritha Karma Sena) ಸ್ವಯಂ ಸೇವಕರಿಗೆ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಶುಲ್ಕವನ್ನು ನೀಡದ್ದಕ್ಕಾಗಿ ನೋಟಿಸ್ ನೀಡಲಾಗಿದೆ. ಅದರಲ್ಲಿ ಮಹಿಳೆಯು ಏಳು ದಿನಗಳೊಳಗೆ ಉತ್ತರಿಸಬೇಕು. ಒಂದು ವೇಳೆ ವಿಫಲರಾದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನೋಟಿಸ್‍ನಲ್ಲಿ ತಿಳಿಸಲಾಗಿದೆ.
ಅಮೀನಾ ಒಂಟಿ ಮಹಿಳೆಯಾಗಿದ್ದು, ಅವರಿಗೆ ಗಂಡನಾಗಲಿ, ಮಕ್ಕಳಾಗಲಿ, ಸಂಬಂಧಿಕರಾಗಲಿ ಇಲ್ಲ. ಕಳೆದ 25 ವರ್ಷಗಳಿಂದ ಟರ್ಪಾಲ್ ಮುಚ್ಚಿದ ತಾತ್ಕಾಲಿಕ ಶೆಡ್‍ನಲ್ಲಿ ವಾಸಿಸುತ್ತಿದ್ದಾರೆ. ಇನ್ನು ರಾತ್ರಿ ಅಕ್ಕಪಕ್ಕದ ಮನೆಗಳಲ್ಲಿ ಉಳಿದುಕೊಳ್ಳುತ್ತಾರೆ. ಒಂಟಿ ಮಹಿಳೆಗೆ ಸ್ಥಳೀಯರು ಕೂಡ ರಾತ್ರಿ ಹೊತ್ತು ಆಶ್ರಯ ನೀಡುವ ಮೂಲಕ ಬೆಂಬಲ ನೀಡಿದ್ದಾರೆ.
ಈ ಹಿಂದೆ ತಾಂತ್ರಿಕ ಕಾರಣ ನೀಡಿ ಸೂಕ್ತ ಮನೆಗಾಗಿ ಸಲ್ಲಿಸಿದ್ದ ಅರ್ಜಿಯನ್ನು ಪಂಚಾಯಿತಿ ಅಧಿಕಾರಿಗಳು ತಿರಸ್ಕರಿಸಿದ್ದಾರೆ ಎಂದು ಅಮೀನಾ ಆರೋಪಿಸಿದ್ದಾರೆ. ತನ್ನ ಪರಿಸ್ಥಿತಿಯ ಬಗ್ಗೆ ಚೆನ್ನಾಗಿ ತಿಳಿದಿರುವ ಅದೇ ಅಧಿಕಾರಿಗಳು ಈಗ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಶುಲ್ಕವನ್ನು ಕೇಳುವ ನೋಟಿಸ್ ಅನ್ನು ಹೇಗೆ ಕಳುಹಿಸುತ್ತಾರೆ ಎಂದು ಅವರು ಪ್ರಶ್ನಿಸಿದ್ದಾರೆ.
ಈ ಸಂಬಂಧ ಪಂಚಾಯತ್ ಅಧ್ಯಕ್ಷೆ ಇ.ಕೆ.ರೇಣುಕಾ ಪ್ರತಿಕ್ರಿಯಿಸಿ, ಹರಿತ ಕರ್ಮ ಸೇನೆಯ ಸ್ವಯಂಸೇವಕರು ತಮ್ಮ ಕರ್ತವ್ಯವನ್ನು ಮಾಡುತ್ತಿದ್ದಾರೆ ಎಂದರು.
Web Stories