ಮಂಗಳೂರು: ರಾಜ್ಯದಲ್ಲಿ ಪೆಟ್ರೋಲ್, ಡಿಸೇಲ್ ದರ ಏರಿಕೆ ಖಂಡಿಸಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯಿಂದ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ (BJP Protest) ನಡೆಯಿತು. ನಗರದ ಪಿವಿಎಸ್ ಜಂಕ್ಷನ್ ನಲ್ಲಿರುವ ಬಿಜೆಪಿ ಕಚೇರಿ ಎದುರು ತೆಂಗಿನಕಾಯಿ ಗೆರಟೆ, ಚೆಂಬು, ಪ್ಲೇ ಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಶಾಸಕ ಹರೀಶ್ ಪೂಂಜಾ (Harish Poonja), ಎಸ್ಸಿ-ಎಸ್ಟಿ ಸಮುದಾಯಗಳಿಗೆ ಅನುದಾನ ಕೊಡಿ ಅಂದ್ರೆ ಸರ್ಕಾರದ ಬಳಿ ಅನುದಾನ ಇಲ್ಲ ಅಂತಾರೆ. ಆದ್ರೆ ಮುಸ್ಲಿಮರಿಗೆ 10,000 ಕೋಟಿ ರೂ. ಅನುದಾನವನ್ನು ಎಸ್ಸಿ-ಎಸ್ಟಿ ಸಮುದಾಯದ (SC-ST Community) ಅನುದಾನದಿಂದ ಕೊಟ್ಟಿದ್ದಾರೆ ಎಂದು ಕಿಡಿ ಕಾರಿದರು.
ಇವತ್ತು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಬಕ್ರೀದ್ ಹಬ್ಬದ ಸಲುವಾಗಿ ಮುಸ್ಲಿಮರಿಗೆ (Muslims) ಕೊಡೋದಕ್ಕಾ? ಸಾಮಾನ್ಯರ ಮೇಲೆ ತೆರಿಗೆ ಹೊರೆ ಹೊರಿಸುವ ಮೂಲಕ ಯಾವ ಸಮುದಾಯುಕ್ಕೆ ಓಲೈಕೆ ಮಾಡ್ತೀದ್ದಿರಿ? ರಾಜ್ಯದ ಅಭಿವೃದ್ಧಿ ಮಾಡುವ ಚಿಂತನೆ ನಿಮಗೆ ಇದ್ದಿದ್ದರೆ ಬೆಲೆ ಏರಿಕೆ ಮಾಡುವ ಕೆಲಸ ಮಾಡುತ್ತಿರಲಿಲ್ಲ. ನಿಮ್ಮ ಏಕಪಕ್ಷೀಯ ನಿರ್ಧಾರಗಳೇ ಬೆಲೆ ಏರಿಕೆಗೆ ಕಾರಣ ಎಂದು ವಾಗ್ದಾಳಿ ನಡೆಸಿದರು.
ಜನಸಾಮಾನ್ಯರ ಮೇಲೆ ಬೆಲೆ ಏರಿಕೆ (Petrol Price Hike) ಹೊರೆ ಹಿಂಪಡೆಯುವವರೆಗೆ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಹೋರಾಟ ಮುಂದುವರಿಸುತ್ತೇವೆ. ಇದು ಸಾಂಕೇತಿಕ ಹೋರಾಟ ಮುಂದೆ ಬಿಜೆಪಿ ಉಗ್ರರೂಪದ ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆ ವೇಳೆ ಸ್ಕೂಟರ್ ಹಾಗೂ ಕಾರಿಗೆ ಹಗ್ಗ ಕಟ್ಟಿ ಎಳೆಯುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ್ದು, ಪೆಟ್ರೋಲ್ ಬಂಕ್ ವರೆಗೂ ಸಾಗಿತ್ತು. ಪಿವಿಎಸ್ ಸರ್ಕಲ್ ನಿಂದ ನವಭಾರತ್ ಸರ್ಕಲ್‌ವರೆಗೆ ವಾಹನಗಳನ್ನು ಎಳೆದುಕೊಂಡು ಚೆಂಬಿನಲ್ಲಿ ಹಣ ಸಂಗ್ರಹಿಸಿ ಆ ಹಣವನ್ನು ಪೆಟ್ರೋಲ್ ಬಂಕ್ ಸಿಬ್ಬಂದಿಗೆ ನೀಡಿ ಚೆಂಬಲ್ಲಿ ಪೆಟ್ರೋಲ್ ಪಡೆದುಕೊಂಡು ಕಾರಿಗೆ ತುಂಬಿಸಿ ವಿನೂತನ ಪ್ರತಿಭಟನೆ ನಡೆಸಿದ್ರು.ಪ್ರತಿಭಟನೆಯಲ್ಲಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ,ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಸೇರಿ ಹಲವರು ಭಾಗಿಯಾಗಿದ್ದರು.