ಬೆಂಗಳೂರು: ನೀರ್ ದೋಸೆ ಸಿನಿಮಾದಲ್ಲಿ ಮೈಚಳಿ ಬಿಟ್ಟು ನಟಿಸಿದ್ದ ಹರಿಪ್ರಿಯಾ ಪ್ರಮುಖ ಪಾತ್ರದಲ್ಲಿ ನಟಿಸಿ, ಇನ್ನೇನು ತೆರೆಗೆ ಬರಲು ಅಣಿಯಾಗಿರುವ ಸಿನಿಮಾ `ಸೂಜಿದಾರ’!
ಹೆಸರು ಕೇಳಿ `ಇದೂ ಕೂಡಾ ಡಬಲ್ ಮೀನಿಂಗ್ ಸಿನಿಮಾನಾ?’ ಅಂತಾ ಪಡ್ಡೆಗಳ ಹುಬ್ಬು ನೆಟ್ಟಗಾಗಬಹುದು. ಆದರೆ ಈ ಚಿತ್ರ ಇವತ್ತಿನ ಕಾಲಘಟ್ಟದಲ್ಲಿ ಏನೇನೂ ಅಲ್ಲದ ಹೆಣ್ಣುಮಗಳೊಬ್ಬಳು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿ ಗುರುತಿಸಿಕೊಳ್ಳಬೇಕು ಅನ್ನೋ ಕಥೆ ಇದರಲ್ಲಿದೆಯಂತೆ.
ಈವರೆಗೆ ರಂಗಭೂಮಿಯಲ್ಲಿ ಸಾಕಷ್ಟು ಕೃಷಿ ಮಾಡಿರುವ ಮೌನೇಶ್ ಬಡಿಗೇರ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಕಥೆಗಾರರಾಗಿಯೂ ಗುರುತಿಸಿಕೊಂಡಿರೋ ಮೌನೇಶ್ ಬಡಿಗೇರ್ ಇಂದ್ರಕುಮಾರ್ ಅವರ ಸಣ್ಣ ಕಥೆಯೊಂದನ್ನಿಟ್ಟುಕೊಂಡು ಸೂಜಿದಾರ ಚಿತ್ರವನ್ನು ರೂಪಿಸಿದ್ದಾರೆ. ಸರಿಸುಮಾರು ಎರಡು ವರ್ಷಗಳ ಹಿಂದೆ ಇಂದ್ರಕುಮಾರ್ ಅವರ ಈ ಕಥೆಯನ್ನು ಓದಿ ಅವರಿಗೆ ಕೂಡಲೇ ಫೋನಾಯಿಸಿದ್ದ ಮೌನೇಶ್ ಈ ಕಥೆಯನ್ನು ಸಿನಿಮಾ ಮಾಡೋದಾಗಿ ಹೇಳಿಕೊಂಡಿದ್ದರಂತೆ. ಅದೀಗ ಕೈಗೂಡಿ ತೆರೆಗೆ ಬರುವ ಸನ್ನಾಹದಲ್ಲಿದೆ. ಅಭಿಜಿತ್ ಕೋಟೆಗಾರ್ ಉಡುಪಿ ಮತ್ತು ಸಚ್ಚೀಂದ್ರ ನಾಯಕ್ ಬೆಳ್ತಂಗಡಿ ಸೇರಿ ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಯಶ್ ಶೆಟ್ಟಿ ಎನ್ನುವ ಹೊಸ ಹುಡುಗ ನಾಯಕನಾಗಿ ಎಂಟ್ರಿ ಕೊಡುತ್ತಿದ್ದಾರೆ. ಸುಚೇಂದ್ರ ಪ್ರಸಾದ್, ಅಚ್ಯುತ ಕುಮಾರ್, ಚೈತ್ರಾ ಹರೀಶ್, ನಾಗರಾಜ್ ಪತ್ತಾರ್ ಮುಂತಾದವರು ನಟಿಸಿದ್ದಾರೆ. ಅಶೋಕ್ ರಾಮನ್ ಛಾಯಾಗ್ರಹಣವಿರುವ ಈ ಚಿತ್ರ ಇದೀಗ ಡಬ್ಬಿಂಗ್ ಹಂತದಲ್ಲಿದೆ. ಇನ್ನು ಪ್ರಧಾನ ಪಾತ್ರದಲ್ಲಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ರಂಗಭೂಮಿ ಮತ್ತು ಸಾಹಿತ್ಯದ ಹಿನ್ನೆಲೆ ಇರುವವರು ಚಿತ್ರವೊಂದನ್ನು ಮಾಡಲು ಮುಂದಾಗ ಸಹಜವಾಗಿಯೇ ಕುತೂಹಲವಿರುತ್ತದೆ. ಅಂಥಾದ್ದೇ ಒಂದು ಕ್ಯೂರಿಯಾಸಿಟಿಗೆ ಕಾರಣವಾಗಿರೋ `ಸೂಜಿದಾರ’ ಚಿತ್ರವೀಗ ಮುಕ್ತಾಯದ ಹಂತ ತಲುಪಿಕೊಂಡಿದೆ. ಎಡಿಟಿಂಗ್, ಸಾಂಗ್ ರೀರೆಕಾರ್ಡಿಂಗ್ ಗಳನ್ನೆಲ್ಲ ಹಂತ ಹಂತವಾಗಿ ಮುಗಿಸಿಕೊಳ್ಳುತ್ತಿರೋ ಚಿತ್ರತಂಡ ಪ್ರಚಾರದ ಅಖಾಡಕ್ಕಿಳಿಯಲು ತಯಾರಿ ನಡೆಸಿಕೊಳ್ಳುತ್ತಿದೆ. ಈ ಚಿತ್ರದಲ್ಲಿ ಹೊಸ ಬಗೆಯ ಐದು ಹಾಡುಗಳಿವೆಯಂತೆ. ಇದಕ್ಕೆ ಭಿನ್ನಷಡ್ಜ ಸಂಗೀತ ನೀಡಿದ್ದಾರೆ. ಈ ಹಾಡುಗಳು ಮತ್ತು ಟ್ರೈಲರ್ ಅನ್ನು ಇಷ್ಟರಲ್ಲೇ ಚಿತ್ರ ತಂಡ ಲೋಕಾರ್ಪಣೆ ಮಾಡಲಿದೆ. ಇದುವರೆಗೂ ಹಲವಾರು ಚಿತ್ರಗಳ ಚಿತ್ರಕಥೆ, ನಟ ನಟಿಯರನ್ನು ತಯಾರು ಮಾಡುವಂಥಾ ಕೆಲಸ ಕಾರ್ಯಗಳ ಮೂಲಕ ಚಿತ್ರರಂಗದಲ್ಲಿಯೂ ಸಕ್ರಿಯರಾಗಿದ್ದ ಮೌನೇಶ್ ಬಡಿಗೇರ್ ಚೊಚ್ಚಲ ಪ್ರಯತ್ನದಲ್ಲಿಯೇ ಒಂದೊಳ್ಳೆ ಕಥೆನ್ನು ಆರಿಸಿಕೊಂಡು ಚೆಂದದ ಚಿತ್ರ ಮಾಡಿದ ಸಮಾಧಾನದಲ್ಲಿದ್ದಾರೆ.
ಇಷ್ಟೆಲ್ಲಾ ಹಿನ್ನೆಲೆ ಹೊಂದಿರುವ ಮೌನೇಶ್ ಬಡಿಗೇರ್ ನಿರ್ದೇಶನದ ಸೂಜಿದಾರ ಪ್ರೇಕ್ಷಕರ ವಲಯದಲ್ಲೊಂದು ಚರ್ಚೆ ಹುಟ್ಟು ಹಾಕಿದೆ. ಮೊದಲ ನೋಟದಲ್ಲಿಯೇ ಹರಿಪ್ರಿಯಾ ಉತ್ತರ ಕರ್ನಾಟಕ ಶೈಲಿಯಲ್ಲಿ ಪಾರಂಪರಿಕ ಉಡುಗೆಯಲ್ಲಿ ಸೆಳೆದಿದ್ದಾರೆ. ಸೂಜಿದಾರ ಚಿತ್ರದ ಪೋಸ್ಟರ್ ಗಳೇ ಸಿನಿಮಾದ ಕುರಿತಾಗಿ ಕ್ಯೂರಿಯಾಸಿಟಿ ಹುಟ್ಟುಹಾಕುವಂತಿದೆ. ರಂಗಭೂಮಿ ಪ್ರತಿಭೆಗಳು ಏನೇ ಮಾಡಿದರೂ ಅದು ಹೊಸತಾಗೇ ಇರುತ್ತದೆ ಮತ್ತು ಸದಭಿರುಚಿಯಿಂದ ಕೂಡಿರುತ್ತದೆ. ಈ ತನಕ ಅದು ಸಾಬೀತಾಗುತ್ತಲೇ ಬಂದಿದೆ. ಸೂಜಿದಾರ ಕೂಡಾ ಅದೇ ಹಾದಿಯನ್ನು ಮುಂದುವರೆಸೋದರಲ್ಲಿ ಡೌಟಿಲ್ಲ…!