ಬೆಂಗಳೂರು: ಕೂಡಲೇ ಕಾಂಗ್ರೆಸ್ ನಾಯಕ ಹರಿಪ್ರಸಾದ್ (BK Hariprasad) ಅವರನ್ನು ಸರ್ಕಾರ ಬಂಧಿಸಬೇಕು ಎಂದು ಮಾಜಿ ಕೇಂದ್ರ ಸಚಿವ ಸದಾನಂದಗೌಡ (DV Sadananda Gowda) ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ರಾಮ ಮಂದಿರ (Ram Mandira) ನಿರ್ಮಾಣ ಹೋರಾಟದಲ್ಲಿ ಭಾಗಿಯಾಗಿದ್ದ, 31 ವರ್ಷದ ಹಳೆಯ ಪ್ರಕರಣಗಳನ್ನು ಕೆದಕಿ ಶ್ರೀಕಾಂತ್ ಪೂಜಾರಿ ಸೇರಿದಂತೆ ಹಿಂದೂ ಕಾರ್ಯಕರ್ತರನ್ನು ಬಂಧಿಸಿರುವ ಕ್ರಮವನ್ನು ಖಂಡಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲೂ ಪ್ರತಿಭಟನೆ ನಡೆಸುತ್ತಿದೆ.
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಮಾಧ್ಯಮಗಳ ಜೊತೆ ಮಾತನಾಡಿದ ಡಿವಿಎಸ್, ರಾಷ್ಟ್ರೀಯ ನಾಯಕರೊಬ್ಬರು ಹೀಗೆ ಮಾತನಾಡುತ್ತಾರೆ ಅಂದರೆ ದೊಡ್ಡ ಪಿತೂರಿ ಮಾಡಿದಂತೆ ಕಾಣುತ್ತದೆ. ಒಬ್ಬೇ ಒಬ್ಬ ರಾಮ ಭಕ್ತರಿಗೆ ಸಮಸ್ಯೆ ಆದರೆ ಅದಕ್ಕೆ ಕಾಂಗ್ರೆಸ್ ಹೊಣೆ ಆಗುತ್ತದೆ. ಕೂಡಲೇ ಹರಿಪ್ರಸಾದ್ ಬಂಧನ ಮಾಡಿ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಮಸೀದಿಯವರು ನೀಡಿದ್ದೆಲ್ಲವನ್ನೂ ಮೈ ಮೇಲೆ ಹಾಕಿಕೊಳ್ಳುತ್ತಾರೆ, ದೇವಿ ದರ್ಶನಕ್ಕೆ ಸಮಯವಿಲ್ಲ: ಸಿದ್ದು ವಿರುದ್ಧ ಬಿಜೆಪಿ ಕಿಡಿ
ಹರಿಪ್ರಸಾದ್ ಹೇಳಿದ್ದೇನು?
ಅಯೋಧ್ಯೆಗೆ ಹೋಗುವವರಿಗೆ ಸರ್ಕಾರವೇ ರಕ್ಷಣೆ ನೀಡಬೇಕು. ಯಾಕೆಂದರೆ ಗೋದ್ರಾ ದುರಂತದ ರೀತಿ ಮತ್ತೊಮ್ಮೆ ಏನಾದರು ಆಗಬಹುದು. ನಮಗೆ ಮಾಹಿತಿ ಸಿಗುತ್ತಿದೆ. ಮಾಹಿತಿ ಇದ್ದೇ ಹೇಳುತ್ತಿದ್ದೇನೆ. ಕರ್ನಾಟಕದಲ್ಲಿ ಈ ರೀತಿ ಆಗಬಾರದು ಎಂದರೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಕಟ್ಟೆಚ್ಚರ ವಹಿಸಬೇಕು. ಇವು ನನ್ನ ವೈಯಕ್ತಿಕ ಹೇಳಿಕೆ, ಪಕ್ಷಕ್ಕೂ ಇದಕ್ಕೂ ಸಂಬಂಧ ಇಲ್ಲ
ರಾಮಮಂದಿರ ಉದ್ಘಾಟನೆ ಧಾರ್ಮಿಕ ಕಾರ್ಯಕ್ರಮ ಅಲ್ಲ. ಇದೊಂದು ರಾಜಕೀಯ ಕಾರ್ಯಕ್ರಮ ಆಗುತ್ತಿದೆ. ಧಾರ್ಮಿಕ ಕಾರ್ಯಕ್ರಮ ಆಗಿದ್ದರೆ ನಾವೆಲ್ಲರೂ ಹೋಗುತ್ತಿದ್ದೆವು. ಧಾರ್ಮಿಕ ಕಾರ್ಯಕ್ರಮ ಆಗಿದ್ದರೆ ಧಾರ್ಮಿಕ ಮುಖಂಡರು ಭಾಗಿ ಆಗಬೇಕಿತ್ತು.