ಮಡಿಕೇರಿ: ʻಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆʼ ಎಂಬ ಮಾತು ಜನಜನಿತ. ಇದರೊಂದಿಗೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ ವಿದ್ಯಾರ್ಥಿಗಳಿಗೆ (Students) ʻಬಸ್ ಸೌಲಭ್ಯ ಕಲ್ಪಿಸಿದರೆ, ಉನ್ನತ ಶಿಕ್ಷಣ ಪಡೆದಂತೆʼ ಎಂಬ ಹೊಸ ಮಾತನ್ನು ಸೇರಿಸಿಕೊಳ್ಳಬಹುದಾಗಿದೆ. ಏಕೆಂದರೆ ಕುಶಾಲನಗರದಿಂದ ಮಡಿಕೇರಿಗೆ (Madikeri) ತೆರಳುವ ಬಸ್ ಸೌಲಭ್ಯದ ಕೊರತೆಯಿಂದಾಗಿ ಇಲ್ಲಿನ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.
ಇರುವ ಒಂದೆರಡು ಬಸ್‌ಗಳಲ್ಲೇ ಪ್ರಯಾಣಿಕರು ನೇತಾಡಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ದೂರದ ಊರುಗಳಿಂದ ಬರುವ ಎಕ್ಸ್‌ಪ್ರೆಸ್ ಬಸ್‌ಗಳು ನಿಲ್ಲಿಸದೇ ಮುಂದೆ ಸಾಗುತ್ತವೆ. ಹೀಗಾಗಿ ಕುಶಾಲನಗರದಿಂದ ಮಡಿಕೇರಿಯ ಶಾಲೆ, ಪಿಯು ಕಾಲೇಜು, ಐಟಿಐ ಹಾಗೂ ಇನ್ನಿತರ ವಿದ್ಯಾಸಂಸ್ಥೆಗಳಿಗೆ ತೆರಳುವ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಒಂದೆಡೆ ಸಮಯಕ್ಕೆ ಸರಿಯಾಗಿ ತರಗತಿಗೆ ತಲುಪಲಾರದೇ ಹಾಜರಾತಿ ಕೊರತೆ ಎದುರಿಸುತ್ತಿದ್ದರೆ, ಇನ್ನೊಂದೆಡೆ ಪಾಠ ಪ್ರವಚನಗಳಿಗೆ ಅಡ್ಡಿಯಾಗುತ್ತಿದೆ ಎಂಬುದು ವಿದ್ಯಾರ್ಥಿಗಳ ಆರೋಪ. ಇದನ್ನೂ ಓದಿ: ರಾಜಿಯಾದ ಮಾತ್ರಕ್ಕೆ ಲೈಂಗಿಕ ಕಿರುಕುಳ ಕೇಸ್ ರದ್ದು ಮಾಡಲು ಸಾಧ್ಯವಿಲ್ಲ: ಸುಪ್ರೀಂ
ಪ್ರಮುಖ ವಾಣಿಜ್ಯೋದ್ಯಮ ಕೇಂದ್ರವಾಗಿರುವ ಸುಂಟಿಕೊಪ್ಪ ಹಾಗೂ ಸುತ್ತಮುತ್ತಲಿನ ಹಲವು ಗ್ರಾಮಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ರೆ ಪದವಿ ಕಾಲೇಜು ಅಥವಾ ಐಟಿಐ ವಿದ್ಯಾಸಂಸ್ಥೆಗಳು ಇಲ್ಲದಿರುವುದರಿಂದ ಕೊಡಗರಹಳ್ಳಿ, ಕಂಬಿಬಾಣೆ, 7ನೇ ಹೊಸಕೋಟೆ, ಕಾನ್‌ಬೈಲ್, ಮಂಜಿಕೆರೆ, ಅಂದಗೋವೆ, ಶಾಂತಿಗೇರಿ, ಗುಂಡುಗುಟ್ಟಿ, ಹರದೂರು, ಗರಗಂದೂರು, ಪೊನ್ನತ್ ಮೊಟ್ಟೆ, ಭೂತನಕಾಡು, ಮತ್ತಿಕಾಡು ಹಾಗೂ ಇನ್ನಿತರ ಹಲವು ಗ್ರಾಮಗಳ ನೂರಾರು ಸಂಖ್ಯೆಯ ವಿದ್ಯಾರ್ಥಿಗಳು ಮಡಿಕೇರಿಯಲ್ಲಿರುವ ಶಾಲೆ, ಕಾಲೇಜು ಹಾಗೂ ಇನ್ನಿತರ ವಿದ್ಯಾಸಂಸ್ಥೆಗಳಿಗೆ ತೆರಳುತ್ತಿದ್ದಾರೆ. ಬೆಳಗ್ಗೆ ಸುಂಟಿಕೊಪ್ಪ ಪಟ್ಟಣಕ್ಕೆ ಬಂದು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾರೆ.
ಬೆಳಗ್ಗೆ 8 ಗಂಟೆಯಿಂದ 10 ಗಂಟೆವರೆಗೆ ಬರುವ ಬಸ್‌ಗಳು ಕುಶಾಲನಗರದಿಂದಲೇ ಪ್ರಯಾಣಿಕರಿಂದ ತುಂಬಿಕೊಂಡಿರುತ್ತದೆ. ಆದ್ದರಿಂದ ಸುಂಟಿಕೊಪ್ಪದಲ್ಲಿ ನಿಲುಗಡೆಯಾಗುವುದಿಲ್ಲ. ಇದರಿಂದ ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಕಾಲೇಜುಗಳಿಗೆ ತೆರಳಲು ತೊಂದರೆಯಾಗುತ್ತಿದೆ. ಇದನ್ನೂ ಓದಿ: ಕೊಲೆ ಆರೋಪಿ ಪವಿತ್ರಾಗೌಡಗೆ ಜೈಲೇ ಗತಿ – ಜಾಮೀನು ಅರ್ಜಿ ವಿಚಾರಣೆ ನ.21ಕ್ಕೆ ಮುಂದೂಡಿಕೆ
ಸಂಬಂಧಪಟ್ಟ ಅಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಗಮನದಲ್ಲಿಟ್ಟಿಕೊಂಡು ಪ್ರತಿದಿನ ಬೆಳಗ್ಗೆ 8.30 ರಿಂದ 9:30 ಗಂಟೆಗೆ ಸುಂಟಿಕೊಪ್ಪ – ಮಡಿಕೇರಿ ಮಾರ್ಗಕ್ಕೆ ಹೆಚ್ಚುವರಿ ಸೌಲಭ್ಯ ಕಲ್ಪಿಸುವಂತೆ ಪೋಷಕರು ಮನವಿ ಮಾಡಿದ್ದದಾರೆ.