ಸನ್‌ ರೈಸರ್ಸ್‌ ವಿರುದ್ಧ ಸೇಡು ತೀರಿಸಿಕೊಂಡ ಮುಂಬೈ; ತನ್ನನ್ನೇ ಹೊಗಳಿಕೊಂಡ ಪಾಂಡ್ಯ!

Public TV
2 Min Read
Hardik Pandya

ಮುಂಬೈ: ಸನ್‌ ರೈಸರ್ಸ್‌ ಹೈದರಾಬಾದ್‌ (SRH) ವಿರುದ್ಧ ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ಭರ್ಜರಿ ಗೆಲುವು ದಾಖಲಿಸುವ ಮೂಲಕ ತನ್ನ ಸೇಡು ತೀರಿಸಿಕೊಂಡಿತು. ಆದ್ರೆ ಪಂದ್ಯದ ಬಳಿಕ ಮಾತನಾಡಿದ ಹಾರ್ದಿಕ್‌ ಪಾಂಡ್ಯ (Hardik Pandya) ತಮ್ಮ ಬೌಲಿಂಗ್‌ ಪ್ರದರ್ಶನದ ಬಗ್ಗೆ ಹೊಗಳಿಕೊಂಡಿದ್ದಾರೆ.

Hardik Pandya 2

ಪಂದ್ಯದ ಬಳಿಕ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಪಾಂಡ್ಯ, ನಾವು ಉತ್ತಮ ಕ್ರಿಕೆಟ್‌ ಆಡುವತ್ತ ಗಮನ ಹರಿಸಲು ಬಯಸುತ್ತೇವೆ. ಈ ಪಂದ್ಯದಲ್ಲಿ 10-15 ರನ್‌ ಹೆಚ್ಚುವರಿ ನೀಡಿದ್ದೇವೆ ಅನ್ನಿಸುತ್ತೆ. ಆದ್ರೆ ಅದಕ್ಕೆ ಪ್ರತಿಯಾಗಿ ನಮ್ಮ ಬ್ಯಾಟರ್ಸ್‌ಗಳು ಅಬ್ಬರಿಸಿದ ರೀತಿ ಅತ್ಯುತ್ತಮವಾಗಿತ್ತು. ನನ್ನ ಬೌಲಿಂಗ್‌ (Bowling) ಕೂಡ ಉತ್ತಮವಾಗಿತ್ತು. ಪರಿಸ್ಥಿತಿಗೆ ತಕ್ಕಂತೆ ಬೌಲಿಂಗ್‌ ಮಾಡಿದೆ, ಇದು ತಂಡಕ್ಕೆ ಅನುಕೂಲವಾಯಿತು. ಇದೇ ವೇಳೆ ಮತ್ತೊಂದು ಹಾದಿಯಿಂದ ಪಿಯೂಷ್‌ ಚಾವ್ಲಾ (Piyush Chawla), ಸ್ಪಿನ್‌ ದಾಳಿಗೆ ಮುಂದಾದರು. ಅವರ ಬೌಲಿಂಗ್‌ ಸಹ ನಿಖರವಾಗಿತ್ತು ಎಂದು ಹೇಳಿದ್ದಾರೆ. ಹೈದರಾಬಾದ್‌ ವಿರುದ್ಧ ನಡೆದ ಪಂದ್ಯದಲ್ಲಿ 4 ಓವರ್‌ಗಳಲ್ಲಿ 31 ರನ್‌ ಬಿಟ್ಟುಕೊಟ್ಟ ಹಾರ್ದಿಕ್‌ ಪಾಂಡ್ಯ 3 ವಿಕೆಟ್‌ ಕಿತ್ತರು.

Hardik Pandya 3

ನಂತರ ಸೂರ್ಯಕುಮಾರ್‌ ಯಾದವ್‌ (Suryakumar Yadav) ಶತಕದ ಕುರಿತು ಮಾತನಾಡಿದ ಪಾಂಡ್ಯ, ನಿಜಕ್ಕೂ ಸೂರ್ಯ ಅವರ ಬ್ಯಾಟಿಂಗ್‌ ನಂಬಲು ಅಸಾಧ್ಯವಾಗಿತ್ತು. ಎದುರಾಳಿ ಬೌಲರ್‌ಗಳ ಮೇಲೆ ಹೆಚ್ಚು ಒತ್ತಡ ಹೇರಿದ್ದರು. ವಿಭಿನ್ನ ರೀತಿಯಲ್ಲಿ ಆಡುವ ಅವರ ಆಟದಿಂದ ತಂಡಕ್ಕೆ ಹೆಚ್ಚು ಅನುಕೂಲವಾಗಿದೆ. ಅವರು ನಮ್ಮ ತಂಡದಲ್ಲಿರೋದು ನಮ್ಮ ಅದೃಷ್ಟ ಎಂದು ಹಾಡಿಹೊಗಳಿದ್ದಾರೆ.

ಸೇಡು ತೀರಿಸಿಕೊಂಡ ಪಾಂಡ್ಯ ಪಡೆ:
ಇದೇ ಐಪಿಎಲ್‌ ಆವೃತ್ತಿಯ 8ನೇ ಪಂದ್ಯದಲ್ಲಿ ಹೈದರಾಬಾದ್‌ ತಂಡ ಮುಂಬೈ ವಿರುದ್ಧ ದಾಖಲೆಯ 277 ರನ್‌ ಚಚ್ಚಿತ್ತು. ಈ ಪಂದ್ಯದಲ್ಲಿ 246 ರನ್‌ಗಳನ್ನು ಸಿಡಿಸಿದ್ದ ಮುಂಬೈ 31 ರನ್‌ಗಳ ಅಂತರದಿಂದ ಸೋತಿತ್ತು. ಅಂದು ಹೈದರಾಬಾದ್‌ ತವರಿನಲ್ಲಿ ಸೋತಿದ್ದ ಮುಂಬೈ, ತನ್ನ ತವರು ಕ್ರೀಡಾಂಗಣದಲ್ಲಿ ಗೆದ್ದು ಸೇಡು ತೀರಿಸಿಕೊಂಡಿತು. ಇದನ್ನೂ ಓದಿ: T20 World Cup: ಆರ್ಥಿಕ ಬಿಕ್ಕಟ್ಟಿನ ನಡುವೆಯೂ ಕ್ರಿಕೆಟಿಗರಿಗೆ ಲಕ್ಷ ಲಕ್ಷ ಬಹುಮಾನ ಘೋಷಿಸಿದ ಪಾಕ್‌!

IPL 1

ಸೋಮವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಹೈದರಾಬಾದ್‌ 8 ವಿಕೆಟ್‌ ನಷ್ಟಕ್ಕೆ 20 ಓವರ್‌ಗಳಲ್ಲಿ 173 ರನ್‌ ಗಳಿಸಿತ್ತು. ಈ ಗುರಿ ಬೆನ್ನತ್ತಿದ ಮುಂಬೈ 17.2 ಓವರ್‌ಗಳಲ್ಲೇ 174 ರನ್‌ ಸಿಡಿಸಿ ಗೆಲುವು ದಾಖಲಿಸಿತ್ತು. ಇದನ್ನೂ ಓದಿ: ರಿಷಭ್‌ ಪಂತ್‌ ಮದುವೆಯಾಗ್ತೀರಾ? – ನೋ ಕಾಮೆಂಟ್ಸ್‌ ಎಂದು ಪಾಕ್‌ ಬೌಲರ್‌ ಹೊಗಳಿದ ಊರ್ವಶಿ ರೌಟೇಲಾ

ಶತಕ ವೀರ ಸೂರ್ಯ:
ಹೈದರಾಬಾದ್‌ ತಂಡದ ವಿರುದ್ಧ ಸ್ಫೋಟಕ ಇನ್ನಿಂಗ್ಸ್‌ ಕಟ್ಟಿದ ಸೂರ್ಯಕುಮಾರ್‌ ಯಾದವ್‌, ಸನ್‌ರೈಸರ್ಸ್‌ ಬೌಲರ್‌ಗಳನ್ನು ಚಚ್ಚಿ ಚಿಂದಿ ಮಾಡಿದರು. ಮೊದಲ 30 ಎಸೆತಗಳಲ್ಲಿ 50 ರನ್‌ ಬಾರಿಸಿದ್ದ ಸ್ಕೈ, ಮುಂದಿನ 21 ಎಸೆತಗಳಲ್ಲಿ 50 ರನ್‌ ಸಿಡಿಸುವ ಮೂಲಕ ಸ್ಫೋಟಕ ಶತಕ ದಾಖಲಿಸಿದರು. ಇದು ಸೂರ್ಯಕುಮಾರ್‌ ಅವರ 2ನೇ ಐಪಿಎಲ್‌ ಶತಕವೂ ಆಗಿದೆ. 200 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ ಸೂರ್ಯ ಒಟ್ಟು 51 ಎಸೆತಗಳಲ್ಲಿ 102 ರನ್‌ ಚಚ್ಚಿ ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು.

Share This Article