ಮುಂಬೈ-ಚೆನ್ನೈ ಪಂದ್ಯವನ್ನ ಇಂಡೋ-ಪಾಕ್‍ಗೆ ಹೋಲಿಸಿದ ಬಜ್ಜಿ

Public TV
2 Min Read
IPL

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‍ನ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯವನ್ನು ಟೀಂ ಇಂಡಿಯಾ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಇಂಡೋ-ಪಾಕ್ ಪಂದ್ಯಕ್ಕೆ ಹೋಲಿಕೆ ಮಾಡಿದ್ದಾರೆ.

ದೊಡ್ಡ ಅಭಿಮಾನಿ ಬಳಗ, ಅನುಭವಿ ಆಟಗಾರರ ಉಪಸ್ಥಿತಿ ಮತ್ತು ಸ್ಥಿರ ಪ್ರದರ್ಶನ ನೀಡುತ್ತ ಬಂದ ಮುಂಬೈ ಇಂಡಿಯನ್ಸ್- ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯ ಯಾವಾಗಲೂ ರೋಚಕವಾಗಿರುತ್ತದೆ. ಟೂರ್ನಿಯ ಇತಿಹಾಸದಲ್ಲಿ ಸಿಎಸ್‍ಕೆ ಅತ್ಯಂತ ಸ್ಥಿರವಾದ ತಂಡವಾಗಿದ್ದರೆ, ಹೆಚ್ಚು ಬಾರಿ ಚಾಂಪಿಯನ್ ಆದ ಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ಅಗ್ರಸ್ಥಾನದಲ್ಲಿದೆ. ಐಪಿಎಲ್ 2013ರಲ್ಲಿ ಮುಂಬೈ ಇಂಡಿಯನ್ಸ್ ನಾಯಕನಾದ ರೋಹಿತ್ ಶರ್ಮಾ ಅವರು ತಂಡ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದಾರೆ.

harbhajan singh dhoni bcci

ಐಪಿಎಲ್‍ನ ಪ್ರತಿ ಆವೃತ್ತಿಯಲ್ಲಿ ಸಿಎಸ್‍ಕೆ ತಂಡವನ್ನು ಮುನ್ನಡೆಸಿದ ಎಂ.ಎಸ್.ಧೋನಿ, ಮೂರು ಬಾರಿ ಚಾಂಪಿಯನ್ ಪಟ್ಟಿಗೆ ಸೇರಿಸಿದ್ದಾರೆ. ಉಭಯ ತಂಡಗಳು ಈವರೆಗೆ ನಾಲ್ಕು ಐಪಿಎಲ್ ಫೈನಲ್‍ಗಳಲ್ಲಿ ಮುಖಾಮುಖಿಯಾಗಿದ್ದು, ಮುಂಬೈ 3-1 ಅಂತರದಿಂದ ಮುನ್ನಡೆ ಸಾಧಿಸಿದೆ. ಹೀಗಾಗಿ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್, ಮುಂಬೈ-ಚೆನ್ನೈ ಪೈಪೋಟಿಯನ್ನು ಭಾರತ-ಪಾಕಿಸ್ತಾನದ ಪಂಡ್ಯಕ್ಕೆ ಹೋಲಿಸಿದ್ದಾರೆ. ಜೊತೆಗೆ ಹಳದಿ (ಸಿಎಸ್‍ಕೆ) ಜರ್ಸಿ ಧರಿಸಿದ ತಮ್ಮ ಮೊದಲ ಅನುಭವವನ್ನು ಹಂಚಿಕೊಂಡಿದ್ದಾರೆ.

Harbhajan Singh 1

ಚೆನ್ನೈ ಸೂಪರ್ ಕಿಂಗ್ಸ್ ಪರ ಮೊದಲ ಬಾರಿ ಆಡಿದ ಬಜ್ಜಿ, ನನಗೆ ಆ ಗಳಿಗೆ ತುಂಬಾ ವಿಚಿತ್ರವಾಗಿತ್ತು. ಇದು ಕನಸೇ ಅಥವಾ ನಿಜವೇ ಎಂದು ಗೊಂದಲಕ್ಕೆ ಒಳಗಾಗಿದ್ದೆ. ಮುಂಬೈ-ಚೆನ್ನೈ ನಡುವನ ಪಂದ್ಯವು ಭಾರತ-ಪಾಕಿಸ್ತಾನ ಪಂದ್ಯದಂತೆಯೇ ಭಾಸವಾಗುತ್ತಿತ್ತು. ಹಳದಿ ಜೆರ್ಸಿ ಧರಿಸುವುದು ಕಷ್ಟಕರವಾಗಿತ್ತು. ವಿಚಿತ್ರವೆಂದರೆ ನಾನು ಚೆನ್ನೈ ತಂಡ ಸೇರಿದಾಗ ಮೊದಲ ಆಡಿದ್ದೆ ಮುಂಬೈ ತಂಡದ ವಿರುದ್ಧ. ಟೂರ್ನಿಯ ಆರಂಭದಲ್ಲೇ ಮುಂಬೈ ಇಂಡಿಯನ್ಸ್ ವಿರುದ್ಧ ಆಡಿದ್ದೇ ಒಳ್ಳೆಯದಾಯಿತು. ಇಲ್ಲದಿದ್ದರೆ ಆವೃತ್ತಿಯುದ್ದಕ್ಕೂ ಮುಂಬೈ ವಿರುದ್ಧದ ಪಂದ್ಯವು ಕಷ್ಟಕರವಾಗುತ್ತಿತ್ತು ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ಐಪಿಎಲ್‍ನಲ್ಲಿ 2008ರಿಂದ 2017ರವರೆಗೆ ಮುಂಬೈ ಇಂಡಿಯನ್ಸ್ ಪರ ಆಡಿದ್ದ ಹರ್ಭಜನ್ ಸಿಂಗ್ ಅವರನ್ನು 2018ರ ಹರಾಜಿಗೆ ಮುಂಚಿತವಾಗಿ ಬಿಡುಗಡೆ ಮಾಡಲಾಯಿತು. ಹರಾಜಿನಲ್ಲಿ ಹೆಚ್ಚಿನ ಬೆಲೆಯನ್ನು ಗಳಿಸುವ ಭರಸವೆ ಹೊಂದಿದ್ದ ಹರ್ಭಜನ್ ಸಿಂಗ್ ಆಶ್ಚರ್ಯಕರವಾಗಿ ಕೇವಲ ಒಂದು ಬಿಡ್‍ಗೆ ಸೀಮಿತವಾಗಿದ್ದರು. ಅವರು ಚೆನ್ನೈ ಸೂಪರ್ ಕಿಂಗ್ಸ್‍ಗೆ ತಮ್ಮ ಮೂಲ ಬೆಲೆ 2 ಕೋಟಿ ರೂ.ಗೆ ಖರೀದಿಯಾಗಿದ್ದರು.

CSK

ಸಿಎಸ್‍ಕೆ ಸೇರಿದ ಮೊದಲ ಆವೃತ್ತಿಯಲ್ಲಿ ಬಜ್ಜಿ 13 ಪಂದ್ಯಗಳಲ್ಲಿ ಏಳು ವಿಕೆಟ್‍ಗಳನ್ನು ಪಡೆದರು. ಆದರೆ ಮುಂದಿನ ಆವೃತ್ತಿ (2019)ರಲ್ಲಿ 11 ಪಂದ್ಯಗಳಲ್ಲಿ 16 ವಿಕೆಟ್‍ಗಳನ್ನು ಕಿತ್ತು ಮಿಂಚಿದರು. ಹರ್ಭಜನ್ ಅವರ ಮೂರು ವರ್ಷಗಳ ಸಿಎಸ್‍ಕೆ ಒಪ್ಪಂದವು ಐಪಿಎಲ್ 2020ರ ಆವೃತ್ತಿಯ ಬಳಿಕ ಕೊನೆಗೊಳ್ಳುತ್ತದೆ. ಅವರು ಈಗ ಐಪಿಎಲ್ ಮಾತ್ರ ಆಡುತ್ತಿರುವುದರಿಂದ ಶೀಘ್ರದಲ್ಲೇ ಭಾರತೀಯ ಕ್ರಿಕೆಟ್‍ನಿಂದ ನಿವೃತ್ತಿ ಹೊಂದುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹರ್ಭಜನ್ ಸಿಂಗ್ ಕಳೆದ ವರ್ಷ ದಿ ಹಂಡ್ರೆಡ್ಸ್ ಡ್ರಾಫ್ಟ್‍ಗೆ ಪ್ರವೇಶಿಸಿದ್ದರು. ಆದರೆ ಸಿಎಸ್‍ಕೆ ಪರ ಇನ್ನೂ ಒಂದು ವರ್ಷ ಆಡಲು ಬಯಸಿದ್ದರಿಂದ ಹಿಂದೆ ಸರಿದರು.

Share This Article
Leave a Comment

Leave a Reply

Your email address will not be published. Required fields are marked *