ಶಿವಮೊಗ್ಗ: ಸ್ನೇಹಿತನ ಪತ್ನಿಯ ಮೇಲೆ ಅತ್ಯಾಚಾರ ಆರೋಪ ಎದುರಿಸಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಬಿಜೆಪಿ ನಾಯಕ ಹರತಾಳು ಹಾಲಪ್ಪ ನಿರ್ದೋಷಿ ಎಂದು ಶಿವಮೊಗ್ಗ 2ನೇ ಜೆಎಂಎಫ್‍ಸಿ ನ್ಯಾಯಾಲಯ ಗುರುವಾರ ತೀರ್ಪು ನೀಡಿದೆ.
ಸುಮಾರು 7 ವರ್ಷಗಳ ದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇದೇ 8ರಂದು ವಿಚಾರಣೆ ಪೂರ್ಣಗೊಳಿಸಿ ಇವತ್ತಿಗೆ ತೀರ್ಪು ಕಾಯ್ದಿರಿಸಿತ್ತು. ಹೀಗಾಗಿ, ಸಂಜೆ 5 ಗಂಟೆಗೆ ಹಾಲಪ್ಪ ಕೋರ್ಟ್ ಗೆ ಹಾಜರಾಗಿದ್ದರು. ಬಳಿಕ ಕೆಲವೇ ನಿಮಿಷಗಳಲ್ಲಿ ಖುಲಾಸೆಗೊಂಡು ಖುಷಿಯಿಂದ ಹೊರ ಬಂದರು.
Advertisement
ಬಳಿಕ ಮಾತನಾಡಿದ ಹಾಲಪ್ಪ, ಸತ್ಯಕ್ಕೆ ಜಯ ಸಿಕ್ಕಿದೆ. ನನ್ನ ವಿರುದ್ಧ ರಾಜಕೀಯ ಪಿತೂರಿ ನಡೆದಿತ್ತು. ಈಗ ಅವರಿಗೆಲ್ಲ ನಿರಾಸೆಯಾಗಿದೆ. ನ್ಯಾಯಾಲಯದ ಬಗ್ಗೆ ನನಗೆ ಅಪಾರ ಗೌರವವಿದ್ದು, ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು. ಕೋರ್ಟ್ ಆವರಣದಲ್ಲೇ ಯಡಿಯೂರಪ್ಪ ಅವರಿಗೆ ಫೋನ್ ಮಾಡಿ ಸಂತಸ ಹಂಚಿಕೊಂಡರು.
Advertisement
ಸಂಜೆ ಮಾಧ್ಯಮಗಳ ಜೊತೆ ಮಾತನಾಡಿದ ಯಡಿಯೂರಪ್ಪ, ಹರತಾಳು ಹಾಲಪ್ಪ ನಿರಪರಾಧಿ ಎಂಬುದು ಮೊದಲೇ ಗೊತ್ತಿತ್ತು. ಆದರೆ ಅನಿವಾರ್ಯವಾಗಿ ಅವರು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು ಎಂದರು.
Advertisement
ಶುಕ್ರವಾರ ಸಿಗಂದೂರು ಚೌಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸುವುದಾಗಿ ಹಾಲಪ್ಪ ಹೇಳಿದ್ದಾರೆ. ಹಾಲಪ್ಪ ಖುಲಾಸೆಯಾಗಿರುವ ಕಾರಣ ಸೊರಬದಲ್ಲಿ ಬಿಜೆಪಿ ಟಿಕೆಟ್‍ಗೆ ಪೈಪೋಟಿ ಶುರುವಾಗಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದಿದ್ದ ಕುಮಾರ್ ಬಂಗಾರಪ್ಪ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
Advertisement
ಹಾಲಪ್ಪ ಖುಲಾಸೆಗೆ ಕಾರಣಗಳೇನು?
ಸಚಿವರಾಗಿದ್ದ ಹಾಲಪ್ಪ ಅವರು 2009ರ ನವೆಂಬರ್ 26ರಂದು ತಮ್ಮ ಸ್ನೇಹಿತ ವೆಂಕಟೇಶಮೂರ್ತಿ ಅವರ ಪತ್ನಿ ಚಂದ್ರಾವತಿ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪ ಮಾಡಲಾಗಿತ್ತು. ಈ ಘಟನೆ ನಡೆದ ಆರು ತಿಂಗಳ ಬಳಿಕ ಅಂದರೆ, 2010ರ ಮೇ 2ರಂದು ವೆಂಕಟೇಶ ಮೂರ್ತಿ ದಂಪತಿ ಹಾಲಪ್ಪ ಅವರ ವಿರುದ್ಧ ದೂರು ದಾಖಲಿಸಿದ್ದರು.
ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿಯಾಗಿ ಅತ್ಯಾಚಾರಕ್ಕೆ ಸಂಬಂಧಿಸಿದ ದೃಶ್ಯಾವಳಿಯನ್ನು ಸಿಡಿಯ ರೂಪದಲ್ಲಿ ನೀಡಲಾಗಿತ್ತು. ಆದರೆ ಈ ಸಿಡಿಯ ಮೂಲವಾಗಿದ್ದ ಮೆಮೊರಿ ಕಾರ್ಡ್ ಅನ್ನು ದೂರುದಾರರು ನ್ಯಾಯಾಲಯಕ್ಕೆ ಒದಗಿಸುವಲ್ಲಿ ವಿಫಲರಾಗಿದ್ದರು.
ಪೊಲೀಸರ ಮುಂದೆ ಸಂತ್ರಸ್ತೆಯ ಪತಿ 9 ಬಾರಿ ತಮ್ಮ ಹೇಳಿಕೆಯನ್ನು ಬದಲಿಸಿದ್ದರು. ದೂರಿನಲ್ಲಿ ನೀಡಿರುವ ಹೇಳಿಕೆಗೂ, ವಿಚಾರಣೆ ವೇಳೆ ನೀಡಿರುವ ಸಾಕ್ಷ್ಯಾಧಾರಕ್ಕೂ ವ್ಯತ್ಯಾಸವಿತ್ತು. 15 ಪುಟಗಳ ದೂರು ಇಂಗ್ಲಿಷ್ ನಲ್ಲಿತ್ತು. ವಿಚಾರಣೆ ವೇಳೆ ಯಲ್ಲಿ ಚಂದ್ರಾವತಿ ನನಗೆ ಇಂಗ್ಲಿಷ್ ಬರುವುದಿಲ್ಲ. ಪೊಲೀಸರು ಸಹಿ ಮಾಡಿ ಎಂದು ಹೇಳಿದ್ದರು. ಹೀಗಾಗಿ ಪೊಲೀಸರು ಸೂಚಿಸಿದ ಕಡೆಯಲ್ಲಿ ನಾನು ಸಹಿ ಮಾಡಿದ್ದೇನೆ ಎಂದು ತಿಳಿಸಿದ್ದರು.
ಹಾಲಪ್ಪ ಶಿವಮೊಗ್ಗದ ವಿನೋಬಾ ನಗರದ ಕಲ್ಲಹಳ್ಳಿಯಲ್ಲಿ ಇರುವ ಗೆಳೆಯ ವೆಂಕಟೇಶ್ ಮನೆಯಲ್ಲಿ ಅತ್ಯಾಚಾರ ಎಸಗಿದ್ದಾರೆ ಎನ್ನುವ ಆರೋಪವನ್ನು ದೂರಿನಲ್ಲಿ ಹೊರಿಸಲಾಗಿತ್ತು. ಆದರೆ ಅತ್ಯಾಚಾರ ನಡೆದ ದಿನ ಹಾಲಪ್ಪನವರು ಫಾರೆಸ್ಟ್ ಗೆಸ್ಟ್ ಹೌಸ್ ನಲ್ಲಿದ್ದರು ಎನ್ನುವುದ್ದಕ್ಕೆ ನ್ಯಾಯಾಲಯಕ್ಕೆ ಸಾಕ್ಷಿ ಒದಗಿಸಲಾಗಿತ್ತು.
2009ರ ನವೆಂಬರ್ 27ರಂದು ಬೆಳಗಿನ ಜಾವ 3.30ಕ್ಕೆ ಅರಣ್ಯ ಇಲಾಖೆ ಗೆಸ್ಟ್ ಹೌಸ್‍ನಲ್ಲಿ ಬಿಟ್ಟು ಬಂದಿರುವ ಮಾತ್ರೆ ತರುವಂತೆ ಹಾಲಪ್ಪ ನನಗೆ ಸೂಚಿಸಿದ್ದರು. ನಾನು ಮಾತ್ರೆ ತರಲು ಹೋದಾಗ ಪತ್ನಿ ಚಂದ್ರಮತಿ ಮೇಲೆ ಅತ್ಯಾಚಾರವೆಸಗಿದ್ದರು. ಗೆಸ್ಟ್ ಹೌಸ್‍ನಿಂದ ನಾನು ಮನೆಗೆ ಬಂದಾಗ ಪತ್ನಿ ಕಿರುಚಿಕೊಳ್ಳುತ್ತಿರುವುದು ಕೇಳಿತ್ತು. ಮನೆಯೊಳಗೆ ನೋಡಿದಾಗ ಪತ್ನಿಯ ಕೊಠಡಿಯಿಂದ ಹಾಲಪ್ಪ ಹೊರ ಬರುತ್ತಿರುವುದು ಕಂಡು, ಅದನ್ನೇ ಮೊಬೈಲ್‍ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿದ್ದೇನೆ ಎಂದು ವೆಂಕಟೇಶ್ ದೂರು ನೀಡಿದ್ದರು.
ಏನಿದು ಪ್ರಕರಣ?
ಹಾಲಪ್ಪ ಮೇಲೆ ಅತ್ಯಾಚಾರ ದೂರು ದಾಖಲಾದ ಬಳಿಕ ರಾಜ್ಯಾದ್ಯಂತ ತೀವ್ರ ವಿರೋಧ ಕಂಡು ಬಂದ ಹಿನ್ನಲೆಯಲ್ಲಿ ಪ್ರಕರಣವನ್ನು ಸಿಐಡಿಗೆ ಒಪ್ಪಿಸಲಾಗಿತ್ತು. ಐಪಿಸಿ ಸೆಕ್ಷೆನ್ 376(ಅತ್ಯಾಚಾರ), 506(ಬೆದರಿಕೆ), 341(ಅಕ್ರಮವಾಗಿ ಕೂಡಿ ಹಾಕುವುದು), 34 (ನಿರ್ದಿಷ್ಟ ಉದ್ದೇಶದ ಅಪರಾಧ) ಅಡಿ ಪ್ರಕರಣ ದಾಖಲಾಗಿತ್ತು. ದೂರು ದಾಖಲಾದ ಆರು ದಿನದ ನಂತರ ಹಾಲಪ್ಪ ಶಿವಮೊಗ್ಗದಲ್ಲಿ ಪೊಲೀಸರಿಗೆ ಶರಣಾಗಿದ್ದರು. ನಂತರ ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ಈ ಹೈ ಪ್ರೊಫೈಲ್ ಕೇಸ್ ಬಗ್ಗೆ ಸಿಐಡಿ ಡಿಐಜಿ ಚರಣ್ ರೆಡ್ಡಿ ತನಿಖೆಯ ನೇತೃತ್ವ ವಹಿಸಿದ್ದರು. 2011ರ ಆಗಸ್ಟ್ ನಲ್ಲಿ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಪ್ರಕರಣದ ಹಿನ್ನೆಲೆಯಲ್ಲಿ ಶಿವಮೊಗ್ಗದ 12 ಜನ ಸೇರಿ ಒಟ್ಟು 32 ಜನ ಸಾಕ್ಷಿಗಳನ್ನು ಪ್ರಕರಣದಲ್ಲಿ ವಿಚಾರಣೆಗೆ ಒಳಪಡಿಸಲಾಗಿತ್ತು. ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ತಜ್ಞರು, ಮಹಜರು ಸಾಕ್ಷಿಗಳು, ಅಡಿಯೋ-ವಿಡಿಯೋ ತಜ್ಞರು, ಪೊಲೀಸ್ ಅಧಿಕಾರಿಗಳು, ಗನ್ ಮ್ಯಾನ್‍ಗಳು, ಐಬಿಯಲ್ಲಿದ್ದ ಸಿಬ್ಬಂದಿ ಇನ್ನಿತರರು ಪ್ರಕರಣದ ಸಾಕ್ಷಿಗಳಾಗಿದ್ದರು.