ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಅಕ್ಷತಾ ಶ್ರೀಧರ್ ತಮಗೇ ಮಾಲಿವುಡ್ ಚಿತ್ರ ಕಿರುಕುಳ ನೀಡಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಲ್ಲಿ ದೂರು ನೀಡಿದ್ದಾರೆ.
‘ಕೊಚ್ಚಿನ್ ಶಾದಿ ಚೆನ್ನೈ 03’ ಹೆಸರಿನಲ್ಲಿ ನಿರ್ಮಾಣವಾಗಲಿರುವ ಚಿತ್ರದಲ್ಲಿ ಅಭಿನಯಿಸಲು ಚಿತ್ರತಂಡ ನನಗೆ ಆಹ್ವಾನ ನೀಡಿತ್ತು. ಆದರೆ ಅಲ್ಲಿಗೆ ತೆರಳಿದ ಮೇಲೆ ನನಗೆ ಕಿರುಕುಳ ನೀಡಿದ್ದಾರೆ ಎಂದು ಅಕ್ಷತಾ ಶ್ರೀಧರ್ ಆರೋಪ ಮಾಡಿದ್ದಾರೆ.
ಏನಿದು ಪ್ರಕರಣ?
ನಟಿ ಅಕ್ಷತಾ ಶ್ರೀಧರ್ ಅವರಿಗೆ ಮಾಲಿವುಡ್ ಚಿತ್ರತಂಡ ತಮ್ಮ ಸಿನಿಮಾದಲ್ಲಿ ಅವಕಾಶ ನೀಡಿತ್ತು. ಅದರಂತೆ ಶೂಟಿಂಗ್ ಗಾಗಿ ಕಳೆದ ವಾರ ಕೇರಳಕ್ಕೆ ಹೋಗಿದ್ರು. ಆದರೆ ಆ ವೇಳೆ ನಟಿಗೆ ನೀಡಿದ್ದ ಹೋಟೆಲ್ ಕೊಠಡಿ ಕ್ಲೀನ್ ಮಾಡಿರಲಿಲ್ಲ. ಈ ಬಗ್ಗೆ ಹೋಟೆಲ್ ಸಿಬ್ಬಂದಿಯನ್ನು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಹೋಟೆಲ್ ಸಿಬ್ಬಂದಿ ಅವರೊಂದಿಗೆ ಜಗಳ ಮಾಡಿದ್ದಾರೆ. ಅಲ್ಲದೇ ಜಗಳ ಅತಿರೇಕಕ್ಕೆ ಹೋಗಿ ಹಲ್ಲೆ ಮಾಡಿ ಕಿರುಕುಳ ನೀಡಿದ್ದಾರೆ. ಇಂತಹ ಸಂದರ್ಭದಲ್ಲಿ ಶೂಟಿಂಗ್ ಕರೆಯಿಸಿಕೊಂಡ ಚಿತ್ರತಂಡ ಕೂಡ ಬೆಂಬಲ ನೀಡದೇ ನಟಿ ವಿರುದ್ಧವೇ ತಿರುಗಿ ಬಿದ್ದಿತ್ತು ಎಂದು ಆರೋಪ ಮಾಡಿದ್ದಾರೆ.
ಚಿತ್ರತಂಡದ ವರ್ತನೆಯಿಂದ ಭಯಗೊಂಡ ಅಕ್ಷತಾ ಅವರು ಹೋಟೆಲ್ ನೀಡಬೇಕಿದ್ದ 56 ಸಾವಿರ ರೂ. ಹಣವನ್ನು ಪಾವತಿ ಮಾಡಿ ಚಿತ್ರೀಕರಣದಿಂದ ಹಿಂದಿರುಗಿದ್ದಾರೆ. ಬಳಿಕ ಬೆಂಗಳೂರು ಪೊಲೀಸ್ ಕಮಿಷನರ್ ಅವರಿಗೆ ದೂರು ನೀಡಿದ್ದಾರೆ. ಅಲ್ಲದೇ ಈಗಾಗಲೇ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಗೂ ಮೌಖಿಕ ದೂರು ದಾಖಲು ಮಾಡಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಮಾಲಿವುಡ್‍ನಲ್ಲಿ ತಮಗಾದ ಅನುಭವದ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅಕ್ಷತಾ ಅವರು ಶೀಘ್ರವೇ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡುವುದಾಗಿ ಹೇಳಿದ್ದಾರೆ. ಅಂದಹಾಗೇ ಅಕ್ಷತಾ ಅವರು ಕನ್ನಡ ತ್ರಾಟಕ, ಪಾನಿಪುರಿ, ರಾಜೀವ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv