ಹೈದರಾಬಾದ್: ವ್ಯಕ್ತಿಯೊಬ್ಬರು ತನ್ನ ಹೆಂಡತಿಯ ಮಾನಸಿಕ ಕಿರುಕುಳದಿಂದ ಬೇಸತ್ತು ಹಾಗೂ ಮದುವೆಯಿಂದ ತನಗಾಗಿರುವ ಆರ್ಥಿಕ ನಷ್ಟದ ಪರಿಹಾರ ಕೋರಿ ಆಕೆಯ ವಿರುದ್ಧವೇ ಕೌಟುಂಬಿಕ ಹಿಂಸೆ ಪ್ರಕರಣ ದಾಖಲಿಸಿರೋ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
24 ವರ್ಷದ ಗೋಗು ರಾಮ್‍ಕುಮಾರ್ ತನ್ನ 28 ವರ್ಷದ ಪತ್ನಿ ಸಾಯಿ ಚೈತನ್ಯಾ ವಿರುದ್ಧ ಕೇಸ್ ದಾಖಲಿಸಿದ್ದಾರೆ. ವಿಜಯವಾಡದ ಫಸ್ಟ್ ಅಡಿಷನಲ್ ಚೀಫ್ ಮೆಟ್ರೊಪಾಲಿಟನ್ ಕೋರ್ಟ್ ಅರ್ಜಿಯನ್ನ ಸ್ವೀಕರಿಸಿದ್ದು, ಪ್ರಕರಣದ ವಿಚಾರಣೆ ಫೆಬ್ರವರಿ 21ರಂದು ನಡೆಯಲಿದೆ.
Advertisement
Advertisement
ಕುಮಾರ್ ಅವರ ದೂರಿನ ಪ್ರಕಾರ, ಅವರು 2017ರ ಆಗಸ್ಟ್ ನಲ್ಲಿ ಸಾಯಿ ಚೈತನ್ಯ ಜೊತೆ ವಿವಾಹವಾಗಿದ್ದರು. ಆದ್ರೆ ಎರಡು ತಿಂಗಳಲ್ಲೇ ಬೇರೆಯಾಗಿದ್ದಾರೆ. ಚೈತನ್ಯಗೆ ಈಗಾಗಲೇ ಮದುವೆಯಾಗಿದ್ದು, 12 ವರ್ಷದ ಮಗಳಿರುವ ಬಗ್ಗೆ ತನಗೆ ಹೇಳಿರಲಿಲ್ಲ. ನನಗೆ ಚೈತನ್ಯ ಯಿಂದ ವಂಚನೆಯಾಗಿದೆ ಎಂದು ರಾಮ್‍ಕುಮಾರ್ ಆರೋಪಿಸಿದ್ದು, ಕೌಟುಂಬಿಕ ಹಿಂಸೆ ಕಾಯ್ದೆಯ ಸೆಕ್ಷನ್ 12ರ ಅಡಿ ಪರಿಹಾರಕ್ಕಾಗಿ ಕೋರಿದ್ದಾರೆ.
Advertisement
Advertisement
ಮದುವೆಯ ನಂತರ ಕೌಟುಂಬಿಕ ಹಿಂಸೆ, ಅದರಲ್ಲೂ ಪತ್ನಿಯಿಂದ ಮಾನಸಿಕ ಹಿಂಸೆಯಾಗಿದೆ. ಪತ್ನಿ ನನ್ನನ್ನು ಸಣ್ಣ ಸಣ್ಣ ಕಾರಣಕ್ಕೂ ನಿಂದಿಸಿ ಅವಮಾನಿಸುತ್ತಿದ್ದಳು ಎಂದು ರಾಮ್‍ಕುಮಾರ್ ಆರೋಪ ಮಾಡಿದ್ದಾರೆ. ಅಲ್ಲದೆ ತನ್ನ ವಿರುದ್ಧ ಐಪಿಸಿ ಸೆಕ್ಷನ್ 498ಎ(ಗಂಡ/ ಗಂಡನ ಸಂಬಂಧಿಕರಿಂದ ಹಿಂಸೆ) ಅಡಿ ಸುಳ್ಳು ದೂರು ದಾಖಲಿಸಿ 10 ಲಕ್ಷ ರೂ. ಪರಿಹಾರ ನೀಡುವಂತೆ ಬ್ಲಾಕ್‍ಮೇಲ್ ಮಾಡುತ್ತಿದ್ದಾಳೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ. ಮದುವೆಗಾಗಿ 2.5 ಲಕ್ಷ ರೂ. ಖರ್ಚಾಗಿರೋ ಕಾರಣ ಹಾಗೂ ಮಾನಸಿಕ ಹಿಂಸೆಗಾಗಿ ಹಣಕಾಸಿನ ಪರಿಹಾರ ನೀಡಬೇಕೆಂದು ಕೋರಿದ್ದಾರೆ.
ರಾಮ್‍ಕುಮಾರ್ ಹಾಗೂ ಸಾಯಿ ಚೈತನ್ಯ ಇಬ್ಬರೂ ಒಂದೇ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಪ್ರೀತಿಸಿ ಮದುವೆಯಾಗಿದ್ದರು ಎಂದು ವರದಿಯಾಗಿದೆ.