ದಾವಣಗೆರೆ: ಬಹುವರ್ಷಗಳ ಕಾಲ ನನೆಗುದಿಗೆ ಬಿದ್ದಿದ್ದ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕು ಕೊನೆಗೂ ಬಳ್ಳಾರಿ ಜಿಲ್ಲೆಗೆ ಅಧಿಕೃತವಾಗಿ ಸೇರ್ಪಡೆಯಾಗಿದೆ.
ಜಿಲ್ಲಾ ಪಂಚಾಯಿತಿ ಅಧಿಸೂಚನೆ ಹಾಗೂ ಗೆಜೆಟ್ ನೋಟೀಫಿಕೇಷನ್ ತಲುಪಿದ್ದು, ಮಧ್ಯರಾತ್ರಿ 12 ಗಂಟೆಗೆ ಹರಪನಹಳ್ಳಿ ತಾಲೂಕು ಅಧಿಕೃತವಾಗಿ ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾಯ್ತು. 1997ರಿಂದ ದಾವಣಗೆರೆ ಜಿಲ್ಲೆಯ ಭಾಗವಾಗಿದ್ದ ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾಗಬೇಕೆಂದು ಹೋರಾಟ ಸಹ ನಡೆಯುತ್ತಿತ್ತು.
ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಹರಪನಹಳ್ಳಿ ತಾಲೂಕನ್ನು ಬಳ್ಳಾರಿ ಜಿಲ್ಲೆಗೆ ಸೇರ್ಪಡೆ ಮಾಡಿ ಆದೇಶ ಮಾಡಿತ್ತು. ಕೊನೆಗೂ ತಾಲೂಕು ಆಡಳಿತದ ಅಧಿಕೃತ ದಾಖಲೆ ಸಂಪೂರ್ಣ ಬಳ್ಳಾರಿಗೆ ಹಸ್ತಾಂತರ ಮಾಡಲಾಗಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾಹಿತಿ ನೀಡಿದ್ದಾರೆ.
ಪ್ರೊ. ನಂಜುಡಪ್ಪ ವರದಿ ಪ್ರಕಾರ ಹರಪನಹಳ್ಳಿ ರಾಜ್ಯದ 3ನೇ ಅತಿ ಹಿಂದುಳಿದ ತಾಲೂಕು. ಬಳ್ಳಾರಿ ಜಿಲ್ಲೆಗೆ ಸೇರ್ಪಡೆಯಾಗಿದ್ದರಿಂದ 371(ಜೆ) ವಿಶೇಷ ಸ್ಥಾನಮಾನ ಈ ತಾಲೂಕಿನ ಜನರಿಗೆ ಲಭ್ಯವಾಗಲಿದೆ. ಈ ಮೊದಲು 1957 ರಿಂದ 1996ರ ವರೆಗೆ ಹರಪನಹಳ್ಳಿ ತಾಲೂಕು ಬಳ್ಳಾರಿ ಜಿಲ್ಲೆಯ ಅವಿಭಾಜ್ಯ ಅಂಗವಾಗಿತ್ತು. 1997ರಲ್ಲಿ ಮುಖ್ಯಮಂತ್ರಿಯಾಗಿದ್ದ ಜೆ.ಎಚ್.ಪಟೇಲ್ ರು ಬಳ್ಳಾರಿಯಿಂದ ಹರಪನಹಳ್ಳಿಯನ್ನು ಬೇರ್ಪಡಿಸಿ ದಾವಣಗೆರೆಗೆ ಸೇರಿಸಿದ್ದರು. ಇಂದು ಮತ್ತೆ ಹರಪ್ಪನಹಳ್ಳಿ ಬಳ್ಳಾರಿ ಜಿಲ್ಲೆಯ ಮಡಿಲು ಸೇರಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv