Connect with us

Karnataka

ಹಾರಂಗಿ ಜಲಾಶಯ ಭರ್ತಿ ಆಯ್ತು: ಕೆಆರ್‍ಎಸ್‍ಗೆ ಹರಿಯುತ್ತಿದೆ ನೀರು, ರೈತರ ಮೊಗದಲ್ಲಿ ಸಂತಸ

Published

on

ಮಡಿಕೇರಿ: ಕೊಡಗು ಜಿಲ್ಲೆಯಾದ್ಯಂತ ಕಳೆದ ಒಂದು ವಾರಗಳಿಂದ ವ್ಯಾಪಕ ಮಳೆಯಾಗುತ್ತಿದ್ದು ಹಾರಂಗಿ ಜಲಾಶಯ ಭರ್ತಿಯಾಗಿದೆ. ವರ್ಷಕ್ಕೊಮ್ಮೆ ಕಾಣಸಿಗುವ ಅಪರೂಪದ ವಯ್ಯಾರದ ಸೊಬಗನ್ನು ನೋಡಲು ಪ್ರವಾಸಿಗರ ದಂಡು ಹರಿದುಬರುತ್ತಿದೆ.

ಭರ್ಜರಿಯಾಗಿ ಸುರಿಯುತ್ತಿರೋ ಪುನರ್ವಸು ಮಳೆಯ ಅಬ್ಬರಕ್ಕೆ ಕಾವೇರಿ ಸೇರಿದಂತೆ ಹಾರಂಗಿ, ಬೇತ್ರಿ, ಲಕ್ಷ್ಮಣತೀರ್ಥ ನದಿಗಳು ಉಕ್ಕಿಹರಿಯುತ್ತಿದೆ. ಕಾವೇರಿಯ ಪ್ರಮುಖ ಉಪನದಿಗಳಲ್ಲಿ ಒಂದಾದ ಹಾರಂಗಿಯೂ ಉಕ್ಕಿ ಹರಿಯುತ್ತಿರುವ ಕಾರಣ ಜಲಾಶಯ ಭರ್ತಿಯಾಗಿದೆ.

ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಜುಲೈ ಎರಡನೇ ವಾರದ ಬಳಿಕ ವಾಡಿಕೆಯಂತೆ ಮಳೆ ಆಗುತ್ತಿದ್ದು, ಗರಿಷ್ಠ 2,859 ಅಡಿ ಸಾಮರ್ಥ್ಯದ ಜಲಾಶಯದಲ್ಲಿ 2855.91 ಅಡಿ ನೀರು ಸಂಗ್ರಹವಾಗಿದೆ. 7042 ಸಾವಿರ ಕ್ಯೂಸೆಕ್ ಒಳಹರಿವು ಇದ್ದು ಭಾನುವಾರ ಮಧ್ಯಾಹ್ನ ನಾಲ್ಕು ಕ್ರಸ್ಟ್ ಗೇಟ್ ಓಪನ್ ಮಾಡಿ 1200 ಕ್ಯೂಸೆಕ್ ನೀರನ್ನು ನದಿಗೆ ಹರಿಯಬಿಡಲಾಗುತ್ತಿದೆ.

ಜಲಾಶಯದ ನಾಲ್ಕು ಗೇಟ್‍ಗಳನ್ನು ತೆರೆದು ನೀರನ್ನು ಹರಿಸಲಾಗುತ್ತಿರುದರಿಂದ ಎತ್ತರದಿಂದ ಧುಮ್ಮುಕ್ಕಿ ಹರಿಯುವ ನೀರು ಹಾಲ್ನೋರೆಯಂತೆ ರಭಸವಾಗಿ ಕೆಳಗಿಳಿಯೋ ದೃಶ್ಯ ನಯನಮನೋಹರಕವಾಗಿದೆ.

ನೀರಿನ ಅಂದ ನೋಡಲು ಪ್ರವಾಸಿಗರ ದಂಡು ಹಾರಂಗಿ ಆಗಮಿಸುತ್ತಿದ್ದು, ಬೇಸಿಗೆಯಲ್ಲಿ ಸೊರಗಿದ್ದ ಜಲಾಶಯ ಮುಂಗಾರಿನ ಅಬ್ಬರಕ್ಕೆ ತುಂಬಿಹರಿಯುತ್ತಿದೆ. ಶನಿವಾರ ಮತ್ತು ರವಿವಾರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಪ್ರವಾಸಿಗರು ಹಾರಂಗಿಯ ಅಪರೂಪದ ಸೌಂದರ್ಯವನ್ನು ಕಣ್ಣುತುಂಬಿಕೊಳ್ಳುತ್ತಿದ್ದಾರೆ.

ಒಟ್ಟಿನಲ್ಲಿ ಮುಂಗಾರು ಮಳೆ ಪ್ರಾರಂಭದಲ್ಲಿ ಮಂಕಾಗಿದ್ದರಿಂದ ಕಂಗಾಲಾಗಿದ್ದ ರೈತರಿಗೆ ಮಳೆಯ ಅರ್ಭಟದಿಂದ ಜಲಾಶಯ ಭರ್ತಿಯಾಗಿರೋದು ಸಂತಸ ತರಿಸಿದೆ. ಇನ್ನೇನು ಕಾಲುವೆಗಳ ಮೂಲಕ ಬೇಸಾಯಕ್ಕೆ ನೀರುಹರಿಯಲಿದ್ದು ರೈತರ ಹೊಲಗದ್ದೆಗಳಿಗೆ ಬರಲಿದೆ. ಕಳೆದ ವರ್ಷ ಜುಲೈ 10ಕ್ಕೆ ಭರ್ತಿಯಾಗಿದ್ದರೆ ಈ ವರ್ಷ 13 ದಿನ ತಡವಾಗಿ ಭರ್ತಿಯಾಗಿದೆ.

ಕ್ಯೂಸೆಕ್ ಟಿಎಂಸಿ ಎಂದರೆ ಎಷ್ಟು?
ಕ್ಯೂಸೆಕ್ ಎಂಬುದು cubic foot per second ಹೃಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.

https://www.youtube.com/watch?v=wZEvmy9E5-4

Click to comment

Leave a Reply

Your email address will not be published. Required fields are marked *