ಹೆಚ್ಚೆಂದರೆ ಇದು 8ನೇ ತಿಂಗಳು ಪ್ರಾರಂಭವಾಗುತ್ತಾ ಬಂತು. ಇದೊಂದು ನೆಪ ಅದರಲ್ಲೊಂದು ನೆನಪು. ನೆನಪಿನಲ್ಲೊಂದು ಕಾಡುವ ನೋವು. ಕಣ್ಣೆರಡಕ್ಕೂ ಕಾತುರ ಕಣ್ಣುಂಬಿಕೊಳ್ಳಲು, ನಾ ನಾಡುವ ಪ್ರತಿ ಮಾತುಗಳು ನನ್ನಲ್ಲೇ ಭಯ ಹುಟ್ಟಿಸುತ್ತಿದೆ. ಇದೊಂದು ನನ್ನದೇ ಆಯ್ಕೆ. ನನ್ನ ಯಶಸ್ಸಿನ ಹಾದಿಗೆ ಇದೊಂದು ಹೆಜ್ಜೆ ಮಾತ್ರ.
ಆಸೆಯಿಂದ ನನ್ನದೇ ನಿರ್ಧಾರದೊಂದಿಗೆ ದೂರದಲ್ಲೊಂದು ಊರಿಗೆ ಬಂದು ಓದುತ್ತಿರುವೆ. ಆದರೆ ಇದೆಲ್ಲವೂ ನನ್ನ ಹಸಿವನ್ನು ನೀಗಿಸಿ ಉಸಿರನ್ನು ನೀಡುತ್ತಿದೆ. ಇದೆಲ್ಲದರ ಮಧ್ಯೆ ಕಾಡುವ ನೆನಪೊಂದೇ ಅದು ಅವನು. ನನ್ನ ಬದುಕಿಗೆ ಉಸಿರಾದವನು. ನನ್ನ ಕನಸಿಗೆ, ಯಶಸ್ಸಿಗೆ ದಾರಿಯಾದವನು. ನನ್ನೆಲ್ಲಾ ನೋವಲ್ಲೂ ಮರುಕಳಿಸುವ ನೆನಪು ಅವನದ್ದು. ನಾ ಕಾಣುವ ಕನಸಲ್ಲೂ ಕಾಡುವ ಕಣ್ಣು ಅವನದು. ನನ್ನೆಲ್ಲಾ ಆಸ್ತಿತ್ವಕ್ಕೆ ಅವನೇ ರಾಯಭಾರಿ ಅವನೇ ರೂವಾರಿ, ಮಾತಾಡುವ ಮಾತಿನಲ್ಲೂ ಪ್ರತಿಧ್ವನಿಸುವ ಸ್ವರ ಅವನದು.
Advertisement
Advertisement
ಹೀಗೊಂದು ದಿನ ಕೋವಿಡ್ ಸಮಯ ಎಲ್ಲರಿಗೂ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳುವುದು ಒಂದು ಜವಾಬ್ದಾರಿಯಾಗಿತ್ತು. ಆ ದಿನ ನಾನು ವ್ಯಾಕ್ಸಿನೇಷನ್ ಮಾಡಿಸಿಕೊಂಡು ಖುಷಿಯಲ್ಲಿ ಬಂದೆ. ಆ ದಿನ ರಾತ್ರಿ ಕಣ್ಮುಚ್ಚಿದರೂ ಕಣ್ತೆರೆದರೂ ಬಿಸಿ ಅನುಭವ, ದೇಹದ ಸುತ್ತಮುತ್ತ ಅದೊಂದು ಕೆಂಡಾಮಂಡಲದ ಭಾವ. ಹೌದು, ಆ ರಾತ್ರಿ ವಿಪರೀತ ಜ್ವರ. ನನ್ನ ಈ ಏರಿಳಿತದ ನಡುವೆ ಬಂದದ್ದು ಅವನು, ನನ್ನ ತಲೆಗೆ, ಅಂಗಾಲಿಗೆ ಎಣ್ಣೆ ಸವರಿ, ಮಸಾಜ್ ಮಾಡಿ ನನಗೊಂದು ಕಾಳಜಿಯ ನಗು ನೀಡಿ ಹೋದದ್ದು ಅವನು.
Advertisement
Advertisement
ತನ್ನ ಕೈ ಹಿಡಿದು ಜಗತ್ತಿನಲ್ಲಿರುವ ಪ್ರತಿಯೊಂದು ರೀತಿಯ ಏರುಪೇರುಗಳ ಬಾಗಿಲನ್ನು ತೋರಿಸಿ, ನನ್ನನ್ನು ಯಶಸ್ಸಿನ ಬಾಗಿಲೊಳಗೆ ಬಿಟ್ಟು ತನ್ನನ್ನು ನನ್ನೊಳಗೆ ಕಂಡ ಜೀವಿಯದು. ದೂರದಲ್ಲಿರುವ ಜೀವದ ನಗುವನ್ನು ಕಣ್ಮುಚ್ಚಿ ನೆನೆದು ಕಣ್ತುಂಬಿಕೊಳ್ಳುತ್ತಿರುವೆ.
ಬಾಡಿಗೆ ನಗುವೊಂದನ್ನು ಹೊತ್ತು ತಿರುಗುತ್ತಿರುವ ನನಗೆ ಅವನ ಸ್ವಂತಿಕೆಯ ನಗುವೊಂದು ಬೇಕಾಗಿದೆ. ನನ್ನೆಲ್ಲಾ ಆಸೆಗಳಿಗೆ ತನ್ನ ಕನಸುಗಳನ್ನು ಧಾರೆಯರೆದವ ಅವನು, ಇರುವ ತನಕ ಒಮ್ಮೆ ಬದುಕಿಬಿಡುವೆ ಅವನ ಕನಸುಗಳೇ ನನ್ನ ಆಸೆಯೆಂಬಂತೆ!
ಹೌದು. ಎಲ್ಲವೂ ಅವನೇ, ಅವನಿಂದಲೇ, ಅವನಿಗಾಗಿಯೇ..
ಅಮ್ಮ ನನ್ನ ಹಸಿವಾದರೆ, ಅಪ್ಪ ನನ್ನ ಉಸಿರು ನನ್ನೆಲ್ಲಾ ಕನಸಿಗೂ ಉಸಿರು ತುಂಬಿಸಿ ಸ್ಫೂರ್ತಿ ನೀಡುವುದು ಅವನು .
ಅವನು ಅವನೇ ನನ್ನ ಅಪ್ಪ… ನನ್ನೊಲುಮೆಯ ಅಂತರಾತ್ಮ ಅವನು!