ಮತ್ತೆ ಹೊಸ ವರ್ಷ ಬಂದಿದೆ. ಮತ್ತೆ ಎನ್ನುವುದೇ ಹೊಸ ಒಲವಿನ ಸಂಕೇತ. ಹೊಸದು ಯಾವಾಗಲೂ ಹೊಸದೇ. ಹಾಗಾಗಿ ಹಳೆಯ ಹಾಳೆಯ ಹರಿದು, ಹೊಸ ನೂಲು ಹೊಸೆದು, ಹೊಸ ಕನಸುಗಳ ಜೊತೆ ಹೆಜ್ಜೆ ಹಾಕೋಣ. ಆ ಹೆಜ್ಜೆಗಳು ಸದಾ ಹೊಸ ಹಾದಿಯನ್ನೇ ಹುಡುಕುತಿರಲಿ ಎಂದು ಪ್ರಾರ್ಥಿಸೋಣ.
2023ನ್ನೂ ಸ್ವಾಗತಿಸಿ ಸಂಭ್ರಮಿಸಿದ ನೆನಪೇ ಇನ್ನೂ ಕಳೆದಿಲ್ಲ… ಈಗ 2024ಕ್ಕೆ (New Year 2024) ಹೆಜ್ಜೆ ಇಟ್ಟಿದ್ದೇವೆ. ಈಗಾಗಲೇ ಗೋಡೆಗಳ ಮೇಲೆ ಹೊಸ ಕ್ಯಾಲೆಂಡರ್ ತೂಗಿ ಹಾಕಲಾಗಿದೆ. ಅದು ಕೇವಲ ಅಂಕಿ ಸಂಖ್ಯೆಗಳ ಕ್ಯಾಲೆಂಡರ್ ಆಗದೇ, ಅಸಂಖ್ಯೆ ಕನಸುಗಳು ತೂಗುಯ್ಯಾಲಿ ಆಗಲಿ ಎಂದು ಬಯಸೋಣ. ಕಳೆದ ವರ್ಷ ಏನೇ ಕಹಿ ಘಟನೆ ನಡೆದಿದ್ದರೂ ಈಗ ಕ್ಯಾಲೆಂಡರ್‌ನಂತೆ ಆ ಕಹಿ ಘಟನೆಗಳ ಜಾಗಕ್ಕೆ ಹೊಸ ಉತ್ಸಾಹವನ್ನೂ ತೂಗಿ ಹಾಕಿ, ಹೊಸ ತೊಟ್ಟಿಲೊಳಗೆ ಭರವಸೆಯನ್ನು ತೂಗೋಣ.
Advertisement
Advertisement
ಗತಿಸಿದ ವರ್ಷ ಎಷ್ಟೋ ನೋವು ಹಾಗೂ ನಲಿವುಗಳನ್ನು ಕೊಟ್ಟಿರಬಹುದು, ಆದರೆ ಈಗ ನಮಗೆ ಸಾಗಲು ಬೇಕಿರುವುದು ನಲಿವಿನ ಇಂಧನ ಮಾತ್ರ. ಹಾಗೇಯೇ ನಮ್ಮನ್ನು ಹತಾಶೆಗೆ ಸಿಲುಕಿಸಿದ ಎಡವಿದ ಹೆಜ್ಜೆಗಳನ್ನು ಮರಳಿ ಇಡಬಾರದೆಂಬ ಎಚ್ಚರಿಕೆ. ಕಳೆದ ವರ್ಷಗಳ ನಿರ್ಧಾರಗಳು ಏನಾದವೋ? ಈ ಬಗ್ಗೆ ಚಿಂತೆ ಬೇಡ. ಈ ಬಾರಿಯ ನಿರ್ಧಾರಗಳು ಹಳಿ ತಪ್ಪದಂತೆ ಹೇಗೆ ಸ್ಟೇರಿಂಗ್ ಹಿಡಿಯಬೇಕು ಎಂಬ ಬಲವಾದ ನಿರ್ಧಾರದೊಂದಿಗೆ ಹೆಜ್ಜೆ ಇಡಬೇಕಾದ ಸಮಯ ಇದು. ಪ್ರತಿ ಹೆಜ್ಜೆಯಲ್ಲೂ ಗೆಲುವನ್ನು ಹುಡುಕಬೇಕಿದೆ. ಆ ಹುಡುಕುವಿಕೆಯಲ್ಲಿ ನೂರು ಸಂಭ್ರಮದ ಹೆಜ್ಜೆಗಳು ಇಣುಕಬೇಕಿದೆ.
Advertisement
ಮನುಷ್ಯ ಬದುಕಿನಲ್ಲಿ ಕಳೆದುಕೊಳ್ಳುವುದಕ್ಕಿಂತ ಪಡೆದುಕೊಳ್ಳುವುದೇ ಹೆಚ್ಚು. ಹೀಗಿರುವಾಗ ಯಾವ ಬೆಲೆಯೇ ಇಲ್ಲದ ನೋವುಗಳಿಗೆ ನಮ್ಮ ಕಿಸೆಯಲ್ಲಿ ಏನು ಕೆಲಸ ಹೇಳಿ? ಕೈತಪ್ಪಿದ ಯಾವ ಕ್ಷಣವೂ ನಮ್ಮದಲ್ಲ! ಮತ್ಯಾಕೆ ಮೊಬೈಲ್‍ನಲ್ಲಿ ಅದೇ ನೋವುಗಳನ್ನು ನೆನಪಿಸುವ ಆ.. ಸಾಂಗ್ಸ್? ಎದೆಯಲ್ಲಿ ನೋವು ಕರೆಗಿಸುವ ಹಾಡು ರಿಂಗಣಿಸಲು, ಪ್ರತಿ ಹಾಡೂ ಎಚ್ಚರಿಕೆಯ ಸುಪ್ರಭಾತ ಹಾಡಲಿ. ಮತ್ಯಾಕೆ ಎದೆ ಪಂಜರದಿಂದ ಹೊರಟ ನೋವಿನ ಹಕ್ಕಿಯನ್ನು ಕರೆ ತರುವ ಯತ್ನ! ಸಾಕಲ್ಲವೇ.. ಕತ್ತಲೆಯಲ್ಲಿ ಕತ್ತಲಾಗುವ ಹುಚ್ಚು, ಇನ್ನಾದರೂ ಬೆಳಕಿನ ದಿಕ್ಕಿನ ಕಿಟಕಿಯನ್ನು ತೆಗೆದಿಡೋಣ. ಕಿಟಕಿ ಮೂಲಕ ಬಂದ ಬೆಳಕು, ಬದುಕನ್ನು ಬೆಳಗಲಿ. ಸೊಡರೆಣ್ಣೆ ತೀರದಂತೆ ನಮ್ಮ ಮನಸುಗಳು ಕಾಪಾಡಿಕೊಳ್ಳಲಿ.
Advertisement
ಜೀವನದಲ್ಲಿ ಏರು-ಇಳಿವು, ಸುಖ-ದುಃಖ, ಮಾನ-ಅಪಮಾನ, ಸಿರಿತನ-ಬಡತನ ಎಲ್ಲವೂ ಇದ್ದದ್ದೆ. ಏರಿದವರು ಇಳಿಯಲೇಬೇಕು. ಇಳಿದವರು ಏರಲೇಬೇಕು. ಜೀವನವು ಒಂದುರೀತಿ ಜೋಕಾಲಿ ಇದ್ದಂತೆ. ಆ ಜೋಕಾಲಿಯಲ್ಲಿ ಕಷ್ಟಗಳು ಇಳಿಯಲಿ, ಸುಖವು ಏರಲಿ. ಏರಳಿತದ ಜೀಕಾಟದಲ್ಲಿ ಗೆಲುವು ನಮ್ಮದಾಗಲಿ.
ನಮ್ಮೊಳಗೆ ಏನಾಗಬೇಕು ಎಂಬುದು ಡೈರಿಯ ಮೊದಲ ಪುಟದಲ್ಲಿ ಬರೆಯುವುದಕ್ಕಿಂತ ಹಾಗೆಯೇ ಬದುಕಿ ಬಿಡುವುದು ಉತ್ತಮ. ಜೊತೆಗೆ ಕಗ್ಗದ ಕವಿ ಡಿವಿಜಿಯವರು ಹೇಳುವಂತೆ ನಗುವ ನಗಿಸುವ ನಗಿಸಿ ನಗುತ ಬಾಳುವ ವರವನ್ನು ಬೇಡಿಕೊಳ್ಳೋಣ. ಆ ವರವು ವರ್ಷಪೂರ್ತಿ ನಮ್ಮನ್ನು ಕಾಪಿಡಲಿ, ಆ ಕಾವು ಸದಾ ನಮ್ಮೊಳಗೆ ಪುಳಕ ಪುಟಿಸಲಿ.
ಜನ ಅಭಿವೃದ್ಧಿಯಾದರೆ ರಾಜ್ಯಗಳು ಅಭಿವೃದ್ಧಿಯಾದಂತೆ. ರಾಜ್ಯ ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ. ಭಾರತದ (India) ಚಂದ್ರಯಾನ-3 (Chandrayaan-3) ಯಶಸ್ವಿಯಾಗಿದೆ. ಈ ವರ್ಷವೂ ಭಾರತದ ಸಾಧನೆ ವಿಶ್ವಕ್ಕೆ ಪಸರಿಸಲಿ. ಈ ಸಾಧನೆಯಲ್ಲಿ ನಮ್ಮ ನೆರಳು ಕಾಣಿಸಿಕೊಳ್ಳಲಿ. ಮತ್ತೆ ಹೊಸ ವರ್ಷ ಬಂದಿದೆ, ಮತ್ತೊಂದು ವರ್ಷ ಬರಲಿದೆ. ಲೆಕ್ಕ ಇಡುವುದ್ಯಾಕೆ? ಬದುಕು ಚೊಕ್ಕವಾಗಿಡೋಣವಷ್ಟೆ.