ಹಾವೇರಿ: ಕುರಿಗಾಯಿ ಹನುಮಂತ ಈಗ ಸಖತ್ ಫೇಮಸ್ ಆಗಿದ್ದಾರೆ. ಹಾವೇರಿ ಜಿಲ್ಲಾಡಳಿತಕ್ಕೆ ಈಗ ಹನುಮಂತನೇ ಬ್ರ್ಯಾಂಡ್ ಐಕಾನ್ ಆಗಿದ್ದು, ಹನುಮಂತನ ಕೋಗಿಲೆಯ ಕಂಠದಲ್ಲಿ ಈಗ ಮತದಾನ ಜಾಗೃತಿ ಗೀತೆ ಮೂಡಿದೆ. ಹನುಮಂತ ಹಾಡಿದ ಗೀತೆಯಿಂದ ಮತದಾನ ಪ್ರಮಾಣ ಹೆಚ್ಚಳಕ್ಕೆ ಪ್ಲಾನ್ ಹಾಕಿದ್ದಾರೆ.
ಸರಿಗಮಪ ರನ್ನರ್ ಅಪ್ ಖ್ಯಾತಿಯ ಹನುಮಂತ ಹಾವೇರಿ ಜಿಲ್ಲೆಯ ಲೋಕಸಭಾ ಚುನಾವಣೆಯ ಮತದಾನ ಜಾಗೃತಿಯ ಐಕಾನ್ ಆಗಿದ್ದಾರೆ. ಕಳೆದ ಒಂದು ವಾರದ ಹಿಂದೆ ವಿವಿ ಪ್ಯಾಟ್ ಮೆಷಿನ್ ಮತದಾನ ಹೇಗೆ ಮಾಡಬೇಕು ಎನ್ನುವ ಪ್ರಾತ್ಯಕ್ಷಿಕೆ ತೋರಿಸಿ ಜನರಿಗೆ ಮತದಾನ ಜಾಗೃತಿ ಮಾಡಿದ್ದರು.
ಸೋಮವಾರ ಜಿಲ್ಲಾ ಪಂಚಾಯ್ತಿ ಕಚೇರಿಯ ಮುಂದೆ ಎಲ್ಲಾ ಸಿಬ್ಬಂದಿಗಳ ಜೊತೆಗೆ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದರು. ಪ್ರತಿಜ್ಞಾವಿಧಿಯನ್ನು ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ ಕೆ. ಲೀಲಾವತಿ ಬೋಧನೆ ಮಾಡಿದರು. ನಂತರ ಹಾವೇರಿ ನಗರದ ಪ್ರಮುಖ ಬೀದಿಯಲ್ಲಿ ಲೋಕಸಭಾ ಚುನಾವಣೆಯ ಏಪ್ರಿಲ್ 23ರಂದು ನಡೆಯಲಿದ್ದು, ತಪ್ಪದೆ ಮತದಾನ ಮಾಡಿ. ನಿಮ್ಮ ಹಕ್ಕು ಚಲಾಯಿಸಿ ಎಂದು ಹನುಮಂತ ಜಾಗೃತಿ ಮೂಡಿಸಿದ್ರು.
ಹನುಮಂತ ಸ್ವಲ್ಪ ಹೊತ್ತು ಸೈಕಲ್ ಜಾಥ ಮಾಡಿ, ನಂತರ ನಗರದ ಪ್ರಮುಖ ಬೀದಿಯಲ್ಲಿ ಕಾಲು ನಡುಗೆಯಲ್ಲಿ ಕರಪತ್ರಗಳನ್ನು ನೀಡುತ್ತಾ ಮತದಾನ ಮಾಡಿ ಎಂದು ಹೇಳಿದರು. ಹೂ ವ್ಯಾಪಾರಸ್ಥರು, ಹಣ್ಣು ಹಾಗೂ ಸಾರ್ವಜನಿಕರಿಗೆ ಏಪ್ರಿಲ್ 23ರಂದು ಕಡ್ಡಾಯವಾಗಿ ಮತದಾನ ಮಾಡಿ ಎಂದು ಹೇಳುತ್ತಾ, ಕರಪತ್ರಗಳನ್ನ ನೀಡುತ್ತಾ ಹನುಮಂತ ನಗರವನ್ನು ರೌಂಡ್ ಹಾಕಿದರು. ಹಾವೇರಿಯ ಇನ್ನೂ ಕೆಲವು ದಿನಗಳ ಕಾಲ ಜಾಗೃತಿ ಕಾರ್ಯಕ್ರಮದಲ್ಲಿ ಹನುಮಂತ ಭಾಗವಹಿಸಲಿದ್ದಾರೆ.
ಈ ಬಾರಿ ಹಾವೇರಿ ಜಿಲ್ಲೆಯಲ್ಲಿ ಹೆಚ್ಚಿನ ಮತದಾನ ಆಗಲಿದೆ. ಅಲ್ಲದೆ ಹನುಮಂತ ಕಂಚಿನ ಕಂಠದಲ್ಲಿ ಮತದಾನ ಮಾಡಿ ಎಂದು ಸೂಪರ್ ಆಗಿ ಹಾಡು ಹೇಳಿದ್ದಾರೆ. ಜನರು ಹನುಮಂತ ಹಾಡನ್ನು ವಾಟ್ಸಾಪ್ ಹಾಗೂ ಆಟೋದಲ್ಲಿ ಮತದಾನದ ಹಾಗೂ ವಿವಿಧ ಕಾರ್ಯಕ್ರಮಗಳಲ್ಲಿ ಮತದಾನ ಮಾಡಣ್ಣ ಎಂದು ಜಾಗೃತಿ ಮೂಡಿಸಲಿದ್ದಾರೆ ಎಂದು ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಲೀಲಾವತಿ ಹೇಳಿದ್ದಾರೆ.
ಕುರಿಗಾಯಿ ಸಿಂಗರ್ ಹನುಮಂತ ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತ ಆಗದೆ ಐಕಾನ್ ಆಗಿದ್ದು, ಜಿಲ್ಲೆಯ ಜನರಿಗೆ ಸಂತಸ ತಂದಿದೆ. ಇನ್ನೊಂದು ಕಡೆ ಹನುಮಂತ ಹಾಡು, ಪತಿಜ್ಞಾವಿಧಿ ಹಾಗೂ ಸೈಕಲ್ ಜಾಥದ ಮೂಲಕ ಮತದಾನ ಮಾಡಿ, ಒಳ್ಳೆಯ ವ್ಯಕ್ತಿಗೆ ಮತದಾನ ತಪ್ಪದೆ ಹಕ್ಕು ಚಲಾವಣೆ ಮಾಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.