-ಮತದಾನ ನಿಮ್ಮ ಹಕ್ಕು, ಮಿಸ್ ಮಾಡ್ದೆ ವೋಟ್ ಮಾಡಿ
ಹಾವೇರಿ: ಜಿಲ್ಲೆಯ ಚಿಲ್ಲೂರು ಬಡ್ನಿ ಗ್ರಾಮದ ಗಾಯಕ ಹನುಮಂತ ಲಮಾಣಿ ಹಾವೇರಿ ಜಿಲ್ಲಾ ಚುನಾವಣಾ ರಾಯಭಾರಿಯಾಗಿ ಆಯ್ಕೆ ಆಗಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಮತದಾನ ಮಾಡಿಸುವ ಉದ್ದೇಶದಿಂದ ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಸ್ವೀಪ್ ಸಮಿತಿ ಗಾಯಕ ಹನುಮಂತರನ್ನು ಆಯ್ಕೆ ಮಾಡಿದೆ. ಪರಿಣಾಮ ಜಿಲ್ಲೆಯಾದ್ಯಂತ ಸಂಚರಿಸಿ ಎಲ್ಲರು ತಪ್ಪದೇ ಮತದಾನ ಮಾಡಿ, ಮತದಾನ ನಿಮ್ಮ ಹಕ್ಕು ಎಂದು ಹನುಮಂತ ಅವರು ಅರಿವು ಮೂಡಿಸಲಿದ್ದಾರೆ.
ಚುನಾವಣೆಯಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಐಕಾನ್ ಆಗಿ ಆಯ್ಕೆ ಆಗಿರುವ ಹನುಮಂತ ಅವರು ಈಗಾಗಲೇ ಜಿಲ್ಲೆಯಲ್ಲಿ ವಿವಿ ಪ್ಯಾಟ್ ಬಗ್ಗೆ ಜಾಗೃತಿ ಮೂಡಿಸಲು ಮಾದರಿಯನ್ನು ನೀಡಿದ್ದಾರೆ. ಹನುಮಂತ ಅವರ ಗಾಯನಕ್ಕೆ ರಾಜ್ಯದ ಜನ ಮೆಚ್ಚುಗೆ ಸೂಚಿಸಿದ್ದರು. ಸರಿಗಮಪ ಶೋ ರನ್ನರ್ ಅಪ್ ಬಳಿಕ ಹನುಮಂತ ಯಾವ ಪಕ್ಷದ ಪರ ಪ್ರಚಾರ ಮಾಡಲಿದ್ದಾರೆ ಎಂಬ ಕುತೂಹಲವೂ ಮೂಡಿತ್ತು. ಅಲ್ಲದೇ ಹಲವು ಪಕ್ಷಗಳು ಅವರನನ್ನು ಸಂಪರ್ಕ ಮಾಡಲು ಪ್ರಯತ್ನ ಕೂಡ ನಡೆಸಿದ್ದರು. ಆದರೆ ಸದ್ಯ ಹನುಮಂತ ತಮ್ಮ ಫೇಮ್‍ನ್ನು ಉತ್ತಮ ಉದ್ದೇಶಕ್ಕಾಗಿ ಉಪಯೋಗಿಸಲು ಮುಂದಾಗಿದ್ದಾರೆ.
ಜಿಲ್ಲಾ ಚುನಾವಣಾ ಆಯೋಗ ಸದ್ಯ ಹನುಮಂತ ಅವರನ್ನು ಕೇಂದ್ರವಾಗಿಸಿ ಜಾಗೃತಿ ಮೂಡಿಸುವ ವಿಡಿಯೋಗಳನ್ನು ಚಿತ್ರೀಕರಣ ಮಾಡಲು ಸಿದ್ಧತೆ ನಡೆಸಿದೆ. ಆ ಮೂಲಕ ಚುನಾವಣೆಯಲ್ಲಿ ಮತದಾನದ ಜಾಗೃತಿ ಪ್ರಚಾರದಲ್ಲಿ ಹನುಮಂತ ಅವರು ಗ್ರ್ಯಾಂಡ್ ಎಂಟ್ರಿ ಕೊಡಲು ಸಿದ್ಧರಾಗಿದ್ದಾರೆ. ಅಂದಹಾಗೇ ಇದೇ ಮೊದಲ ಬಾರಿಗೆ ಹನುಮಂತ ಅವರು ಕೂಡ ಮತದಾನ ಮಾಡಲಿದ್ದಾರೆ.