ಅಚಲ ಭಕ್ತಿ, ಧೈರ್ಯ ಮತ್ತು ಶಕ್ತಿಗೆ ಹೆಸರುವಾಸಿಯಾದ ದೇವರು ಯಾರು ಎಂದರೆ ಅದು ಹನುಮಂತ (Hanumantha). ರಾಮನ ಮೇಲಿಟ್ಟ ಭಕ್ತಿ, ಲಂಕೆಗೆ ಏಕಾಂಗಿಯ ಹೋಗಿ ಲಂಕಾದಹನ ಮಾಡಿದ ಪರಾಕ್ರಮಿ, ಗಟ್ಟಿ ಮುಟ್ಟಾದ ದೇಹವನ್ನು ಹೊಂದಿರುವ ಆಂಜನೇಯನ ಜನ್ಮವನ್ನು ಸ್ಮರಿಸಲು ಆಚರಿಸಲಾಗುವ ಹಿಂದೂಗಳ ಹಬ್ಬವೇ ಹನುಮ ಜಯಂತಿ (Hanuman Jayanti).
ಹನುಮಂತ ಹುಟ್ಟಿದ್ದು ಹೇಗೆ?
ಒಂದು ದಿನ ಪಾರ್ವತಿ, ಪರಮೇಶ್ವರರು ಕೈಲಾಸ ಪರ್ವತದಲ್ಲಿದ್ದಾಗ ಒಂದು ವಾನರಯುಗ್ಮವನ್ನು ಕಂಡರು. ಪಾರ್ವತಿ ಶಿವನೊಂದಿಗೆ ಕಲೆತು ಗರ್ಭವನ್ನು ಧರಿಸಿ ಅದನ್ನು ತಾಳಲಾರದೇ ಶಿವನಲ್ಲಿ ಮನವಿ ಮಾಡಿದಾಗ ಶಿವ ಆ ಗರ್ಭವನ್ನು ಪಾರ್ವತಿಯ ನಾಭಿಯಿಂದ ಹೊರಬೀಳುವಂತೆ ಮಾಡಿದ. ಭೂದೇವಿ ಅದನ್ನು ಧರಿಸಲಾರದೇ ಕಂಗೆಟ್ಟಳು.
ಅದೇ ಸಮಯದಲ್ಲಿ ಗೌತಮನ ಪುತ್ರಿ, ಕೇಸರಿಯ ಪತಿ ಆಂಜನೆ ಪುತ್ರಕಾಂಕ್ಷೆಯಿಂದ ತೀವ್ರವಾದ ಜಪ, ತಪ ಕೈಗೊಂಡಿದ್ದಳು. ಆಗ ವಾಯುದೇವ ಆಕೆಯ ರೂಪಕ್ಕೆ ಮರುಳಾಗಿ, ಆ ಗರ್ಭವನ್ನು ತೆಗೆದುಕೊಂಡು ಆಕೆಯ ಅಂಗೈಯಲ್ಲಿಟ್ಟ. ಆಕೆ ಅದನ್ನು ನುಂಗಿದಳು. ನವಮಾಸಗಳು ತುಂಬಿದ ಬಳಿಕ ಒಬ್ಬ ವಟು ಜನಿಸಿದ. ಜನಿಸಿದ ವಟುವೇ ಆಂಜನೇಯ.
ಹನುಮಂತ ಹೆಸರು ಬಂದಿದ್ದು ಹೇಗೆ?
ಈ ವಟು ಸೂರ್ಯನನ್ನು ನೋಡಿ ಸೂರ್ಯನನ್ನೇ ನುಂಗಲು ಹೋಗಿದ್ದ. ಇಂದ್ರನ ವಜ್ರಾಯುಧದ ಪೆಟ್ಟಿನಿಂದ ಮೂರ್ಛೆ ಬಿದ್ದರೂ ದೇವತೆಗಳ ಮೂಲಕ ಅನೇಕ ವರಗಳನ್ನು ಪಡೆದ. ಇಂದ್ರನ ವಜ್ರಾಯುಧದಿಂದ ಪೆಟ್ಟು ಬಿದ್ದು ಒಂದು ಕೆನ್ನೆ ಗಾಯವಾಗಿ ಸೊಟ್ಟಗಾಯಿತು. ಈ ಕಾರಣದಿಂದ ಹನುಮಂತ ಎಂಬ ಹೆಸರು ಬಂದಿತು.
ಹನುಮಂತ, ಆಂಜನೇಯ, ವಾಯುಪುತ್ರ, ಹನುಮ, ಭಜರಂಗಿ, ಅಕ್ಷಾಂತಕ, ಕಪೀಶ ಎಂದು ಕರೆಯುವ ಹನುಮಂತನ ಜನ್ಮ ಆಗಿದ್ದು ಹಿಂದೂ ಚಂದ್ರಮಾನ ಮಾಸದ ಹುಣ್ಣಿಮೆಯ ದಿನ. ಸಾಮಾನ್ಯವಾಗಿ ಗ್ರೆಗೋರಿಯನ್ ಕ್ಯಾಲೆಂಡರ್‌ನಲ್ಲಿ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಹನುಮ ಜಯಂತಿ ಬರುತ್ತದೆ.
ಹನುಮ ಜಯಂತಿಯಂದು ಪ್ರಾರ್ಥನೆ, ಉಪವಾಸ, ಹನುಮಾನ್ ಚಾಲೀಸಾ (ಹನುಮನನ್ನು ಸ್ತುತಿಸುವ ಸ್ತೋತ್ರ) ಪಠಣ ಮತ್ತು ಹನುಮನಿಗೆ ಸಮರ್ಪಿತವಾದ ದೇವಾಲಯಗಳಿಗೆ ಭೇಟಿ ನೀಡುವ ಮೂಲಕ ಭಕ್ತರು ಆಚರಿಸುತ್ತಾರೆ.
ಸಂಜೀವಿನಿಯನ್ನೇ ತಂದ:
ರಾಮ-ರಾವಣರ ಮಧ್ಯೆ ಯುದ್ಧ ನಡೆಯುತ್ತಿದ್ದಾಗ ಮೇಘನಾಥನ ಜೊತೆಗಿನ ಕಾದಾಟದಲ್ಲಿ ಲಕ್ಷಣ ತೀವ್ರವಾಗಿ ಗಾಯಗೊಳ್ಳುತ್ತಾನೆ. ಮೂರ್ಛೆ ಹೋಗಿ ನೆಲದ ಮೇಲೆ ಉರುಳಿದ್ದ ಲಕ್ಷ್ಮಣನನ್ನು ಎತ್ತಿಕೊಂಡು ಬಂದ ಹನುಮಂತ ರಾಮನ ಮುಂದೆ ಮುಂದೆ ಇಡುತ್ತಾನೆ.
ಈ ಸಂದರ್ಭದಲ್ಲಿ ಅಲ್ಲಿದ್ದ ಸುಷೇನರು ಹಿಮಾಲಯದಲ್ಲಿ ಇರುವಂತಹ ಸಂಜೀವಿನಿ ಪರ್ವತದಲ್ಲಿ ಔಷಧಿ ಇದೆ. ಅದನ್ನು ತಂದರೆ ಲಕ್ಷ್ಮಣನನ್ನು ಗುಣಪಡಿಸಬಹುದು ಎಂದು ಹೇಳುತ್ತಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಹನುಮಂತ ಹಿಮಾಲಯಕ್ಕೆ ಬಂದು ಔಷಧಿ ಸಸಿಗಳನ್ನು ಹುಡುಕುತ್ತಾನೆ. ಆದರೆ ಔಷಧಿ ಸಸಿ ಸಿಗದ ಕಾರಣ ಕೊನೆಗೆ ಇಡೀ ಪರ್ವತವನ್ನೇ ಹೊತ್ತುಕೊಂಡು ಲಂಕೆಗೆ ಬರುತ್ತಾನೆ. ಸುಷೇನರು ಔಷಧಿ ಸಸ್ಯದಿಂದ ಲಕ್ಷಣನಿಗೆ ಔಷಧ ನೀಡಿದರು. ತಕ್ಷಣ ಲಕ್ಷಣನಿಗೆ ಪ್ರಜ್ಞೆ ಬರುತ್ತದೆ. ಜೀವ ಉಳಿಸುವ ಗಿಡಮೂಲಿಕೆಯನ್ನು ತರಲು ಒಬ್ಬಂಟಿಯಾಗಿ ಇಡೀ ಪರ್ವತವನ್ನು ಹೊತ್ತುಕೊಂಡು ತರುವ ಮೂಲಕ ತನ್ನ ಅಪಾರ ಶಕ್ತಿಯನ್ನು ಹನುಮಂತ ಪ್ರದರ್ಶಿಸಿದ್ದ.