– ರಾಜ್ಯಾದ್ಯಂತ ಹೋರಾಟಕ್ಕೆ ಬಿಜೆಪಿ ಕರೆ, ಜೆಡಿಎಸ್ ನಾಯಕರ ಸಾಥ್
– ಹೋರಾಟದಲ್ಲಿ 10,000ಕ್ಕೂ ಹೆಚ್ಚು ಜನ ಭಾಗಿ ಸಾಧ್ಯತೆ
– ಭದ್ರತೆಗೆ 400ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಮಂಡ್ಯ: ತಾಲೂಕಿನ ಕೆರಗೋಡು (Keragodu) ಗ್ರಾಮದಲ್ಲಿ ಹನುಮಧ್ವಜ ಸಂಘರ್ಷ (Hanuman Flag Clash) ತಾರಕಕ್ಕೇರಿದೆ. ಕೆರಗೋಡು ಗ್ರಾಮದಲ್ಲಿ ವಾತಾವರಣ ಬೂದಿ ಮುಚ್ಚಿದ ಕೆಂಡದಂತಾಗಿದ್ದು, ರಾಜ್ಯಾದ್ಯಂತ ಹೋರಾಟದ ಕಿಚ್ಚು ಹೆಚ್ಚಾಗಿದೆ.
ಹನುಮಧ್ವಜ ತೆರವು ವಿರೋಧಿಸಿ ರಾಜ್ಯಾದ್ಯಂತ ಹೋರಾಟಕ್ಕೆ ಬಿಜೆಪಿ (BJP) ಕರೆ ಕೊಟ್ಟಿದೆ. ಬಿಜೆಪಿ ಹೋರಾಟಕ್ಕೆ ಜೆಡಿಎಸ್ ನಾಯಕರೂ ಸಾಥ್ ನೀಡಿದ್ದಾರೆ. ಮಂಡ್ಯದಲ್ಲಿ ಇಂದು (ಜ.29) ರಾಜ್ಯ ಸರ್ಕಾರದ ವಿರುದ್ಧ ಬೃಹತ್ ಪಾದಯಾತ್ರೆ ಹಮ್ಮಿಕೊಂಡಿದ್ದು, ಕೆರಗೋಡು ಗ್ರಾಮದಿಂದ ಪಾದಯಾತ್ರೆ ಆರಂಭವಾಗಲಿದೆ.
ಗ್ರಾಮದ ಆಂಜನೇಯಸ್ವಾಮಿ ದೇವಾಲಯದಲ್ಲಿ (Hanuman Temple) ಪೂಜೆ ಸಲ್ಲಿಸಿ ಪಾಷದಯಾತ್ರೆಗೆ ಚಾಲನೆ ನೀಡಲಾಗುತ್ತದೆ. 15ಕಿ.ಮೀ ಸಾಗಲಿರುವ ಪಾದಯಾತ್ರೆ ಹುಲಿವಾನ, ಸಾತನೂರು, ಚಿಕ್ಕಮಂಡ್ಯ ಮಾರ್ಗವಾಗಿ ಮಂಡ್ಯದ ಶ್ರೀಕಾಳಿಕಾಂಭ ದೇವಾಲಯ ಪ್ರವೇಶಿಸಲಿದೆ. ಅಲ್ಲಿಂದ ಡಿಸಿ ಕಚೇರಿವರೆಗೆ ಪಾದಯಾತ್ರೆ ಮುಂದುವರಿಯಲಿದೆ. ಡಿ.ಸಿ ಕಚೇರಿಗೆ (Mandya DC Office) ಮುತ್ತಿಗೆ ಹಾಕಿ ಹನುಮ ಧ್ವಜ ಪುನರ್ ಸ್ಥಾಪನೆಗೆ ಆಗ್ರಹಿಸಲಾಗುತ್ತದೆ. ಇದನ್ನೂ ಓದಿ: ಶಾಲಾ ಬಸ್-ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ – ನಾಲ್ವರು ವಿದ್ಯಾರ್ಥಿಗಳ ದುರ್ಮರಣ
ಜೆಡಿಎಸ್-ಬಿಜೆಪಿ (JDS-BJP) ಸೇರಿ 10,000 ಹೆಚ್ಚು ಜನ ಭಾಗಿಯಾಗುವ ನಿರೀಕ್ಷೆಯಿದೆ. ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy), ಮಾಜಿ ಸಚಿವ ಸಿ.ಟಿ ರವಿ, ಶಾಸಕ ಜನಾರ್ದನ ರೆಡ್ಡಿ, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕರಾದ ಪ್ರೀತಂ ಗೌಡ, ಸುರೇಶ್ ಗೌಡ, ಡಿಸಿ ತಮ್ಮಣ್ಣ ಹಾಗೂ ನೂರಾರು ಹಿಂದೂ ಕಾರ್ಯಕರ್ತರು ಸಹ ಪಾದಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಸದಸ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಹಿಂದೂಗಳ ನಂಬಿಕೆ ಮೇಲೆ ಯಾಕಿಷ್ಟು ತಾತ್ಸಾರ? – ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಕ್ರೋಶ
400ಕ್ಕೂ ಹೆಚ್ಚು ಪೊಲೀಸರ ನಿಯೋಜನೆ: ಪಾದಯಾತ್ರೆ ವೇಳೆ ಅಹಿತಕರ ಘಟನೆ ನಡೆಯದಂತೆ ಖಾಕಿ ಕಟ್ಟೆಚ್ಚರ ವಹಿಸಿದೆ. ಕೆರಗೋಡು, ಪಾದಯಾತ್ರೆ ಮಾರ್ಗ, ಡಿಸಿ ಕಚೇರಿ ಬಳಿ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಮಂಡ್ಯ ಎಸ್‌ಪಿ ಎನ್.ಯತೀಶ್ ನೇತೃತ್ವದಲ್ಲಿ ಬಂದೋಬಸ್ತ್ ನಿಯೋಜಿಸಲಾಗಿದ್ದು, ಎಸ್‌ಪಿ, ಎಎಸ್‌ಪಿ, ಇನ್ಸ್ಪೆಕ್ಟರ್‌ಗಳು ಸೇರಿ 400ಕ್ಕೂ ಹೆಚ್ಚು ಪೊಲೀಸರ ವ್ಯವಸ್ಥೆ ಕಲ್ಪಿಸಲಾಗಿದೆ.