ಲಕ್ನೋ: ರಸ್ತೆಯಲ್ಲಿ ನಮಾಜ್ ಮಾಡುವುದನ್ನು ವಿರೋಧಿಸಿ ಹಿಂದೂ ಯುವ ವಾಹಿನಿ (ಎಚ್ವೈವಿ) ಕಾರ್ಯಕರ್ತರು ರಸ್ತೆಯಲ್ಲಿಯೇ ಹನುಮಾನ್ ಚಾಲಿಸಾ ಪಠಣ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಹತ್ರಾಸ್ ಜಿಲ್ಲೆಯ ಸಿಂಕರಾ ರಾವ್ ಪಟ್ಟಣದಲ್ಲಿರುವ ಹನುಮಾನ್ ದೇವಸ್ಥಾನದ ಬಳಿ ಮಂಗಳವಾರ ಎಚ್ವೈವಿಯ ನೂರಾರು ಕಾರ್ಯಕರ್ತರು ಸೇರಿದ್ದರು. ರಸ್ತೆಯಲ್ಲಿಯೇ ನಿಂತು ಒಂದು ಗಂಟೆಗೂ ಹೆಚ್ಚು ಕಾಲ ಹನುಮಾನ್ ಚಾಲಿಸಾ ಪಠಣ ಮಾಡಿದ್ದಾರೆ. ಇದರಿಂದಾಗಿ ಸಂಚಾರ ಅಸ್ತವ್ಯಸ್ತವಾಗಿತ್ತು.
Advertisement
Advertisement
ವಿಶೇಷ ಪ್ರತಿಭಟನೆ ಕುರಿತು ಪ್ರತಿಕ್ರಿಯೆ ನೀಡಿದ ಎಚ್ವೈವಿ ಕಾರ್ಯಕರ್ತರು, ಮುಸ್ಲಿಂ ಬಾಂಧವರು ಪ್ರತಿ ಶುಕ್ರವಾರ ರಸ್ತೆಯಲ್ಲಿ ನಮಾಜ್ ಮಾಡುತ್ತಾರೆ. ರಸ್ತೆಯಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸುವವರೆಗೂ ನಾವು ಪ್ರತಿ ಮಂಗಳವಾರ ರಸ್ತೆಯಲ್ಲಿ ಹನುಮಾನ್ ಚಾಲಿಸಾ ಪಠಣ ಮಾಡುತ್ತೇವೆ ಎಂದು ಹೇಳಿದ್ದಾರೆ.
Advertisement
ಎಚ್ವೈವಿ ಕಾರ್ಯಕರ್ತ ರವೀಂದ್ರ ಕುಮಾರ್ ಸಿಂಗ್ ಅವರು ಪ್ರತಿಕ್ರಿಯೆ ನೀಡಿ, ರಸ್ತೆಯಲ್ಲಿ ನಮಾಜ್ ಮಾಡುವುದರಿಂದ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ಹೀಗಾಗಿ ಅವರು ರಸ್ತೆಯಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಿದರೆ ನಾವು ಕೂಡ ಹನುಮಾನ್ ಚಾಲಿಸಾ ಪಠಣ ನಿಲ್ಲಿಸುತ್ತೇವೆ ಎಂದು ತಿಳಿಸಿದರು.
Advertisement
ಈ ಘಟನೆಯ ವಿಚಾರದಲ್ಲಿ ಪೊಲೀಸರು ಮೌನವಾಗಿ ಉಳಿದಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ನಡು ರಸ್ತೆಯಲ್ಲಿ ನಮಾಜ್ ಮಾಡುವುದರಿಂದ ತೊಂದರೆಯಾಗಿದೆ ಅಂತ ಯಾರೂ ದೂರು ನೀಡಿಲ್ಲ. ಆದ್ದರಿಂದ ಈ ವಿಚಾರದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ಈ ಹಿಂದೆ ಪಶ್ಚಿಮ ಬಂಗಾಳದಲ್ಲಿ ಪ್ರತೀ ಶುಕ್ರವಾರ ಮುಸ್ಲಿಮರು ಪ್ರಾರ್ಥನೆ (ನಮಾಜ್) ಸಲ್ಲಿಸುವ ವೇಳೆ ರೋಡ್ ಬಂದ್ ಆಗುತ್ತಿರುವುದನ್ನು ಖಂಡಿಸಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಹನುಮಾನ್ ಚಾಲಿಸಾ ಪಠಿಸಿ ಪ್ರತಿಭಟನೆ ನಡೆಸಿದ್ದರು.
ಪ್ರತಿ ಶುಕ್ರವಾರದ ನಮಾಜ್ ಸಮಯದಲ್ಲಿ ಮಸೀದಿ ಮುಂಭಾಗದ ರಸ್ತೆ ಸಂಚಾರ ನಿಷೇಧಿಸಲಾಗುತ್ತಿದೆ. ಇದರಿಂದ ವಾಹನ ಚಲಿಸುವವರಿಗೆ ತೊಂದರೆಯಾಗುತ್ತದೆ ಎಂದು ಹೇಳಿ ಬಿಜೆಪಿ ಯುವ ಮೋರ್ಚಾದವರು ಹೌರ ನಗರದ ಜಿ.ಟಿ ರಸ್ತೆಯಲ್ಲಿ ಕುಳಿತು ಹನುಮಾನ್ ಚಾಲಿಸಾ ಪಠಣ ಮಾಡುವ ಮೂಲಕ ಪ್ರತಿಭಟಿಸಿದ್ದರು.
ಈ ವಿಚಾರವಾಗಿ ಮಾತನಾಡಿದ್ದ ಹೌರ ಜಿಲ್ಲಾ ಯುವ ಮೋರ್ಚಾದ ಕಾರ್ಯಕರ್ತ ಒ.ಪಿ ಸಿಂಗ್ ಅವರು, ಮಮತಾ ಬ್ಯಾನರ್ಜಿ ಅವರ ಆಡಳಿತದಲ್ಲಿ ಗ್ರ್ಯಾಂಡ್ ಟ್ರಾಂಕ್ ರಸ್ತೆ ಮತ್ತು ಇತರ ಮುಖ್ಯ ರಸ್ತೆಗಳಲ್ಲಿ ಶುಕ್ರವಾರ ಸಂಚಾರ ನಿಷೇಧಿಸಲಾಗಿದೆ. ಇದರಿಂದ ಸರಿಯಾದ ಸಮಯಕ್ಕೆ ರೋಗಿಗಳು ಆಸ್ಪತ್ರೆಗೆ ಹೋಗಲು ಆಗದೇ ಮೃತಪಡುತ್ತಿದ್ದಾರೆ. ಉದ್ಯೋಗಸ್ಥರು ಶುಕ್ರವಾರ ಸರಿಯಾದ ಸಮಯಕ್ಕೆ ಕಚೇರಿಗೆ ಹೋಗಲು ಆಗುತ್ತಿಲ್ಲ. ನಮಾಜ್ ವೇಳೆ ರಸ್ತೆಗಳ ನಿಷೇಧವನ್ನು ಎಲ್ಲಿಯವರೆಗೆ ಮುಂದುವರಿಸುತ್ತಾರೋ ಅಲ್ಲಿಯವರೆಗೆ ನಾವೂ ಹನುಮಾನ್ ಮಂದಿರಗಳ ಮುಂದೆ ಎಲ್ಲಾ ರಸ್ತೆಗಳನ್ನು ತಡೆದು ಹನುಮಾನ್ ಚಾಲಿಸಾವನ್ನು ಪಠಣ ಮಾಡುತ್ತೇವೆ ಎಂದು ಹೇಳಿದ್ದರು.