ಹನುಮ ಜಯಂತಿಗೆ ಕ್ಷಣಗಣನೆ – ಸ್ವಾಗತಕ್ಕೆ ಸಿದ್ಧರಾದ ಮುಸ್ಲಿಂ ಬಾಂಧವರು

Public TV
2 Min Read
Anjanadri Hill

ಕೊಪ್ಪಳ: ಹನುಮ ಜನಿಸಿದ ನಾಡಿನಲ್ಲಿ ಹನುಮ ಜಯಂತಿಗೆ ಕ್ಷಣಗಣನೆ ಆರಂಭವಾಗಿದೆ. ವಿವಾದಕ್ಕೆ ಕಾರಣವಾಗಿದ್ದ ಹನುಮ ಜಯಂತಿ ಕಳೆದ ವರ್ಷ ಹಿಂದೂ-ಮುಸ್ಲಿಂ ಒಂದುಗೂಡಿ ಆಚರಿಸುವ ಮೂಲಕ ಭಾವೈಕೈತೆ ಮೆರೆದಿದ್ದರು. ಇದೀಗ ಆ ಕ್ಷಣ ಮತ್ತೆ ಹತ್ತಿರ ಬಂದಿದೆ. ಈ ಬಾರಿ ಜಿಲ್ಲಾಡಳಿತ ಒಂದು ವಿಶೇಷ ಕಾಳಜಿಯನ್ನು ತೋರುತ್ತಿದೆ.

ಹನುಮ ಜನಿಸಿದ ನಾಡು ಅಂದರೆ ಎಲ್ಲರಿಗೂ ನೆನಪಾಗುವುದೇ ಅಂಜನಾದ್ರಿಯ ಬೆಟ್ಟ. ಇದಕ್ಕೆ ಕಿಷ್ಕಿಂದ ಅಂತಾನೂ ಕರೆಯಲಾಗುತ್ತದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿಗೆ ಪ್ರತಿ ವರ್ಷ ಹನುಮ ಜಯಂತಿಯಂದು ಹನುಮ ಮಾಲಾಧಾರಿಗಳು ಇಲ್ಲಿಗೆ ಬರುತ್ತಾರೆ. ಬಂದು ಹನುಮ ಮಾಲೆ ವಿಸರ್ಜನೆ ಮಾಡುತ್ತಾರೆ. ಆದರೆ 2016ರಲ್ಲಿ ಕೆಲ ಕಿಡಿಗೇಡಿಗಳು ಹನುಮ ಜಯಂತಿ ವೇಳೆ ಕ್ಷುಲ್ಲಕ ಕಾರಣಕ್ಕೆ ಹಿಂದೂ-ಮುಸ್ಲಿಂ ನಡುವೆ ವಿವಾದ ಸೃಷ್ಟಿಸಿ ರಾದ್ದಾಂತ ಮಾಡಿದ್ದರು. ಆದಾದ ನಂತರ ಪೊಲಿಸ್ ಸರ್ಪಗಾವಲಿನಲ್ಲೇ ಹನುಮ ಜಯಂತಿ ನಡೆಯುತ್ತಿದೆ.

Anjandri Hill 3

ಕಳೆದ ವರ್ಷ ಇವೆಲ್ಲವನ್ನೂ ಮೀರಿ ಹಿಂದೂ-ಮುಸ್ಲಿಂ ಜನರು ಒಂದೂಗೂಡಿ ಹನುಮ ಮಾಲಾಧಾರಿಗಳಿಗೆ ಹೂ, ಹಣ್ಣು ನೀಡಿ ಸ್ವಾಗತ ಕೋರಿದ್ದರು. ಅಷ್ಟೇ ಅಲ್ಲದೆ ದಾರಿಯುದ್ದಕ್ಕೂ ಮಾಲೆ ಹಾಕಿದ ಪಾದಯಾತ್ರಿಗಳಿಗೆ ಮಜ್ಜಿಗೆಯನ್ನು ನೀಡಿ ಭಾವೈಕೈತೆ ಮೆರದಿದ್ದರು. ಅದರಂತೆಯೇ ಈ ಬಾರಿಯೂ ಡಿಸೆಂಬರ್ 9ರಂದು ನಡೆಯುವ ಹನುಮ ಜಯಂತಿಗೆ ಬರುವ ಮಾಲಾಧಾರಿಗಳಿಗೆ ಮುಸ್ಲಿಂ ಭಾಂಧವರು ಹೂ, ಹಣ್ಣು ನೀಡಿ ಸ್ವಾಗತ ಕೊರಲು ಸನ್ನದ್ದರಾಗಿದ್ದಾರೆ.

Anjandri Hill 2

ಈ ಬಾರಿ ಕೊಪ್ಪಳ ಜಿಲ್ಲಾಡಳಿತವೂ ಹನುಮ ಜಯಂತಿಗೆ ಒಂದು ವಿಶೇಷ ಕಾಳಜಿ ವಹಿಸಿದೆ. ಸಂಪೂರ್ಣ ಪ್ಲಾಸ್ಟಿಕ್ ನಿಷೇಧ ಮಾಡಿದ್ದು, ಅಲ್ಲಿಯ ವ್ಯಾಪಾರಿಗಳಿಗೆ ಬಟ್ಟೆಯಿಂದ ತಯಾರಿಸಿದ ಬ್ಯಾಗ್ ಗಳನ್ನು ಮಾರಾಟ ಮಾಡಲು ಹೇಳಿದೆ. ಕಳೆದ ಬಾರಿ ಟ್ರಾಫಿಕ್ ನಿಂದ ಕೊಂಚ ತೊಂದರೆಯಾಗಿತ್ತು. ಈ ಬಾರಿ ಯಾವುದೇ ರೀತಿಯ ತೊಂದರೆ ಆಗದಂತೆ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ. ಹನುಮ ಜಯಂತಿಗೆ ಪಕ್ಕದ ಗದಗ, ಬೆಳಗಾವಿ, ಬಳ್ಳಾರಿ, ರಾಯಚೂರು, ಬಿಜಾಪುರ, ಬಾಗಲಕೋಟೆ, ಕಲಬುರಗಿ, ಬೀದರ್ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಿಂದ ಮೂವತ್ತು ಸಾವಿರಕ್ಕೂ ಹೆಚ್ಚು ಹನುಮ ಮಾಲಾಧಾರಿಗಳು ಅಂಜನಾದ್ರಿಗೆ ಆಗಮಿಸುವ ನಿರೀಕ್ಷೆ ಇದೆ. ಈ ಕಾರಣಕ್ಕೆ ಕೊಪ್ಪಳ ಜಿಲ್ಲಾಡಳಿತವೂ ಸಕಲ ಸನ್ನದ್ಧವಾಗಿದೆ. ಯಾವುದೇ ಅಹಿತಕರ ಘಟನೆ ನೆಡೆಯದಂತೆ ಎಲ್ಲಾ ರೀತಿಯ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

vlcsnap 2019 12 07 15h01m01s201

ಒಟ್ಟಾರೆ ಬಾರೀ ವಿವಾದಕ್ಕೀಡಾಗಿದ್ದ ಜಿಲ್ಲೆಯ ಹನುಮ ಜಯಂತಿ ಇದೀಗ ಭಾವೈಕೈತೆಗೆ ಸಾಕ್ಷಿಯಾಗ್ತಿರೋದು ಖುಷಿಯ ವಿಚಾರ. ಕೇವಲ ಹನುಮ ಜಯಂತಿ ಅಷ್ಟೇ ಅಲ್ಲದೆ ಗಂಗಾವತಿಯಲ್ಲಿ ಜರಗುವ ಎಲ್ಲಾ ಹಬ್ಬಗಳನ್ನು ಹಿಂದೂ-ಮುಸ್ಲಿಂ ಸಮುದಾಯದವರು ಒಗ್ಗೂಡಿ ಮಾಡ್ತಿರೋದು ಜಿಲ್ಲೆಯ ಜನರ ಸಂತೋಷಕ್ಕೆ ಕಾರಣವಾಗಿದೆ.

Share This Article