Connect with us

Districts

ಕಪ್ಪು ಇರುವೆ ಕಚ್ಚಿ ಯುವಕ ದುರ್ಮರಣ!

Published

on

ಕಾರವಾರ: ಕಪ್ಪು ಇರುವೆ ಕಚ್ಚಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಅಂಗವಿಕಲ ಯುವಕನೊಬ್ಬ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬೈತಕೋಲ್‍ನಲ್ಲಿ ನೆಡೆದಿದೆ

ಶಿವು ಚಂದ್ರಸ್ವಾಮಿ (19) ಕಪ್ಪು ಇರುವೆ ಕಚ್ಚಿ ಮೃತಪಟ್ಟ ದುರ್ದೈವಿ. ಬೈತ್‍ಕೋಲ್‍ನ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ತಾಯಿ ಕಮಲ ಅವರ ಜೊತೆ ಗುಡಿಸಲಿನಲ್ಲಿ ಈತ ವಾಸವಾಗಿದ್ದನು. ಚಂದ್ರಸ್ವಾಮಿ ತಾಯಿಗೆ ಒಟ್ಟು ನಾಲ್ವರು ಮಕ್ಕಳಿದ್ದು, ಅದರಲ್ಲಿ ಅವಳಿ ಮಕ್ಕಳಾದ ಶಿವು ಹಾಗೂ ಸಂಗೀತಾ ಹುಟ್ಟುತ್ತಲೇ ಅಂಗವಿಕಲರಾಗಿ ಜನಿಸಿದ್ದರು.

ಇರುವೆ ಕಚ್ಚಿತ್ತು: ತುಳಸಿ ವಿವಾಹಕ್ಕಾಗಿ (ತುಳಸಿ ಪೂಜೆ) ಕಬ್ಬನ್ನು ತಂದು ಮನೆಯಲ್ಲಿ ಇಡಲಾಗಿತ್ತು. ಈ ವೇಳೆ ಅದಕ್ಕೆ ಕಪ್ಪು ಇರುವೆ ಮುತ್ತಿಕೊಂಡಿದ್ದವು. ತಾಯಿ ಕೆಲಸಕ್ಕೆ ತೆರಳಿದ್ದು, ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮಲಗಿದ್ದ ಶಿವುವನ್ನು ಸಂಪೂರ್ಣವಾಗಿ ಇರುವೆಗಳು ಆಕ್ರಮಿಸಿದ್ದವು. ಕೆಲವು ಸಮಯ ಇರುವೆ ಆತನನ್ನು ಕಚ್ಚಿದ್ದು, ನೋವು ತಾಳಲಾರದೆ ಶಿವು ಕಿರುಚಾಟ ಪ್ರಾರಂಭಿಸಿದ್ದ. ಅದನ್ನು ಕೇಳಿದ ಸ್ಥಳೀಯರು ಸ್ಥಳಕ್ಕಾಗಮಿಸಿದ್ದು, ಅಷ್ಟರಲ್ಲಿ ಶಿವು ಅಸ್ವಸ್ಥಗೊಂಡಿದ್ದ. ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಶಿವು ಅಸುನೀಗಿದ್ದಾನೆ.

ಶಿವು ಕುಟುಂಬದವರು ತೀರಾ ಬಡವರಾಗಿದ್ದರಿಂದ ಅವರಿಗೆ ಆತನ ಶವಸಂಸ್ಕಾರ ನಡೆಸಲೂ ಹಣವಿಲ್ಲದೇ ಕೊರಗುತ್ತಿದ್ದರು. ಬಳಿಕ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ನಗರಸಭಾ ಸದಸ್ಯೆ ಛಾಯಾ ಜಾವ್ಕಾರ್ ಹಾಗೂ ಸ್ಥಳೀಯ ನಿವಾಸಿ ವಿಲ್ಸನ್ ಫರ್ನಾಂಡಿಸ್ ಮಾಹಿತಿ ತಿಳಿದು ಆತನ ಅಂತಿಮ ಸಂಸ್ಕಾರವನ್ನು ಇಂದು ನೆರವೇರಿಸಿದ್ದಾರೆ. ಡಿಸಿಎಫ್ ಕೆ.ಗಣಪತಿ ಉಚಿತವಾಗಿ ಕಟ್ಟಿಗೆ ವ್ಯವಸ್ಥೆ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

Click to comment

Leave a Reply

Your email address will not be published. Required fields are marked *