ಮಂಡ್ಯ: ಕೂಲಿ ಮಾಡುವ ಮಹಿಳೆಯೊಬ್ಬರು ಕಳೆದುಕೊಂಡಿದ್ದ 50 ಸಾವಿರ ರೂ. ಹಣವನ್ನು ವಿಕಲಚೇತನ ಯುವಕರೊಬ್ಬರು ಅವರಿಗೆ ವಾಪಸ್ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ನಡೆದಿದೆ.
Advertisement
ಪಾಂಡವಪುರ ಪಟ್ಟಣದ ಶಾಂತಿನಗರ ನಿವಾಸಿ ನಾಗರತ್ನ ಎಂಬವರು ಸರ್ಕಾರಿ ಶಾಲೆಯಲ್ಲಿ ಅಡುಗೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ರು. ಅವರು ಮನೆ ಕಟ್ಟುವ ಸಲುವಾಗಿ ಸ್ವಸಹಾಯ ಸಂಘದಿಂದ 50 ಸಾವಿರ ರೂ. ಹಣ ಸಾಲ ತೆಗೆದುಕೊಂಡಿದ್ರು. ಆ 50 ಸಾವಿರ ರೂ. ಹಣವನ್ನು ಬ್ಯಾಂಕಿಗೆ ಕಟ್ಟಲು ಬೈಕ್‍ನಲ್ಲಿ ಹೋಗುವಾಗ ನೀಲನಹಳ್ಳಿಯ ಜಗದೀಶ್ ಅವರ ಮನೆ ಮುಂದೆ ಹಣದ ಕವರ್ ಬೀಳಿಸಿಕೊಂಡು ಹೋಗಿದ್ರು.
Advertisement
Advertisement
ಹಣ ಕಳೆದುಕೊಂಡ ನಾಗರತ್ನ ದುಃಖಿತರಾಗಿ ದಿಕ್ಕೇ ತೋಚದಂತೆ ಕಣ್ಣೀರು ಹಾಕುತ್ತ ಹುಡುಕಾಡುತ್ತಿದ್ರು. ಅವರು ಕಳೆದುಕೊಂಡಿದ್ದ ಹಣದ ಕವರ್, ವಿಕಲಚೇತನರಾಗಿದ್ದ ಜಗದೀಶ್ ಅವರ ಅತ್ತೆ ರತ್ನಮ್ಮ ಅವರಿಗೆ ಸಿಕ್ಕಿತ್ತು. ರತ್ನಮ್ಮ ಅವರು ಹಣದ ಕವರ್ ಜಗದೀಶ್‍ಗೆ ಕೊಟ್ಟಿದ್ದರು. ಇದೇ ವೇಳೆ ನಾಗರತ್ನ ಅವರು ಅಳುತ್ತಾ ಹಣ ಹುಡುಕುತ್ತ ಬರುವುದನ್ನು ಗಮನಿಸಿದ ಜಗದೀಶ್, ಹಣದ ಜೊತೆ ಇದ್ದ ಸ್ವಸಹಾಯ ಸಂಘ ಮತ್ತು ಬ್ಯಾಂಕ್‍ನ ದಾಖಲೆಗಳನ್ನು ಪರಿಶೀಲಿಸಿ ಹಣ ಕಳೆದುಕೊಂಡಿದ್ದ ನಾಗರತ್ನ ಅವರಿಗೆ ವಾಪಸ್ ಹಣ ತಲುಪಿಸಿದ್ದಾರೆ.
Advertisement
ಕಳೆದುಕೊಂಡಿದ್ದ ಹಣ ವಾಪಸ್ ತಂದುಕೊಟ್ಟು ಪ್ರಾಮಾಣಿಕತೆ ಮೆರೆದ ಜಗದೀಶ್ ಮತ್ತು ಅವರ ಅತ್ತೆ ರತ್ನಮ್ಮ ಅವರ ಗುಣವನ್ನು ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.