ಕಾರವಾರ: ಕಣ್ಣಿದ್ದು ಸಾಧನೆ ಮಾಡುವ ಜನರ ಮಧ್ಯೆ ಕಣ್ಣಿಲ್ಲದೇ ಶೈಕ್ಷಣಿಕವಾಗಿ ಹಾಗೂ ತಮ್ಮ ಪ್ರತಿಭೆಯ ಮೂಲಕ ರಾಜ್ಯಾದ್ಯಂತ ಹೆಸರುವಾಸಿ ಆಗಿರುವ ‘ವಿರೂಪ ಮಕ್ಕಳ’ ಚಿತ್ರದ ಪ್ರಮುಖ ಪಾತ್ರಧಾರಿ ತಾಲೂಕಿನ ಮುಂಡಳ್ಳಿಯ ಅಂಧ ವಿದ್ಯಾರ್ಥಿ ಶಾಯಲ್ ಅಂಥೋನಿ ಗೋಮ್ಸ್ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.70 ಫಲಿತಾಂಶ ಪಡೆದು ಪ್ರಥಮ ಶ್ರೇಣಿಯಲ್ಲಿ ಪಾಸಾಗಿ ತಾಲೂಕಿಗೆ ಹೆಮ್ಮೆ ತಂದಿದ್ದಾನೆ.
ಇಲ್ಲಿನ ಮುಂಡಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‍ಎಸ್‍ಎಲ್‍ಸಿ ವ್ಯಾಸಂಗ ಮಾಡುತ್ತಿದ್ದ ಶಾಯಲ್ ಗೋಮ್ಸ್ ಈ ಬಾರಿ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆಯಾಗಿದ್ದಾನೆ. ಕನ್ನಡ 76, ಇಂಗ್ಲಿಷ್ 65, ಹಿಂದಿ 83, ಸಮಾಜಶಾಸ್ತ್ರ 92, ರಾಜಕೀಯ ವಿಜ್ಞಾನ 65 ಹಾಗೂ ಸಮಾಜ ವಿಜ್ಞಾನ 44 ಅಂಕಗಳೊಂದಿಗೆ ಶೇ. 70 ಫಲಿತಾಂಶವನ್ನು ಪಡೆದಿದ್ದಾನೆ.
Advertisement
Advertisement
ಪ್ರಥಮ ಶ್ರೇಣಿಯಲ್ಲಿ ಪಾಸಾಗಿದ್ದು ಶಾಯಲ್ ಗೋಮ್ಸ್‍ನ ಸಾಧನೆಯನ್ನು ಕಂಡು ಪಾಲಕರು ಸಂತಸ ವ್ಯಕ್ತಪಡಿಸಿದರು. ಏಪ್ರಿಲ್ 12ರಂದು ರಾಜ್ಯಾದ್ಯಂತ ಬಿಡುಗಡೆಯಾದ ವಿರೂಪ ಮಕ್ಕಳ ಚಿತ್ರದಲ್ಲಿ ವಿನ್ಸೆಂಟ್ ಅಂಧ ಬಾಲಕನ ಪಾತ್ರದಲ್ಲಿ ಅಭಿನಯಿಸಿ ಸೈ ಎನ್ನಿಸಿಕೊಂಡಿದ್ದು, ಈಗ ತನ್ನ ಶೈಕ್ಷಣಿಕ ವಿದ್ಯಾಭ್ಯಾಸದಲ್ಲಿಯೂ ಸಹ ಸಾಧನೆ ಮಾಡಿದ್ದು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾನೆ.
Advertisement
Advertisement
ಶಾಯಲ್ ಪರೀಕ್ಷೆಯ ಎಲ್ಲಾ ತಯಾರಿಯನ್ನು ನಡೆಸಿ ಉತ್ತಮವಾಗಿ ಓದಿಕೊಂಡಿದ್ದು ಪರೀಕ್ಷೆಯನ್ನು 9ನೇ ತರಗತಿ ವಿದ್ಯಾರ್ಥಿ ದಯಾನಂದ್ ಬರೆದಿದ್ದಾನೆ. ಈತನ ಸಾಧನೆಗೆ ಸಹಕರಿಸಿದ ವಿದ್ಯಾರ್ಥಿ ದಯಾನಂದ್‍ನಿಗೆ ಶಾಯಲ್ ಗೋಮ್ಸ್ ಧನ್ಯವಾದ ತಿಳಿಸಿದ್ದಾನೆ. ಇದೇ ಸಂದರ್ಭದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣವಾದ ಹಿನ್ನೆಲೆ ಶಾಯಲ್ ಪಾಲಕರು ಆತನಿಗೆ ಸಿಹಿ ತಿನ್ನಿಸಿ ಸಂತಸ ಹಂಚಿಕೊಂಡರು.
ವಿದ್ಯಾರ್ಥಿ ಶಾಯಲ್ `ಪರೀಕ್ಷೆಯ ತಯಾರಿಗೆ ನನ್ನ ತಾಯಿ ನನಗೆ ಸಹಾಯ ಮಾಡಿದ್ದು ಶಾಲಾ ಮುಖ್ಯೋಪಾಧ್ಯಾಪಕರು, ಶಿಕ್ಷಕರು ಹಾಗೂ ಸ್ನೇಹಿತರು ನನ್ನ ಕಲಿಕೆಗೆ ಪ್ರೋತ್ಸಾಹ ನೀಡಿದ್ದಾರೆ. ಪರೀಕ್ಷೆಯಲ್ಲಿ ಪಡೆದ ಅಂಕ ನನಗೆ ತೃಪ್ತಿ ಸಿಕ್ಕಿದ್ದು, ಮುಂದೆ ಪಿಯುಸಿಯಲ್ಲಿ ಕಲಾ ವಿಭಾಗದಲ್ಲಿ ವ್ಯಾಸಂಗ ಮಾಡುತ್ತೇನೆ. ಪರೀಕ್ಷೆಯ ನಡುವೆಯೇ ವಿರೂಪ ಚಿತ್ರದಲ್ಲಿ ಪಾತ್ರ ನಿರ್ವಹಿಸಿ ಜನರಿಂದ ಮೆಚ್ಚುಗೆ, ಪ್ರೀತಿ ಸಿಕ್ಕಿದ್ದು ಇನ್ನಷ್ಟು ಸಂತಸ ತಂದಿದೆ” ಎಂದು ಪವ್ಲಿಕ್ ಟಿವಿ ಜೊತೆ ಸಂತಸ ಹಂಚಿಕೊಂಡನು.
ನನ್ನ ಮಗ ಆತನ ಸ್ನೇಹಿತರ ಸಹಾಯದಿಂದ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಸಾಧ್ಯವಾಯಿತು. ಮನೆಯ ಪಕ್ಕದ ನೆರೆಹೊರೆಯವರು ಸಹ ಕಷ್ಟದ ವಿಷಯದಲ್ಲಿ ಟ್ಯೂಶನ್ ಮಾಡಿದ್ದಾರೆ. ಈ ಮಧ್ಯೆ ಸಿನಿಮಾದಲ್ಲಿ ನಟಿಸಿರುವುದರ ಜೊತೆಗೆ ಪರೀಕ್ಷೆಯ ತಯಾರಿಯಲ್ಲಿಯೂ ನಿರತನಾಗಿ ಉತ್ತಮ ಅಂಕ ಪಡೆದಿರುವದು ಸಂತೋಷವಾಗಿದೆ ಎಂದು ಆತನ ತಾಯಿ ಲೀಲಾ ಗೋಮ್ಸ್ ಸಂತಸಪಟ್ಟರು.