ಶಿವಮೊಗ್ಗ : ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರು ಈ ದೇಶದಲ್ಲಿ ಡೆಮಾಕ್ರಸಿ ಅಳಿಯುತ್ತಿದೆ. ಧರ್ಮಾಕ್ರಸಿ ಬರುತ್ತಿದೆ ಎಂಬ ಹೇಳಿಕೆ ನೀಡಿದ್ದರು. ಅವರ ಹೇಳಿಕೆಯಲ್ಲಿ ಯಾವುದೇ ತಪ್ಪು ಇಲ್ಲ. ಅವರ ಹೇಳಿಕೆ ಸರಿಯಾಗಿಯೇ ಇದೆ ಎಂದು ಡಿಎಸ್‍ಎಸ್ ಜಿಲ್ಲಾಧ್ಯಕ್ಷ ಗುರುಮೂರ್ತಿ ತಿಳಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ವೇಳೆ ಮಾತನಾಡಿದ ಅವರು, ಈ ದೇಶ, ರಾಜ್ಯದಲ್ಲಿ ದಲಿತರ ಪರ ಧ್ವನಿ ಎತ್ತುವವರ, ಧ್ವನಿಯನ್ನು ಅಡಗಿಸುವ ಕೆಲಸವನ್ನು ಶೇ.3 ರಷ್ಟಿರುವ ಮನುವಾದಿ ಜನ ಮಾಡುತ್ತಿದ್ದಾರೆ. ಧ್ವನಿ ಅಡಗಿಸುವ ಕೆಲಸ ಹೀಗೆ ಮುಂದುವರಿದರೆ ಭಗವದ್ಗೀತೆ ಕಾಲಕ್ಕೆ ಹೋಗಬೇಕಾಗುತ್ತದೆ. ಹೀಗಾಗಿ ಸಂವಿಧಾನ ಕಾಪಾಡಬೇಕಿದೆ. ಸಂವಿಧಾನ ಕಾಪಾಡುವ ಮೂಲಕ ತುಂಬ ಎಚ್ಚರಿಕೆ ಹೆಜ್ಜೆ ಇಡಬೇಕಾಗಿದೆ. ಇಲ್ಲದಿದ್ದರೆ ತುಂಬ ಆತಂಕದ ದಿನವನ್ನು ಎದುರಿಸಬೇಕಾಗುತ್ತದೆ ಎಂದರು. ಇದನ್ನೂ ಓದಿ: ಹೈದರಾಬಾದ್‍ಗೆ ಹಾರಿದ ಅರ್ವಿಯಾ ಜೋಡಿ
ಹಂಸಲೇಖ ಅವರ ಹೇಳಿಕೆಯನ್ನು ದಲಿತ ಸಂಘರ್ಷ ಸಮಿತಿ ಬೆಂಬಲಿಸುತ್ತದೆ. ಮತ್ತು ಹಂಸಲೇಖ ಅವರ ಪರವಾಗಿ ಕೆಲಸ ಮಾಡುತ್ತದೆ. ಹೀಗಾಗಿ ಹಂಸಲೇಖ ಅವರು ಯಾವುದೇ ಕಾರಣಕ್ಕೂ ದೃತಿಗೆಡುವಂತಹ, ಭಯಬೀಳುವಂತಹ ಅವಶ್ಯಕತೆ ಇಲ್ಲ. ಇನ್ನು ಹಂಸಲೇಖ ಅವರನ್ನು ಬೆದರಿಸಿ, ಒತ್ತಡ ಹಾಕಿ ಕ್ಷಮೆ ಕೇಳಿಸಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ದಲಿತರು ಕೋಳಿ ಕೊಟ್ಟರೆ ತಿನ್ನುತ್ತಾರಾ?: ಕ್ಷಮೆ ಕೇಳಿದ ಹಂಸಲೇಖ
ಮೈಸೂರು ಸಂಸದ ಪ್ರತಾಪ್ ಸಿಂಹ ಬಿಟ್ ಕಾಯಿನ್ ವಿಚಾರ ಮಾತನಾಡಬೇಕಾದರೆ ಪ್ರಿಯಾಂಕ್ ಖರ್ಗೆ ಹೆಣ್ಣೋ, ಗಂಡೋ ಅಂತಾ ಕೇಳಿದ್ದಾರೆ. ದಲಿತ ಅನ್ನುವ ಕಾರಣಕ್ಕೆ ಪ್ರಿಯಾಂಕ್ ಖರ್ಗೆ ಬಗ್ಗೆ ಹೆಣ್ಣೋ, ಗಂಡೋ ಅಂತಾ ಪ್ರಶ್ನೆ ಮಾಡಿದ್ದಾರೆ. ಪ್ರತಾಪ್ ಸಿಂಹನ ಹೆಸರಿನಲ್ಲಿ ಸಿಂಹ ಅಂತಿದೆ. ಹಾಗಾದ್ರೆ ಪ್ರತಾಪ್ ಸಿಂಹ ಮನುಷ್ಯನೋ, ಮೃಗನೋ ಅಂತಾ ಪ್ರಶ್ನೆ ಮಾಡಬೇಕಾಗಿದೆ ಎಂದು ಟಾಂಗ್ ನೀಡಿದರು.