– ಜನವರಿ 10, 11ರಂದು ಹಂಪಿ ಉತ್ಸವ
– ಮಂಗಳಮುಖಿ & ಅಂಗವಿಕಲರಿಂದಲೂ ಕಾರ್ಯಕ್ರಮ
ಬಳ್ಳಾರಿ: ಹಲವು ಅಡೆತಡೆಗಳ ಮಧ್ಯೆ ಕಳೆದ ವರ್ಷ ಮುಂದೂಡಿದ್ದ ಹಂಪಿ ಉತ್ಸವವನ್ನು ಇದೀಗ ಜನವರಿ 10 ಮತ್ತು 11ರಂದು ಮಾಡಲು ನಿರ್ಧಾರ ಮಾಡಲಾಗಿದ್ದು, ಉತ್ಸವಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆಯನ್ನು ಮಾಡಿಕೊಂಡಿದೆ.
ಈ ಬಾರಿಯ ಹಂಪಿ ಉತ್ಸವಕ್ಕೆ ಬರುವ ಪ್ರವಾಸಿಗರನ್ನು ಮತ್ತು ಪ್ರೇಕ್ಷಕರನ್ನು ರಂಜಿಸಲು ಸ್ಥಳೀಯ ಕಲಾವಿದರು ಸೇರಿದಂತೆ ಸ್ಯಾಂಡಲ್‍ವುಡ್ ಮತ್ತು ಬಾಲಿವುಡ್‍ನ ಹತ್ತು-ಹಲವು ಗಾಯಕರು ಉತ್ಸವದಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ಇದನ್ನೂ ಓದಿ: ಹಂಪಿ ಉತ್ಸವಕ್ಕೆ ಕ್ಷಣ ಗಣನೆ: ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಿದ ಲಕ್ಷ್ಮಣ ಸವದಿ
ಪ್ರತಿ ವರ್ಷದಂತೆ ಈ ಬಾರಿಯೂ ಹಂಪಿ ಉತ್ಸವದಲ್ಲಿ ಹೊಸ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ರಾಜ್ಯದಲ್ಲಿ ಒಂದು ಕಡೆ ನೆರೆ ಮತ್ತೊಂದು ಕಡೆ ಬರ ಹಿನ್ನೆಲೆಯಲ್ಲಿ ಮೂರು ದಿನಗಳ ಉತ್ಸವವನ್ನು ಎರಡು ದಿನ ಮಾತ್ರ ಮಾಡಲಾಗುತ್ತಿದೆ. ಈ ಬಾರಿ ವಿಶೇಷ ಎನ್ನುವಂತೆ ಮುಂಗಾರು ಮಳೆ ಖ್ಯಾತಿಯ ಸಂಗೀತಗಾರ ಮನೋಮೂರ್ತಿ, ಮುಂಬೈನ ಖ್ಯಾತ ಹಿನ್ನಲೆ ಗಾಯಕಿ ನೀತಿ ಮೋಹನ್ ತಂಡ ಹಾಗೂ ಬೆಂಗಳೂರಿನ ಸುಪ್ರಿಯ ಲೋಹಿತ್ ತಂಡದಿಂದ ಹಾಡುಗಾರಿಕೆ ಇದೆ. ಇದರ ಜೊತೆಗೆ ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರ ಹಾಸ್ಯದ ಹೊನಲು, ಚಿತ್ರಸಂತೆ, ಫಿಶ್ ಅಕ್ವೇರಿಯಾ ಟೂನಲ್, ಮತ್ಸ್ಯಮೇಳ, ಹಂಪಿ ಬೈಸ್ಕೈ ಕಾರ್ಯಕ್ರಮಗಳು ಮನೋರಂಜನೆ ನೀಡಲಿದೆ.
ಉತ್ಸವಕ್ಕಾಗಿ ಒಟ್ಟು 4 ವೇದಿಕೆಗಳನ್ನು ನಿರ್ಮಿಸಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಹಂಪಿ ಉತ್ಸವವನ್ನು ಉದ್ಘಾಟಿಸಲಿದ್ದಾರೆ. 120ಕ್ಕೂ ಹೆಚ್ಚು ಮಂದಿ ಕಲಾವಿದರು ವಿವಿಧ ವೇದಿಕೆಗಳಲ್ಲಿ ತಮ್ಮ ಕಾರ್ಯಕ್ರಮಗಳು ನೀಡಲಿದ್ದಾರೆ. ಈ ಬಾರಿಯ ಹಂಪಿ ಉತ್ಸವದಲ್ಲಿ ಮಂಗಳಮುಖಿಯರಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದ್ದು, ಅವರು ಒಂದು ನಾಟಕ, ಜೋಗತಿ ಕುಣಿತ ಸೇರಿದಂತೆ ಹಿಂದೂಸ್ತಾನಿ ಗಾಯನ ಕಾರ್ಯಕ್ರಮ ನೀಡಲಿದ್ದಾರೆ.
ಅಷ್ಟೇ ಅಲ್ಲದೆ ವಿಕಲಚೇತನರಿಗೆ ಸಮೂಹ ನೃತ್ಯ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ. ಇನ್ನೂ 7 ದಿನಗಳ ಕಾಲ ವಿಜಯನಗರ ವೈಭವ ಕಥಾಹಂಗಮ ಧ್ವನಿ ಮತ್ತು ಬೆಳಕು ಪ್ರದರ್ಶನಗೊಳ್ಳಲಿದೆ. ಇದರ ಜೊತೆಗೆ ಹೆಲಿಕಾಪ್ಟರ್‌ನಲ್ಲಿ ಹಂಪಿಯನ್ನು ನೋಡುವ ಹಂಪಿ ಬೈಸ್ಕೈ ವಿಶೇಷವಾಗಿದೆ. ಹಾಗೆಯೇ ಭದ್ರತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.
ಹಂಪಿ ಉತ್ಸವವನ್ನು ನೋಡಲು ದೇಶ-ವಿದೇಶಗಳಿಂದ ಪ್ರವಾಸಿಗರು ಬರುವ ನಿರೀಕ್ಷೆಯಿದೆ. ಆದರೆ ಪದೇ ಪದೇ ಉತ್ಸವದ ದಿನಾಂಕ ಬದಲಾಣೆಯಾಗುತ್ತಿರುವ ಹಿನ್ನಲೆ ಈ ಬಾರಿ ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಬಹುದು ಎನ್ನಲಾಗುತ್ತಿದೆ.