Connect with us

Bellary

ಹಂಪಿ ಉತ್ಸವವನ್ನು ಜನಪರ ಉತ್ಸವವನ್ನಾಗಿಸಿ : ಅಧಿಕಾರಿಗಳಿಗೆ ಡಿಸಿ ನಕುಲ್ ಸೂಚನೆ

Published

on

ಬಳ್ಳಾರಿ: ಜ.10 ಮತ್ತು 11ರಂದು ನಡೆಯಲಿರುವ ಹಂಪಿ ಉತ್ಸವದ ಸಿದ್ಧತೆಗೆ ರಚಿಸಲಾಗಿರುವ ವಿವಿಧ ಸಮಿತಿಗಳ ಕಾರ್ಯಗಳನ್ನು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಪರಿಶೀಲಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಹಂಪಿ ಉತ್ಸವಕ್ಕೆ ಸಂಬಂಧಿಸಿದ ಸಿದ್ಧತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹಂಪಿ ಉತ್ಸವ ಜನರ ಉತ್ಸವವನ್ನಾಗಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕು. ತಮಗೆ ವಹಿಸಿದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮುಖ್ಯಮಂತ್ರಿಗಳು ಉತ್ಸವದ ಉದ್ಘಾಟನೆ ಮಾಡಲಿದ್ದು, ಡಿಸಿಎಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಸಿ.ಟಿ.ರವಿ ಸೇರಿದಂತೆ ಅನೇಕ ಸಚಿವರು ಹಾಗೂ ಶಾಸಕರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಛಾಯಾಚಿತ್ರ, ಕ್ರೀಡೆ, ಮಳಿಗೆಗಳು, ಚಿತ್ರಕಲೆ, ಶಿಲ್ಪಕಲೆ ಸೇರಿದಂತೆ ವಿವಿಧ ರೀತಿಯ ಸ್ಪರ್ಧಾ ಕಾರ್ಯಕ್ರಮಗಳ ಅರ್ಜಿ ಆಹ್ವಾನಿಸಿ, ಕೂಡಲೇ ಪತ್ರಿಕಾ ಪ್ರಕಟಣೆ ನೀಡುವುದರ ಮೂಲಕ ಪ್ರಚುರಪಡಿಸಿ. ತೀರ್ಪುಗಾರರಾಗಿ ಭಾಗವಹಿಸುವವರ ಸಂಬಂಧಿಗಳು ಅದೇ ಸ್ಪರ್ಧೆಯಲ್ಲಿ ಭಾಗವಹಿಸಿದರೆ ಅಂತಹ ಸ್ಪರ್ಧಿಗಳು ಆ ತೀರ್ಪುಗಾರ ಸ್ಥಾನದಿಂದ ಹಿಂದೆ ಸರಿಯಬೇಕು. ಅಲ್ಲದೆ ಉತ್ಸವ ಮುಗಿದ ನಂತರ ನಾವು ಉತ್ಸವದಲ್ಲಿ ಭಾಗವಹಿಸಿದ್ದೆವು ಹಣ ನೀಡಿ ಎಂದು ಜಿಲ್ಲಾಧಿಕಾರಿಗಳ ಕಚೇರಿಯತ್ತ ಅಲೆದಾಡುವಂತೆ ಮಾಡಬೇಡಿ. ಯಾವ್ಯಾವ ಸಮಿತಿಗಳಿಗೆ ಎಷ್ಟು ಹಣ ಬೇಕೋ ಅದರ ಅಂದಾಜು ವೆಚ್ಚ ಸಲ್ಲಿಸಿ ಎಂದರು.

ನಾಲ್ಕು ವೇದಿಕೆಗಳ ನಿರ್ಮಾಣ
ಗಾಯತ್ರಿ ಪೀಠದ ಹತ್ತಿರ ನಿರ್ಮಿಸಲಾಗುವ ಶ್ರೀ ಕೃಷ್ಣದೇವರಾಯ ವೇದಿಕೆ, ಎದುರು ಬಸವಣ್ಣ, ವಿರೂಪಾಕ್ಷೇಶ್ವರ ದೇವಸ್ಥಾನ ವೇದಿಕೆ, ಕಡಲೆಕಾಳು ಗಣಪತಿ ಎಂಬ ನಾಲ್ಕು ವೇದಿಕೆಗಳನ್ನು ಸ್ಥಾಪಿಸಲಾಗಿದ್ದು, ಈ ನಾಲ್ಕು ವೇದಿಕೆಗಳಿಗೆ ಉಸ್ತುವಾರಿ ವಹಿಸಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ನೋಡಲ್ ಅಧಿಕಾರಿಗಳು ಟ್ರೋಫಿ, ಪ್ರಮಾಣ ಪತ್ರಗಳು ಎಷ್ಟು ಬೇಕು ಎಂಬುದರ ಅಂಕಿ-ಸಂಖ್ಯೆಯ ವಿವರ ಒದಗಿಸಬೇಕು ಎಂದು ಇದೇ ಸಂದರ್ಭದಲ್ಲಿ ಸೂಚಿಸಿದರು.

ನಿಗದಿತ ವೇಳೆಗೆ ನಿಗದಿಪಡಿಸಿದ ಕಾರ್ಯಕ್ರಮಗಳನ್ನು ಅಚ್ಟುಕಟ್ಟಾಗಿ ನಡೆಸಿಕೊಳ್ಳಬೇಕು. ಕಾಣೆಯಾದ ಮಕ್ಕಳ ಸಹಾಯಕ್ಕಾಗಿ ಕಂಟ್ರೋಲ್ ರೂಂ ವ್ಯವಸ್ಥೆ ಮಾಡಬೇಕು. ವೇದಿಕೆಗಳ ಉಸ್ತುವಾರಿಗಳಿಗೆ ವಹಿಸಲಾದ ವಿವಿಧ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಎಂದು ಸೂಚಿಸಿದರು.

ಅಲ್ಲದೆ ತುಂಗಾರತಿ ಮಹೋತ್ಸವಕ್ಕೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳಿ, ವಸಂತ ವೈಭವ ಹೊಸಪೇಟೆಯ ವಡಕರಾಯ ದೇವಸ್ಥಾನದಿಂದ ಆರಂಭವಾಗಿ ಕ್ರೀಡಾಂಗಣದವರೆಗೆ ಮಹೋತ್ಸವ ನಡೆಯಲಿದ್ದು, ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಚಾಲನೆ ನೀಡಲಿದ್ದಾರೆ. ನೂರಾರು ಕಲಾತಂಡಗಳು ಹಾಗೂ ಸಾವಿರಾರು ಜನರು ಈ ವೈಭವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.

ಧ್ವನಿ ಬೆಳಕಿನಲ್ಲಿ ಕರ್ನಾಟಕ ವೈಭವ
ಲೋಟಸ್ ಮಹಲ್ ಹತ್ತಿರದ ಆನೆ ಸಾಲುಮಂಟಪದ ಬಳಿ ಈ ಬಾರಿ ಧ್ವನಿ ಮತ್ತು ಬೆಳಕಿನಲ್ಲಿ ಕರ್ನಾಟಕ ವೈಭವ ಅನಾವರಣಗೊಳ್ಳಲಿದೆ. ಇದಕ್ಕೆ ಬೇಕಾದ ಖುರ್ಚಿಗಳ ವ್ಯವಸ್ಥೆ ಸೇರಿ ಇನ್ನೀತರ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಡಿಸಿ ನಕುಲ್ ಅವರು ಸೂಚಿಸಿದರು.

ಶಿಲಾಶಿಲ್ಪ ಶಿಬಿರ, ಚಿತ್ರಕಲಾ ಶಿಬಿರ, ಆಗಸದಲ್ಲಿ ಹಂಪಿ, ಮತ್ಸ್ಯ ಮೇಳ, ಛಾಯಾಚಿತ್ರ ಸ್ಪರ್ಧೆ, ಸಾಹಸ ಕ್ರೀಡೆಗಳು, ವಿಚಾರ ಸಂಕಿರಣ, ಕ್ರೀಡೆಗಳು, ಆಹಾರ ಮೇಳ, ಫಲಪುಷ್ಪ ಪ್ರದರ್ಶನ, ಪುಸ್ತಕ ಪ್ರದರ್ಶನ, ರಂಗೋಲಿ, ಮೆಹಂದಿ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿದ್ದು, ಅವುಗಳ ಜವಾಬ್ದಾರಿ ಹೊತ್ತ ಎಲ್ಲ ಅಧಿಕಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ತಿಳಿಸಿದ್ದಾರೆ.

150 ಮಳಿಗೆಗಳ ನಿರ್ಮಾಣ
ಬಸವಣ್ಣ ಮಂಟಪದ ಹತ್ತಿರವಿರುವ ವಿಶಾಲ ಮೈದಾನದಲ್ಲಿ ಈ ಬಾರಿ 150 ಮಳಿಗೆಗಳನ್ನು ಹಾಕಲಾಗುತ್ತಿದ್ದು, ಅದರಲ್ಲಿ 50 ಮಳಿಗೆಗಳನ್ನು ಪುಸ್ತಕ ಪ್ರಕಾಶನದವರಿಗೆ ಕಾಯ್ದಿರಿಸಲಾಗಿದೆ. ಉಳಿದ ಮಳಿಗೆಗಳಿಗೆ ತಲಾ 2 ಸಾವಿರದಂತೆ ಶುಲ್ಕ ವಸೂಲಿ ಮಾಡಲಾಗುತ್ತದೆ ಎಂದು ಡಿಸಿ ನಕುಲ್ ತಿಳಿಸಿದರು.

ಈ ವೇದಿಕೆ ಎದುರುಗಡೆಯೇ ಕಳೆದ ಬಾರಿಯಂತೆ ಈ ಬಾರಿಯೂ ಮರಳಿನಲ್ಲಿ ವಿಜಯನಗರ ಸಾಮ್ರಾಜ್ಯದ ಶಿಲ್ಪಕಲೆಗಳ ವೈಭವ ಅನಾವರಣವಾಗಲಿದೆ. ಇದಕ್ಕಾಗಿ ಒಡಿಶಾದಿಂದ ಖ್ಯಾತ ಮರಳುತಜ್ಞರು ಜ.3ರಿಂದು ಆಗಮಿಸಲಿದ್ದಾರೆ. ಅಲ್ಲದೆ, ಹೊಸಪೇಟೆ, ಕಮಲಾಪುರದಿಂದ ಹಂಪಿಯ ಕಡೆ ನಿರಂತರ ಬಸ್‍ಗಳ ಸಂಚಾರದ ವ್ಯವಸ್ಥೆ, ಕಂಟ್ರೋಲ್‍ರೂಮ್ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.

Click to comment

Leave a Reply

Your email address will not be published. Required fields are marked *