ಬಳ್ಳಾರಿ: ರಾಜ್ಯದೆಲ್ಲೆಡೆ ಬರಗಾಲ ಪರಿಸ್ಥಿತಿಯಿದೆ. ಆದ್ರೆ ಅದ್ಧೂರಿಯಾಗಿ ಮಾಡೋ ಮೈಸೂರು ದಸರಾಗೆ ಇಲ್ಲದ ಬರದ ಭೀತಿ ಬಳ್ಳಾರಿ ಹಂಪಿ ಉತ್ಸವಕ್ಕೆ ತಟ್ಟಿದೆ. ಹೀಗಾಗಿ ಹಂಪಿ ಉತ್ಸವ ರದ್ದುಗೊಳಿಸಿರುವ ಸರ್ಕಾರದ ವಿರುದ್ಧ ಸ್ಥಳೀಯರು ಇದೀಗ ಸಿಡಿದೆದ್ದಿದ್ದಾರೆ.
ಸರ್ಕಾರದಿಂದ ಹಠಕ್ಕೆ ಬಿದ್ದು ಟಿಪ್ಪು ಜಯಂತಿಯ ಆಚರಣೆ ಮತ್ತೊಂದೆಡೆ ಸಂಭ್ರಮ ಮೈಸೂರು ದಸರಾ ಆಚರಣೆ. ಆದರೆ ಈ ಬಾರಿ ನಮ್ಮ ನಾಡಿನ ಪರಂಪರೆ ಸಂಸ್ಕೃತಿಯ ಪ್ರತೀಕ ಹಂಪಿ ಉತ್ಸವ ನೋಡುವ ಸೌಭಾಗ್ಯವಿಲ್ಲ. ಹೌದು ವಿಶ್ವವಿಖ್ಯಾತ ಹಂಪಿ ಉತ್ಸವವನ್ನ ಈ ಬಾರಿ ರದ್ದುಗೊಳಿಸಲಾಗಿದೆ. ರಾಜ್ಯ ಸೇರಿದಂತೆ ಬಳ್ಳಾರಿ ಜಿಲ್ಲೆಯಲ್ಲಿ ಭೀಕರ ಬರವಿದೆಯೆಂದು ಹಂಪಿ ಉತ್ಸವಕ್ಕೆ ಈ ಬಾರಿ ಬ್ರೇಕ್ ಹಾಕಲಾಗಿದೆ ಅಂತ ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಇದನ್ನು ಓದಿ: ಈ ಬಾರಿ ಹಂಪಿ ಉತ್ಸವ ಕೈಬಿಡಲು ಸರ್ಕಾರ ನಿರ್ಧಾರ: ಡಿ.ಕೆ.ಶಿವಕುಮಾರ್
ಹಂಪಿ ಉತ್ಸವಕ್ಕಾಗಿ ಸರ್ಕಾರ ಪ್ರತಿ ವರ್ಷ ಬಜೆಟ್‍ನಲ್ಲಿ ಪ್ರತ್ಯೇಕವಾಗಿ ಅನುದಾನ ಮೀಸಲಿಡುತ್ತಿತ್ತು. ಆದ್ರೆ ಈ ಬಾರಿಯ ಬಜೆಟ್‍ನಲ್ಲಿ ಪ್ರತ್ಯೇಕ ಅನುದಾನವಿರಲಿ ಉತ್ಸವದ ಬಗ್ಗೆ ಪ್ರಸ್ತಾಪವೇ ಆಗಿಲ್ಲ. ಇದೀಗ ಬರದ ನೆಪವೊಡ್ಡಿ ಹಂಪಿ ಉತ್ಸವ ರದ್ದುಗೊಳಿಸಿರುವುದರಿಂದ ಬಳ್ಳಾರಿ ಜಿಲ್ಲೆಯ ಜನರು ಸಿಡಿದೆದ್ದಿದ್ದಾರೆ. ಹಂಪಿ ಉತ್ಸವ ನಡೆಸಲೇಬೇಕೆಂದು ಗಣಿನಾಡಿನ ಜನ ಒತ್ತಾಯಿಸುತ್ತಿದ್ದಾರೆ. ಮಾತ್ರವಲ್ಲದೇ ಅನುದಾನ ಇಲ್ಲದಿದ್ದರೂ ಪರವಾಗಿಲ್ಲ ಚಂದಾ ಎತ್ತಿಯಾದ್ರೂ ಉತ್ಸವ ಮಾಡಿ ಅಂತಾ ಸಾರ್ವಜನಿಕರು ಪಟ್ಟು ಹಿಡಿದಿದ್ದಾರೆ. ಮಾಗಳ ಗ್ರಾಮದ ಗ್ರಾಮಸ್ಥರು ಚಂದಾ ಎತ್ತಿ ಹಣವನ್ನ ಗ್ರಾಮ ಪಂಚಾಯತಿ ಪಿಡಿಓಗೆ ಸಲ್ಲಿಸುವ ಮೂಲಕ ಆಕ್ರೋಶ ಹೊರಹಾಕುತ್ತಿದ್ದಾರೆ.
ಪ್ರತಿ ವರ್ಷ ಹಂಪಿ ಉತ್ಸವವನ್ನ ನಡೆಸುವ ಮೂಲಕ ನಮ್ಮ ನಾಡಿನ ಕಲೆ ಸಂಸ್ಕೃತಿ ಪರಂಪರೆಯನ್ನ ಎತ್ತಿ ಹಿಡಿಯಲಾಗುತ್ತಿತ್ತು. ಆದ್ರೆ ಈ ವರ್ಷ ಬರದ ನೆಪವೊಡ್ಡಿ ಬಳ್ಳಾರಿ ಜಿಲ್ಲೆಯ ಹಂಪಿ ಉತ್ಸವವನ್ನ ರದ್ದುಗೊಳಿಸುವ ಮೂಲಕ ಸರ್ಕಾರ ಮತ್ತೊಮ್ಮೆ ಉತ್ತರ ಕರ್ನಾಟಕಕ್ಕೆ ಅನ್ಯಾಯ ಮಾಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv