ಬೆಂಗಳೂರು: ಅಕ್ಟೋಬರ್ 25 ರಂದು ಬೆಂಗಳೂರಿನಲ್ಲಿ (Bengaluru) ಆಯೋಜನೆಗೊಂಡಿರುವ ಕಂಬಳವನ್ನು (Kambala) ನಿಲ್ಲಿಸುವಂತೆ ಕೋರಿ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಸಂಸ್ಥೆ ಹೈಕೋರ್ಟ್‌ನಲ್ಲಿ (High Court) ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದೆ.
ಹಿರಿಯ ವಕೀಲ ಧ್ಯಾನ್ ಚಿನ್ನಪ್ಪ ಅವರು ಮುಖ್ಯ ನ್ಯಾಯಮೂರ್ತಿ ಎನ್‌ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆವಿ ಅರವಿಂದ್ ಅವರ ಪೀಠದ ಮುಂದೆ ಸೋಮವಾರ ಅರ್ಜಿಯನ್ನು ತುರ್ತು ವಿಚಾರಣೆ ಮಾಡಬೇಕೆಂದು ಮನವಿ ಮಾಡಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಂಪ್ರದಾಯಿಕವಾಗಿ ನಡೆಯುವ ಈ ಕ್ರೀಡೆಯನ್ನು ಈ ತಿಂಗಳು ನಗರದಲ್ಲಿ ಆಯೋಜಿಸಲಾಗಿದ್ದು, ಇದಕ್ಕಾಗಿ ರಾಜ್ಯಾದ್ಯಂತ ಇರುವ ಕೋಣಗಳನ್ನು ಬೆಂಗಳೂರಿಗೆ ಕರೆತರಲಾಗುತ್ತದೆ. ಇದರಿಂದ ಕೋಣಗಳಿಗೆ ಹಿಂಸೆ ಆಗುತ್ತದೆ ಎಂದು ಪೀಠಕ್ಕೆ ತಿಳಿಸಿದರು. ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ಮಾಸ್ ರೇಪಿಸ್ಟ್ ಎಂದ ರಾಹುಲ್‌ಗೆ ರಿಲೀಫ್ – ಅರ್ಜಿ ವಜಾ, 25 ಸಾವಿರ ದಂಡ
ಈ ವರ್ಷದ ಜುಲೈನಲ್ಲಿ ಪಿಐಎಲ್ (PIL) ಸಲ್ಲಿಸಲಾಗಿದೆ. ಆದರೆ ಇಲ್ಲಿಯವರೆಗೆ ಅದನ್ನು ಪಟ್ಟಿ ಮಾಡಲು ಸಾಧ್ಯವಾಗಿಲ್ಲ. ಹೀಗಾಗಿ ತುರ್ತು ವಿಚಾರಣೆ ಕೋರಿ ಮನವಿ ಮಾಡಿದರು. ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಮಂಗಳವಾರ (ಅ.21 ರಂದು) ವಿಚಾರಣೆ ನಡೆಸುವುದಾಗಿ ಹೇಳಿತು.
ತಮಿಳುನಾಡು, ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಜಲ್ಲಿಕಟ್ಟು, ಕಂಬಳ ಮತ್ತು ಎತ್ತಿನ ಬಂಡಿ ಓಟಕ್ಕೆ ಅವಕಾಶ ನೀಡುವ ಕಾನೂನನ್ನು ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಕಳೆದ ವರ್ಷ ಮೇ ತಿಂಗಳಲ್ಲಿ ಎತ್ತಿಹಿಡಿದಿತ್ತು. ಈ ತೀರ್ಪಿನ ವಿರುದ್ಧ ಪೇಟಾ ಮರು ಪರಿಶೀಲನಾ ಅರ್ಜಿಯನ್ನು ಪೇಟಾ ಸಲ್ಲಿಸಿದೆ.